ಶಿರಸಿ: ಧರ್ಮಸ್ಥಳದ ಕುರಿತು ಅಪಪ್ರಚಾರ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಪ್ರತ್ಯೇಕ ಎಸ್ಐಟಿ ರಚಿಸಿ ತನಿಖೆ ಆರಂಭಿಸಬೇಕು ಎಂದು ಬಿಜೆಪಿ ರಾಜ್ಯ ವಕ್ತಾರ ಮೋಹನವಿಶ್ವ ಆಗ್ರಹಿಸಿದರು.
ನಗರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವುಗಳ ವಿಚಾರದಲ್ಲಿ ಎಸ್ಐಟಿ ರಚನೆಗೆ ಬಿಜೆಪಿ ಸಹಕಾರ ನೀಡಿತ್ತು. ಆದರೆ ಎಸ್ಐಟಿ ತನಿಖೆ ವೇಗ, ದಿಕ್ಕು ನೋಡಿದರೆ ಇದೊಂದು ಕಾಂಗ್ರೆಸ್ ಷಡ್ಯಂತ್ರದಂತೆ ಕಾಣುತ್ತಿದೆ ಎಂದು ಟೀಕಿಸಿದರು.
‘ಅನಾಮಿಕ ವ್ಯಕ್ತಿಯನ್ನು ಪೊಲೀಸ್ ಕಸ್ಟಡಿಯಿಂದ ಹೊರಗುಳಿಯಲು ಅವಕಾಶ ನೀಡಿದ್ದು ಏಕೆ? ತನಿಖೆ ನಡೆಯುವ ವೇಳೆ ಬೇಕಾಬಿಟ್ಟಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಟ್ಟವರ ವಿರುದ್ಧ ಕ್ರಮವಾಗಿಲ್ಲ ಏಕೆ? ಎಂದು ಪ್ರಶ್ನಿಸಿದ ಅವರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸ್ವತಃ ಇದೊಂದು ಷಡ್ಯಂತ್ರ ಎಂದರೂ ಈವರೆಗೆ ಯಾವುದೇ ಕ್ರಮವಾಗಿಲ್ಲ. ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ಬಂದಾಗ ಬಿಜೆಪಿ ಬೀದಿಗಿಳಿದು ಹೋರಾಡುತ್ತದೆ ಎಂದ ಅವರು, ಕಾಂಗ್ರೆಸ್ ಹೈಕಮಾಂಡ್ ಹೇಳುವಂತೆ ಇಲ್ಲಿ ನಡೆಯುತ್ತಿದೆ. ಧರ್ಮಸ್ಥಳ ವಿಚಾರದಲ್ಲೂ ಅದೇ ಮರುಕಳಿಸುತ್ತಿದೆ ಎಂಬ ಸಂಶಯ ಮೂಡಿದೆ’ ಎಂದರು.
ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಮಾತನಾಡಿ, ‘ಧರ್ಮಸ್ಥಳದ ಕುರಿತು ಅಪಪ್ರಚಾರ ಮಾಡುವವರ ವಿರುದ್ಧ ಬಜೆಪಿ ಪ್ರತಿಭಟನೆ ನಡೆಸಲಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಆ.26ರಂದು ಪ್ರತಿ ತಾಲ್ಲೂಕಿನಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗುವುದು’ ಎಂದರು.
ಪಕ್ಷದ ಪದಾಧಿಕಾರಿಗಳಾದ ಆನಂದ ಸಾಲೇರ, ಡೊನಿ ಡಿಸೋಜಾ, ಶರ್ಮಿಳಾ ಮಾದನಗೇರಿ, ರವಿಚಂದ್ರ ಶೆಟ್ಟಿ, ಸದಾನಂದ ಭಟ್ ಇತರರಿದ್ದರು.
ಉತ್ತರ ಕನ್ನಡ ಜಿಲ್ಲೆ ಪರಿಸರಕ್ಕೆ ಧಕ್ಕೆಯಾಗುವ ಯಾವುದೇ ವಿಷಯಕ್ಕೆ ಜಿಲ್ಲಾ ಬಿಜೆಪಿಯ ಬೆಂಬಲವಿಲ್ಲ. ಹಾಗಾಗಿ ಅವೈಜ್ಞಾನಿಕ ಬೇಡ್ತಿ ವರದಾ ನದಿ ಜೋಡಣೆ ವಿಷಯ ಪ್ರಸ್ತಾಪಿಸಿರುವ ಸಂಸದ ಬಸವರಾಜ ಬೊಮ್ಮಾಯಿ ಅವರಿಗೂ ಮನವರಿಕೆ ಮಾಡುವ ಕಾರ್ಯ ಮಾಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಹರಿಪ್ರಕಾಶ ಕೋಣೆಮನೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.