ADVERTISEMENT

ಜೀವ ವೈವಿಧ್ಯದ ಉಳಿವಿಗೆ ಅರಣ್ಯ ಸಿಬ್ಬಂದಿ ಕೊಡುಗೆ ಅಪಾರ: ಎಸ್‍ಪಿ ದೀಪನ್ ಎಂ.ಎನ್.

ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಎಸ್‍ಪಿ ದೀಪನ್ ಎಂ.ಎನ್.ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 4:24 IST
Last Updated 12 ಸೆಪ್ಟೆಂಬರ್ 2025, 4:24 IST
ಶಿರಸಿಯಲ್ಲಿ ನಡೆದ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ದೀಪನ್ ಎಂ.ಎನ್. ಪಾಲ್ಗೊಂಡು ಹುತಾತ್ಮರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು
ಶಿರಸಿಯಲ್ಲಿ ನಡೆದ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ದೀಪನ್ ಎಂ.ಎನ್. ಪಾಲ್ಗೊಂಡು ಹುತಾತ್ಮರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು   

ಶಿರಸಿ: ಅರಣ್ಯ ಅಧಿಕಾರಿಗಳು, ಸಿಬ್ಬಂದಿಯ ಅವಿರತ ಶ್ರಮದ ಫಲವಾಗಿ ಜೀವವೈವಿಧ್ಯತೆಯಲ್ಲಿ ಸಮತೋಲನ ಇಂದಿಗೂ ಉಳಿದುಕೊಂಡಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಹೇಳಿದರು.

ನಗರದ ಝೂ ವೃತ್ತದ ಮಕ್ಕಳ ಉದ್ಯಾನವನದಲ್ಲಿ ಗುರುವಾರ ನಡೆದ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹುತಾತ್ಮರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

‘ಅರಣ್ಯ ಇಲ್ಲದಿದ್ದರೆ ಜೀವವೈವಿಧ್ಯತೆ ಸಂಪೂರ್ಣ ಅಸಮತೋಲನ ಸ್ಥಿತಿಗೆ ತಲುಪುತ್ತದೆ. ಹೀಗಾಗಿ ಈ ಸಂಪತ್ತನ್ನು ನಿರಂತರವಾಗಿ ಕಾಪಾಡಬೇಕಾದ ಜವಾಬ್ದಾರಿಯನ್ನು ಸಾಕಷ್ಟು ಸವಾಲಿನ ನಡುವೆಯೂ ಅರಣ್ಯ ಸಿಬ್ಬಂದಿ ಪ್ರಾಮಾಣಿಕವಾಗಿ ಮಾಡುತ್ತಿರುವುದು ಶ್ಲಾಘನೀಯ’ ಎಂದರು. 

ADVERTISEMENT

‘ಅರಣ್ಯ ಸಿಬ್ಬಂದಿಯ ಕೆಲಸದ ಸ್ಥಿತಿ ಸುಲಭವಾದುದಲ್ಲ. ಅರಣ್ಯ ಪ್ರದೇಶದಲ್ಲಿ ಕೆಲಸ ಮಾಡುವಾಗ ಮೊಬೈಲ್ ಸಂಪರ್ಕ, ಭದ್ರತೆ, ಸಹಾಯ ಯಾವುದೂ ಇರುವುದಿಲ್ಲ. ವಿಪರೀತ ಮಳೆ, ಕಾಡುಪ್ರಾಣಿಗಳ ಉಪಟಳ, ಕಳ್ಳಸಾಗಾಣಿಕೆದಾರರ ಹಾವಳಿ ಇರುತ್ತದೆ. ಇಂಥ ಸ್ಥಿತಿಯಲ್ಲಿ ಅರಣ್ಯ ಹಾಗೂ ವನ್ಯಜೀವಿ ಸಂಪತ್ತನ್ನು ರಕ್ಷಿಸಿ ಜೀವವೈವಿಧ್ಯತೆ ಕಾಪಾಡಿಕೊಂಡು ಬಂದಿದ್ದಾರೆ’ ಎಂದರು. 

