ADVERTISEMENT

ಅಡಿಕೆ, ಗೋವಿನಜೋಳ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಆಗ್ರಹ

ಬಿಜೆಪಿ ರೈತ ಮೋರ್ಚಾ ವತಿಯಿಂದ ಪ್ರತಿಭಟನಾ ಜಾಥಾ

​ಪ್ರಜಾವಾಣಿ ವಾರ್ತೆ
Published 22 ಜನವರಿ 2025, 14:00 IST
Last Updated 22 ಜನವರಿ 2025, 14:00 IST
ಅಡಿಕೆ, ಗೋವಿನ ಜೋಳ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಬಿಜೆಪಿ ಉತ್ತರ ಕನ್ನಡ ಜಿಲ್ಲಾ ರೈತ ಮೋರ್ಚಾ ನೀಡಿದ ಮನವಿಯನ್ನು ಯಲ್ಲಾಪುರದ ತಾಲ್ಲೂಕು ಆಡಳಿತ ಸೌಧದಲ್ಲಿ ಉಪವಿಭಾಗಾಧಿಕಾರಿ ಕಾವ್ಯಾರಾಣಿ ಸ್ವೀಕರಿಸಿದರು
ಅಡಿಕೆ, ಗೋವಿನ ಜೋಳ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಬಿಜೆಪಿ ಉತ್ತರ ಕನ್ನಡ ಜಿಲ್ಲಾ ರೈತ ಮೋರ್ಚಾ ನೀಡಿದ ಮನವಿಯನ್ನು ಯಲ್ಲಾಪುರದ ತಾಲ್ಲೂಕು ಆಡಳಿತ ಸೌಧದಲ್ಲಿ ಉಪವಿಭಾಗಾಧಿಕಾರಿ ಕಾವ್ಯಾರಾಣಿ ಸ್ವೀಕರಿಸಿದರು   

ಯಲ್ಲಾಪುರ: ವಿವಿಧ ಕಾರಣಗಳಿಂದ ಸಂಕಷ್ಟಕ್ಕೆ ಸಿಲುಕಿರುವ ಅಡಿಕೆ ಹಾಗೂ ಗೋವಿನ ಜೋಳ ಬೆಳೆಗಾರರ ಸಮಸ್ಯೆಗಳಿಗೆ ಸರ್ಕಾರ ಪರಿಹಾರ ಒದಗಿಸಿ ಕೊಡಬೇಕು ಎಂದು ಆಗ್ರಹಿಸಿ ಬಿಜೆಪಿ ಉತ್ತರ ಕನ್ನಡ ಜಿಲ್ಲಾ ರೈತ ಮೋರ್ಚಾ ಕಾರ್ಯಕರ್ತರು ಬುಧವಾರ ಪಟ್ಟಣದ ಬಸ್ ನಿಲ್ದಾಣ ವೃತ್ತದಿಂದ ತಾಲ್ಲೂಕು ಆಡಳಿತ ಸೌಧದವರೆಗೆ ಬೃಹತ್ ಪ್ರತಿಭಟನಾ ಜಾಥಾ ನಡೆಸಿ ಉಪವಿಭಾಗಾಧಿಕಾರಿ ಕಾವ್ಯಾರಾಣಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಅಡಿಕೆ ಕೊಳೆರೋಗ ಮತ್ತು ಎಲೆಚುಕ್ಕಿ ರೋಗದಿಂದ ಬೆಳೆಹಾನಿ ಆಗಿದ್ದು, ಪ್ರಸಕ್ತ ಸಾಲಿನಲ್ಲಿ ಬೆಳೆ ಸಾಲ ಮನ್ನಾ ಮಾಡಬೇಕು. ಕೊಳೆರೋಗ ನಿರ್ವಹಣೆಗೆ ಬೋರ್ಡೋ ದ್ರಾವಣ ಸಿಂಪಡಣೆ ಅನಿವಾರ್ಯವಾಗಿದ್ದು, ಮೈಲುತುತ್ತಕ್ಕೆ ಹಾಗೂ ರೋಗನಿರ್ವಣೆಗೆ ಅಗತ್ಯವಾದ ಔಷಧಗಳ ಖರೀದಿಗೆ ನೀಡುವ ಸಹಾಯಧವನ್ನು ಹೆಚ್ಚಳ ಮಾಡಬೇಕು. ಮಳೆಗಾಲದ ಪೂರ್ವದಲ್ಲಿಯೇ ಸಹಾಯಧನ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು, ತೋಟಗಾರಿಕೆ ಯಾಂತ್ರೀಕರಣಕ್ಕಾಗಿ ಫೈಬರ್ ದೋಟಿ, ಮೋಟೋ ಕಾರ್ಟ್, ಸ್ಪ್ರೇಯರ್, ಮಿನಿ ಟ್ರ‍್ಯಾಕ್ಟರ್ ಖರೀದಿಗೆ ಸಹಾಯಧನ ಪಡೆಯಲು ಇರುವ ತೊಡಕುಗಳನ್ನು ಸರಿಪಡಿಸಿ ಹೆಚ್ಚಿನ ರೈತರು ಯೋಜನೆಯ ಪ್ರಯೋಜನ ಪಡೆಯುವಂತೆ ಮಾಡಬೇಕು, ಬೆಳೆ ಸಾಲದ ಮಿತಿ ಹಾಗೂ ಮಾಧ್ಯಮಿಕ ಸಾಲದ ಮಿತಿಯನ್ನು ಹೆಚ್ಚಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದ್ದಾರೆ.

