ADVERTISEMENT

‘ರೈತರ ಆದಾಯ ಹೆಚ್ಚಿಸಲು ಸಮರ್ಥ ಕಾಯ್ದೆ’

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2020, 12:29 IST
Last Updated 22 ಸೆಪ್ಟೆಂಬರ್ 2020, 12:29 IST
ವೆಂಕಟೇಶ ನಾಯಕ
ವೆಂಕಟೇಶ ನಾಯಕ   

ಕಾರವಾರ: ‘ರೈತರ ಉತ್ಪನ್ನ ಮತ್ತು ವಾಣಿಜ್ಯ ಕಾಯ್ದೆ 2020, ರೈತರ ಬೆಲೆ ಭರವಸೆ ಮತ್ತು ಸೇವಾ ಒಪ್ಪಂದ ಮಸೂದೆಗಳು ಕ್ರಾಂತಿಕಾರಿಯಾಗಿವೆ. ರೈತರ ಆದಾಯವನ್ನು ಹೆಚ್ಚಿಸುವಲ್ಲಿ ಸಮರ್ಥವಾಗಿವೆ’ ಎಂದು ಬಿ.ಜೆ.ಪಿ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ನಾಯಕ ಅಭಿಪ್ರಾಯಪಟ್ಟರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಮೊದಲು ರೈತರು ಕೃಷಿ ಉತ್ಪಾದನೆಯನ್ನು ಕೃಷಿ ಉತ್ಪನ್ನ ಮಾರುಕಟ್ಟೆಯ (ಎ.ಪಿ.ಎಂ.ಸಿ) ಮೂಲಕವೇ ಮಾರಾಟ ಮಾಡಬೇಕಿತ್ತು. ಇದರಿಂದ ದಲ್ಲಾಳಿಗಳು ನಿಗದಿ ಮಾಡಿದ್ದೇ ಅಂತಿಮ ದರವಾಗುತ್ತಿತ್ತು. ಆದರೆ, ಈ ಕಾಯ್ದೆಯ ತಿದ್ದುಪಡಿಯ ಬಳಿಕ ರೈತರು ಯಾವ ರಾಜ್ಯದಲ್ಲಿ ಬೇಕಾದರೂ ತಮಗೆ ಬೇಕಾದವರಿಗೆ ಮಾರಾಟ ಮಾಡಬಹುದು. ಎ.ಪಿ.ಎಂ.ಸಿ. ವ್ಯವಸ್ಥೆಯಲ್ಲೂ ವ್ಯವಹರಿಸಲು ಅವಕಾಶವಿದೆ’ ಎಂದು ತಿಳಿಸಿದರು.

ಪಕ್ಷದ ರೈತ ಮೋರ್ಚಾದ ಜಿಲ್ಲಾ ಘಟಕದ ಅಧ್ಯಕ್ಷ ಮಹೇಶ ಹೊಸಕೊಪ್ಪ ಮಾತನಾಡಿ, ‘ಎ.ಪಿ.ಎಂ.ಸಿ.ಯಂತಹ ವ್ಯಾಪಾರದ ಮಂಡಿ ಸಂಸ್ಕೃತಿ ಬ್ರಿಟಿಷರ ಕಾಲದ್ದಾಗಿದೆ. ಈ ತಿದ್ದುಪಡಿಯನ್ನು ಕಾಂಗ್ರೆಸ್‌ನವರು ವಿರೋಧಿಸುತ್ತಾರೆ. ಅವರಿಗೆ ರೈತರ ಅಭಿವೃದ್ಧಿ ಬೇಕಾಗಿಲ್ಲ. ದೇಶದ ಭವಿಷ್ಯಕ್ಕಾಗಿ ದುಡಿಯುತ್ತಿರುವ ರೈತರಿಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಮಾರುಕಟ್ಟೆಯಲ್ಲಿ ಮುಕ್ತ ಅವಕಾಶ ನೀಡಿದೆ. ಆದ್ದರಿಂದ ರೈತರು ವಿರೋಧ ಪಕ್ಷದವರ ಸುಳ್ಳಿಗೆ ಬೆಲೆ ಕೊಡಬಾರದು’ ಎಂದು ಹೇಳಿದರು.

ADVERTISEMENT

ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಘಟಕದ ವಕ್ತಾರ ನಾಗರಾಜ ನಾಯಕ, ಪ್ರಮುಖರಾದ ಅಶೋಕ, ರಾಜೇಶ ಸಿದ್ದರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.