ADVERTISEMENT

ಬಿಜೆಪಿಗರು ಬಡಿಗೆ ಹಿಡಿದು ಠಾಣೆಗೆ ನುಗ್ಗುವ ದಿನ ದೂರವಿಲ್ಲ: ವಿಜಯೇಂದ್ರ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2025, 3:44 IST
Last Updated 12 ಏಪ್ರಿಲ್ 2025, 3:44 IST
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಜನಾಕ್ರೋಶ ಯಾತ್ರೆ ಅಂಗವಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕಾರ್ಯಕರ್ತರೊಂದಿಗೆ ಕಾಲ್ನಡಿಗೆಯಲ್ಲಿ ಸಾಗಿದರು
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಜನಾಕ್ರೋಶ ಯಾತ್ರೆ ಅಂಗವಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕಾರ್ಯಕರ್ತರೊಂದಿಗೆ ಕಾಲ್ನಡಿಗೆಯಲ್ಲಿ ಸಾಗಿದರು   

ಕಾರವಾರ/ಯಲ್ಲಾಪುರ: ‘ರಾಜ್ಯ ಸರ್ಕಾರದ ಕುಮ್ಮಕ್ಕಿನಿಂದ ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಯಂತಾಗಿವೆ. ಬಿಜೆಪಿ ಕಾರ್ಯಕರ್ತರ ವಿರುದ್ಧ ಕಿರುಕುಳ ಮಿತಿಮೀರಿದ್ದು, ಕಾರ್ಯಕರ್ತರು ಬಡಿಗೆ ಹಿಡಿದು ಠಾಣೆಗೆ ನುಗ್ಗುವ ದಿನ ದೂರವಿಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಎಚ್ಚರಿಕೆ ನೀಡಿದರು.

ಯಲ್ಲಾಪುರದ ವೈಟಿಎಸ್ಎಸ್ ಮೈದಾನದಲ್ಲಿ ಶುಕ್ರವಾರ ನಡೆದ ಜನಾಕ್ರೋಶ ಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಅವರು, ‘ಸರ್ಕಾರದ ನಡೆ ಟೀಕಿಸುವವರು, ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಾಕುವವರ ವಿರುದ್ಧ ಪ್ರಕರಣ ದಾಖಲಿಸಿ ಬೆದರಿಸುವ ಕೆಲಸ ನಡೆದಿದೆ’ ಎಂದು ಆರೋಪಿಸಿದರು.

‘ಬೆದರಿಕೆಗೆ ಕಾರ್ಯಕರ್ತರು ಹೆದರುವುದಿಲ್ಲ. ಅವರ ಸಹನೆ ಮಿತಿಮೀರಲು ಅವಕಾಶ ನೀಡದಿರಿ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಪೊಲೀಸ್ ಸಿಬ್ಬಂದಿಗೆ ಮಾಸಿಕ ವೇತನ ನೀಡಲು ವಿಳಂಬ ಆಗುತ್ತಿದೆ ಎಂಬುದನ್ನು ಪೊಲೀಸ್ ಅಧಿಕಾರಿಗಳು ನೆನಪಿನಲ್ಲಿಡಿ’ ಎಂದರು.

ADVERTISEMENT

‘ಯಲ್ಲಾಪುರದ ಶಾಸಕರು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾದ ಯೋಜನೆಗಳ ಕಾಮಗಾರಿಗಳನ್ನೇ ಇಂದಿಗೂ ಉದ್ಘಾಟಿಸುತ್ತಿದ್ದಾರೆ. ಈ ಕ್ಷೇತ್ರದ ಕಾರ್ಯಕರ್ತರು ಹೆದರುವ ಅಗತ್ಯವಿಲ್ಲ. ಯಾವುದೇ ಕ್ಷಣ ವಿಧಾನಸಭೆಗೆ ಚುನಾವಣೆ ಎದುರಾದರೂ ಯಲ್ಲಾಪುರ ಕ್ಷೇತ್ರದಿಂದ ಸಾಮಾನ್ಯ ಕಾರ್ಯಕರ್ತರೊಬ್ಬರನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಂಡು ಬರುತ್ತೇನೆ’ ಎಂದು ಸಮಾವೇಶದಲ್ಲಿ ಪಾಲ್ಗೊಳ್ಳದ ಶಾಸಕ ಶಿವರಾಮ ಹೆಬ್ಬಾರ ಅವರ ಹೆಸರು ಹೇಳದೇ ಪರೋಕ್ಷವಾಗಿ ಎಚ್ಚರಿಕೆ ನೀಡಿದರು.

‘ಮುಖ್ಯಮಂತ್ರಿ ಕುರ್ಚಿ ಅಲ್ಲಾಡಿದಾಗ, ರಾಜ್ಯದಲ್ಲಿ ಬೆಲೆ ಏರಿಕೆ ವಿಚಾರ, ಸರ್ಕಾರದ ದುರಾಡಳಿತ ಚರ್ಚೆಯಾದಾಗಲೆಲ್ಲ,  ಜಾತಿ ಜನಗಣತಿ ವರದಿ ವಿಷಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮುನ್ನೆಲೆಗೆ ತರುತ್ತಾರೆ. ಇದು ಅವರ ಪಾಲಿಗೆ ಬೆದರು ಗೊಂಬೆಯಂತಾಗಿದೆ’ ಎಂದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್, ಮುಖಂಡ ನಳಿನ್‌ಕುಮಾರ್ ಕಟೀಲ್ ಇದ್ದರು.

ಜನಾಕ್ರೋಶ ಯಾತ್ರೆ ಆರಂಭಗೊಂಡ ಮೂರೆ ದಿನಕ್ಕೆ ರಾಜ್ಯ ಸರ್ಕಾರಕ್ಕೆ ಅದರ ಬಿಸಿ ತಟ್ಟಿದೆ. ಹೀಗಾಗಿಯೇ ಡಿ.ಕೆ.ಶಿವಕುಮಾರ್ ಏ.17 ರಂದು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸಲು ಕರೆ ನೀಡಿದ್ದಾರೆ.
-ಬಿ.ವೈ.ವಿಜಯೇಂದ್ರ ಅಧ್ಯಕ್ಷ ಬಿಜೆಪಿ ರಾಜ್ಯ ಘಟಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.