‘ವನ್ಯಮೃಗಗಳಿಂದ ಹಾನಿ ಸಂಭವಿಸಿದ್ದಲ್ಲಿ ರೈತರಿಗೆ ತ್ವರಿತವಾಗಿ ಪರಿಹಾರ ನೀಡುವಂತಾಗಬೇಕು. ಲಭ್ಯವಿರುವ ಮಳೆ ಮಾಪನದ ಮಾಹಿತಿಯ ಆಧಾರದಲ್ಲಿ ಕೂಡಲೇ ಉತ್ತರ ಕನ್ನಡ ಜಿಲ್ಲೆಯ ರೈತರಿಗೆ ವಿಮೆ ಬಿಡುಗಡೆ ಮಾಡಬೇಕು. ಎಲೆಚುಕ್ಕಿ ರೋಗದ ವಸ್ತುನಿಷ್ಠ ಸಮೀಕ್ಷೆ ಮಾಡಿ, ಅದರಿಂದಾದ ಹಾನಿಗೆ ಪ್ರಸಕ್ತ ಸಾಲಿನ ಬಜೆಟ್ ಅಧಿವೇಶನದಲ್ಲಿ ಪರಿಹಾರದ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಬೇಕು. ವೈಜ್ಞಾನಿಕ ಸಂಶೋಧನೆಯ ಅಗತ್ಯ ಇರುವುದರಿಂದ ಜಿಲ್ಲೆಯಲ್ಲಿ ಸಂಶೋಧನಾ ಕೇಂದ್ರ ಸ್ಥಾಪಿಸಬೇಕು, ಅತಿವೃಷ್ಟಿಯಿಂದ ಗೋವಿನಜೋಳ ಮತ್ತು ಭತ್ತ ಬೆಳೆಹಾನಿಯಾಗಿದೆ. ಕೀಟಬಾಧೆಯಿಂದಾಗಿ ನಿರೀಕ್ಷಿತ ಬೆಳೆ ಬಂದಿಲ್ಲ. ಆದರೂ ಬೆಳೆಹಾನಿಯ ಸಮರ್ಪಕ ಸಮೀಕ್ಷೆ ಈವರೆಗೂ ಆಗಿಲ್ಲ. ಪ್ರತಿಯೊಬ್ಬ ರೈತನಿಗೂ ಪರಿಹಾರ ಸಿಗುವ ನಿಟ್ಟಿನಲ್ಲಿ ಸಮೀಕ್ಷೆ ಮಾಡಿ, ಸೂಕ್ತ ಪ್ಯಾಕೇಜ್ ಬಿಡುಗಡೆ ಮಾಡಬೇಕು. ಮೈಕ್ರೋ ಜೆಟ್ ಸೇರಿದಂತೆ ನೀರಾವರಿಗೆ ರಾಜ್ಯ ಸರ್ಕಾರವು ಯಾವುದೇ ನೆಪ ಹೇಳದೇ, ತ್ವರಿತವಾಗಿ ಸಹಾಯಧನ ಬಿಡುಗಡೆ ಮಾಡಬೇಕು’ ಎಂದು ಪ್ರತಿಭಟನಕಾರರು ಮನವಿ ಮೂಲಕ ಆಗ್ರಹಿಸಿದರು.

ADVERTISEMENT

ರೈತಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ನವೀನಕುಮಾರ್, ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ನಾಯ್ಕ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಎಸ್. ಹೆಗಡೆ, ಮಾಧ್ಯಮ ವಕ್ತಾರ ಹರಿಪ್ರಕಾಶ ಕೋಣೆಮನೆ, ಜಿಲ್ಲಾ ಘಟಕದ ಉಪಾಧ್ಯಕ್ಷ ಎಲ್.ಟಿ. ಪಾಟೀಲ್, ಮಂಡಲಾಧ್ಯಕ್ಷ ಪ್ರಸಾದ ಹೆಗಡೆ, ಪ್ರಮುಖರಾದ ಗುರುಪ್ರಸಾದ ಹೆಗಡೆ, ಶಿವಾಜಿ ನರಸಾನಿ ಇದ್ದರು.

ಮನವಿ ಸ್ವೀಕರಿಸಲು ತಹಶೀಲ್ದಾರ್‌ ಆಡಳಿತ ಸೌಧದಲ್ಲಿ ಉಪಸ್ಥಿತರಿಲ್ಲದ ಕಾರಣ ಹಿರಿಯ ಅಧಿಕಾರಿಗಳು ಬಂದು ಮನವಿ ಸ್ವೀಕರಿಸಬೇಕು ಎಂದು ಪ್ರತಿಭಟನಕಾರರು ಪಟ್ಟು ಹಿಡಿದು ಕೆಲ ಕಾಲ ಚಾಪೆಹಾಸಿ ಮಲಗಿದರು. ಉಪವಿಭಾಗಾಧಿಕಾರಿ ಕಾವ್ಯಾರಾಣಿ ಬಂದು ಮನವಿ ಸ್ವೀಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.