ಕಾರವಾರ: ‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಖರೀದಿಯಲ್ಲಿ ನಡೆದ ಅವ್ಯವಹಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಭಾಗಿಯಾಗಿದ್ದಾರೆ. ಮುಖ್ಯಮಂತ್ರಿ ಅವರು ಕೂಡಲೇ ರಾಜೀನಾಮೆ ಸಲ್ಲಿಸಿ ತನಿಖೆ ಎದುರಿಸಬೇಕು’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಎಸ್.ಹೆಗಡೆ ಒತ್ತಾಯಿಸಿದರು.
ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಿಯಮಕ್ಕೆ ವಿರುದ್ಧವಾಗಿ ನಿವೇಶನ ಹಂಚಿಕೆ ಮಾಡಲಾಗಿದೆ. ಕೋಟ್ಯಂತರ ಮೊತ್ತದ ಹಗರಣ ನಡೆದಿರುವ ಶಂಕೆ ಇದೆ. ಹಗರಣದಿಂದ ಪಾರಾಗುವ ದೃಷ್ಟಿಯಿಂದ ಎಸ್.ಐ.ಟಿ ತನಿಖೆಗೆ ನೀಡಲು ಸರ್ಕಾರ ಮುಂದಾಗಿದೆ. ಎಸ್.ಐ.ಟಿ ತನಿಖೆ ಬದಲು ಸಿಬಿಐ ತನಿಖೆಗೆ ಒಪ್ಪಿಸಬೇಕು’ ಎಂದರು.
‘ಸಮಾಜವಾದ ಸಿದ್ಧಾಂತ ಪ್ರತಿಪಾದಿಸುವ ಸಿದ್ದರಾಮಯ್ಯ ಮುಡಾ ನಿವೇಶನಗಳನ್ನು ಬಡವರಿಗೆ ಹಂಚಿಕೆ ಮಾಡಲಿ’ ಎಂದು ಸವಾಲೆಸೆದರು.
‘ಜಿಲ್ಲೆಯಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿಗೆ ಅಡ್ಡಿಯಾಗಿದೆ. ಈ ಬಗ್ಗೆ ಸ್ವತಃ ಕಾಂಗ್ರೆಸ್ ಶಾಸಕರು, ಸಚಿವರೇ ಅಸಮಾಧಾನ ತೋಡಿಕೊಳ್ಳುತ್ತಿದ್ದಾರೆ’ ಎಂದರು.
‘ಗ್ಯಾರಂಟಿ ಯೋಜನೆಗೆ ಸರ್ಕಾರ ಅನುದಾನಗಳನ್ನು ದುರ್ಬಳಕೆ ಮಾಡುತ್ತಿದೆ. ಪರಿಶಿಷ್ಟ ಸಮುದಾಯಕ್ಕೆ ಮೀಸಲಿಟ್ಟ ಹಣ ಗ್ಯಾರಂಟಿ ಯೋಜನೆ ನೆಪದಲ್ಲಿ ಬಳಕೆಯಾಗಿದ್ದು, ಪರಿಶಿಷ್ಟರ ಕಲ್ಯಾಣ ಯೋಜನೆಗಳನ್ನು ನಿರ್ಲಕ್ಷಿಸಲಾಗಿದೆ’ ಎಂದರು.
ಪ್ರಮುಖರಾದ ಗಜಾನನ ಗುನಗಾ, ಜಗದೀಶ ನಾಯಕ, ಸುಭಾಶ ಗುನಗಿ, ಕಿಶನ್ ಕಾಂಬ್ಳೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.