ಹಿರಿಯ ಸಿವಿಲ್ ನ್ಯಾಯಾಧೀಶೆ ಶಾರದಾದೇವಿ ಸಿ.ಹಟ್ಟಿ ಮಾತನಾಡಿ, ‘ಪ್ರಕೃತಿ ಸಮೃದ್ಧಿಯಿದ್ದರೆ ಮಾತ್ರ ನಮ್ಮ ಬದುಕಿಗೆ ಉಸಿರು, ಚೈತನ್ಯ ದೊರೆಯುತ್ತದೆ. ಈ ಪೃಕೃತಿ ಕೇವಲ ಮನುಷ್ಯನಿಗೆ ಮಾತ್ರ ಸೀಮಿತವಲ್ಲ. ಸಕಲ ಜೀವರಾಶಿಗಳಿಗೆ ಸಂಬಂಧಿಸಿದ್ದಾಗಿದೆ. ಆದರೆ ನಾವು ಕಾಡುಪ್ರಾಣಿಗಳ ವಾಸಸ್ಥಳವನ್ನು ಬಿಡದೇ ಅತಿಕ್ರಮಿಸುತ್ತಿರುವುದರಿಂದ ಅವು ನಾವಿರುವಲ್ಲಿ ಬರುವಂತಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಡಿಸಿಎಫ್ ಸಂದೀಪ ಎಚ್.ಸೂರ್ಯವಂಶಿ ಮಾತನಾಡಿ, ‘ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅರಣ್ಯ ಪ್ರದೇಶ ಇರುವುದರಿಂದ ಅದರ ರಕ್ಷಣೆಯ ಸವಾಲಿದೆ. ಸ್ವಾರ್ಥದ ಕಾರಣಕ್ಕೆ ಅರಣ್ಯ ಜಾಗ ಒತ್ತುವರಿಯಾಗುತ್ತಿದೆ. ಅದನ್ನು ಒಮ್ಮೆ ಕಳೆದುಕೊಂಡರೆ ಮತ್ತೆ ಸಿಗಲಾರದು. ಹೀಗಾಗಿ ಅರಣ್ಯ ಹಾಗೂ ವನ್ಯಜೀವಿ ಸಂಪತ್ತು ಕಾಪಾಡಿ ಜೀವವೈವಿಧ್ಯತೆ ಉಳಿಸುವ ದೊಡ್ಡ ಸವಾಲಿದೆ’ ಎಂದರು.

ಅರಣ್ಯ ಸಂಚಾರಿ ದಳದ ಡಿಸಿಎಫ್ ನಾಗಶೆಟ್ಟಿ ಆರ್.ಎಸ್, ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಡಿಸಿಎಫ್ ಮುಕುಂದಚಂದ್ರ ಇದ್ದರು. ಎಸಿಎಫ್ ಪವಿತ್ರಾ ವರದಿ ವಾಚಿಸಿದರು. ಡಿಆರ್‌ಎಫ್‌ಒ ಹನುಮಂತ ಇಳಿಗೇರ ನಿರೂಪಿಸಿದರು.

ಸರ್ಕಾರದ ನಿಯಮಾನುಸಾರ ಇಷ್ಟು ಮರಗಳ ಕಡಿದರೆ ಇಂತಿಷ್ಟು ಗಿಡಗಳನ್ನು ನೆಡಬೇಕು ಎಂಬುದಿದೆ. ಆದರೆ ನಿಯಮ ಅನುಷ್ಠಾನ ಆಗುತ್ತಿದೆಯಾ ಎಂಬುದು ಮುಖ್ಯ
ಶಾರದಾದೇವಿ ಸಿ.ಹಟ್ಟಿ ಹಿರಿಯ ಸಿವಿಲ್ ನ್ಯಾಯಾಧೀಶೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.