ADVERTISEMENT

ಶಿರಸಿ | ಮಹಿಳಾ ಆಯೋಗ ಕಾಂಗ್ರೆಸ್ ಸರ್ಕಾರದ ಏಜೆಂಟ್: ಸಿ.ಮಂಜುಳಾ ಟೀಕೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 5:24 IST
Last Updated 12 ಡಿಸೆಂಬರ್ 2025, 5:24 IST
ಶಿರಸಿ ನಗರದ ದೀನದಯಾಳ ಸಭಾಭವನದಲ್ಲಿ ಆಯೋಜಿಸಿದ್ದ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಕಾರ್ಯಕಾರಿಣಿಯಲ್ಲಿ ಸಿ. ಮಂಜುಳಾ ಮಾತನಾಡಿದರು 
ಶಿರಸಿ ನಗರದ ದೀನದಯಾಳ ಸಭಾಭವನದಲ್ಲಿ ಆಯೋಜಿಸಿದ್ದ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಕಾರ್ಯಕಾರಿಣಿಯಲ್ಲಿ ಸಿ. ಮಂಜುಳಾ ಮಾತನಾಡಿದರು    

ಶಿರಸಿ: ‘ರಾಜ್ಯದ ಮಹಿಳಾ ಆಯೋಗವು ಕಾಂಗ್ರೆಸ್ ಸರ್ಕಾರದ ಏಜೆಂಟ್ ಆಗಿ ಕಾರ್ಯಮಾಡುವುದನ್ನು ಬಿಟ್ಟು ಮಹಿಳೆಯರ ಪರ ನಿಲ್ಲುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಒತ್ತಾಯ ಮಾಡಬೇಕಿದೆ’ ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷೆ ಸಿ. ಮಂಜುಳಾ ಹೇಳಿದರು.

ನಗರದ ದೀನದಯಾಳ ಸಭಾಭವನದಲ್ಲಿ ಗುರುವಾರ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಉದ್ಘಾಟಿಸಿ ಅವರು ಮಾತನಾಡಿದರು.

‘ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ರಾಜ್ಯದಾದ್ಯಂತ ಅತ್ಯಾಚಾರ, ಕೊಲೆ, ಬಾಣಂತಿಯರ ಸಾವು ಮತ್ತು ಪೋಕ್ಸೊ ಪ್ರಕರಣಗಳು ಹೆಚ್ಚಳವಾಗಿದ್ದು, ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಮಹಿಳೆಯರಿಗೆ ಸುರಕ್ಷತೆ ಒದಗಿಸುವಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಗೃಹ ಇಲಾಖೆಗಳು ಸಂಪೂರ್ಣವಾಗಿ ವಿಫಲವಾಗಿವೆ’ ಎಂದು ಟೀಕಿಸಿದರು.

ADVERTISEMENT

‘ಹಾನಗಲ್ಲಿನ ಗ್ಯಾಂಗ್ ರೇಪ್ ಪ್ರಕರಣ, ಮಾಸೂರಿನಲ್ಲಿ ಸ್ವಾತಿ ಹತ್ಯೆ ಪ್ರಕರಣ, ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ, ಅಂಜಲಿ ಅಂಬಿಗೇರ ಕೊಲೆ ನಡೆದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತ್ವರಿತ ಕೋರ್ಟ್ ರಚಿಸುವ ಭರವಸೆ ನೀಡಿದ್ದರು. ಆದರೆ, ವರ್ಷಗಳೇ ಗತಿಸಿದರೂ ತ್ವರಿತ ಕೋರ್ಟ್ ಸ್ಥಾಪನೆ ಇನ್ನೂವರೆಗೂ ಆಗಿಲ್ಲ. ಇಂಥ ವಿಫಲತೆಗಳನ್ನು ಬಿಜೆಪಿ ಕಾರ್ಯಕರ್ತರು ಜನತೆ ಎದುರು ತೆರೆದಿಡಬೇಕು’ ಎಂದರು. 

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಎಸ್. ಹೆಗಡೆ ಮಾತನಾಡಿ, ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಹೀಗಾಗಿ ಸಂಘಟನಾತ್ಮಕವಾಗಿ ಮಹಿಳಾ ಘಟಕ ಬಲಪಡಿಸುವ ಅನಿವಾರ್ಯತೆ ಇದೆ. ಮಹಿಳಾ ಸುರಕ್ಷತೆ ಸಂಬಂಧ ಬಿಜೆಪಿಯು ಬೂತ್ ಮಟ್ಟದಲ್ಲಿ ಅರಿವು ಮೂಡಿಸಬೇಕಿದೆ. ಕಾಂಗ್ರೆಸ್ ಸರ್ಕಾರದ ವಿಫಲತೆಯನ್ನು ತೆರೆದಿಡುವ ಕೆಲಸ ಆಗಬೇಕಿದೆ’ ಎಂದರು. 

ಪಕ್ಷದ ಪದಾಧಿಕಾರಿಗಳಾದ ರೇಖಾ ಹೆಗಡೆ, ಗುರುಪ್ರಸಾದ ಹರ್ತೆಬೈಲ, ಶಿಲ್ಪಾ ನಾಯ್ಕ, ಅನಸೂಯಾ ಹೆಗಡೆ, ಶೋಭಾ ಗೌಡ, ಸುಜಾತಾ, ಶಿವಾನಿ ಭಟ್ಕಳ ಇದ್ದರು.

ಬಿಜೆಪಿ ಜಾರಿ ಮಾಡಿದ್ದ ಜನಪರ ರೈತಪರ ಯೋಜನೆಗಳನ್ನು ಸ್ಥಗಿತಗೊಳಿಸುವ ಮೂಲಕ ರಾಜಕೀಯ ಹಗೆತನಕ್ಕೆ ಕಾಂಗ್ರೆಸ್ ಇಳಿದಿದೆ
ಎನ್.ಎಸ್. ಹೆಗಡೆ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ
ಬೀದಿಗಿಳಿದು ಹೋರಾಟ
ರಾಜ್ಯವನ್ನು ಆರ್ಥಿಕವಾಗಿ ದಿವಾಳಿ ಅಂಚಿಗೆ ತಂದಿರುವ ಕೀರ್ತಿ ಕಾಂಗ್ರೆಸ್‍ಗೆ ಸಲ್ಲುತ್ತದೆ. ಹೀಗಾಗಿ ಇಂಥ ಜನವಿರೋಧಿ ಸರ್ಕಾರದ ವಿರುದ್ಧ ಬಿಜೆಪಿ ಮಹಿಳಾ ಮೋರ್ಚಾ ಬೀದಿಗಿಳಿದು ಹೋರಾಡಬೇಕಿದೆ. ಇಂದು ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ಜನಪ್ರತಿನಿಧಿಗಳು ಜನತೆಗೆ ಸಿಗದಂತೆ ಓಡಾಡುತ್ತಿದ್ದಾರೆ. ಇದು ಕಾಂಗ್ರೆಸ್‌ನ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ’ ಎಂದು ಸಿ. ಮಂಜುಳಾ ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.