ADVERTISEMENT

ದಾಂಡೇಲಿ | 'ಗಮನಸೆಳೆವ ಮಳಿಗೆ: ಪುಸ್ತಕ ಮಾರಾಟಕ್ಕೆ ‘ದರ’ ಇಲ್ಲ '

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2025, 2:24 IST
Last Updated 15 ಡಿಸೆಂಬರ್ 2025, 2:24 IST
ದಾಂಡೇಲಿಯಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದಲ್ಲಿ ಸುಮುಖಾನಂದ ಜಲವಳ್ಳಿ ಅವರು ತೆರೆದ ಮಳಿಗೆಯಲ್ಲಿ ಪುಸ್ತಕ ಖರೀದಿಸುತ್ತಿರುವ ಓದುಗರು 
ದಾಂಡೇಲಿಯಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದಲ್ಲಿ ಸುಮುಖಾನಂದ ಜಲವಳ್ಳಿ ಅವರು ತೆರೆದ ಮಳಿಗೆಯಲ್ಲಿ ಪುಸ್ತಕ ಖರೀದಿಸುತ್ತಿರುವ ಓದುಗರು    

ದಾಂಡೇಲಿ: ಇಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತೆರೆಯಲಾದ ವಿವಿಧ ಪುಸ್ತಕ ಮಳಿಗೆಗಳ ಪೈಕಿ ಹೊನ್ನಾವರ ತಾಲ್ಲೂಕಿನ ಅರೆಅಂಗಡಿಯ ಸುಮುಖಾನಂದ ಜಲವಳ್ಳಿ ಅವರ ಮಳಿಗೆ ವಿಭಿನ್ನ ಎನಿಸಿದೆ.

‘ಇಲ್ಲಿ ಪುಸ್ತಕಗಳಿಗೆ ಕ್ರಯ ಇಲ್ಲ. ಯಾವುದೇ ಪುಸ್ತಕ ತೆಗೆದುಕೊಳ್ಳಿ, ಇಷ್ಟ ಬಂದಷ್ಟು ಹಣ ಕೊಡಿ. ಪುಸ್ತಕ ಪ್ರೀತಿ, ಓದುವ ಸಂಸ್ಕಾರ ಬೆಳೆಸಿರಿ’ ಎಂಬ ಫಲಕ ಗಮನಸೆಳೆಯುತ್ತಿದೆ. ಮಾರಾಟಕ್ಕೆ ಇಡಲಾದ ಪುಸ್ತಕಗಳಿಗೆ ಬೆಲೆ ನಿಗದಿಪಡಿಸದೆ ಗ್ರಾಹಕರು ನೀಡಿದಷ್ಟು ಹಣ ಸ್ವೀಕರಿಸುತ್ತಿದ್ದಾರೆ.

‘ಈ ತಲೆಮಾರಿನವರಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಹೀಗಾಗಿ, ಓದುವ ರೂಢಿ ಬೆಳೆಸಲು ಇಂತದ್ದೊಂದು ವಿಭಿನ್ನ ಪ್ರಯತ್ನ ನಡೆಸುತ್ತಿದ್ದೇನೆ’ ಎನ್ನುತ್ತಾರೆ ಸುಮುಖಾನಂದ ಜಲವಳ್ಳಿ.

ADVERTISEMENT

‘ಸುಮುಖ ಪ್ರಕಾಶನದ ಮೂಲಕ 88 ಪುಸ್ತಕಗಳನ್ನು ಹೊರತಂದಿದ್ದೇನೆ. ಅವುಗಳನ್ನು ಸಾಹಿತ್ಯ ಸಮ್ಮೇಳನ ನಡೆಯುವ ವೇಳೆ ಪುಸ್ತಕಗಳ ಮಳಿಗೆ ಹಾಕಿ, ಕೊಟ್ಟಷ್ಟು ಹಣಕ್ಕೆ ಪುಸ್ತಕ ನೀಡುತ್ತಿದ್ದೇನೆ. ಓದುವ ಸಂಸ್ಕಾರ ಬೆಳೆಯಲು ಇಂತದ್ದೊಂದು ಪ್ರಯತ್ನ ನಡೆಸಿದ್ದೇನೆ. ಪುಸ್ತಕ ಖರೀದಿಸಿದವರಲ್ಲಿ ಬಹುತೇಕರು ಮುಖಬೆಲೆಗಿಂತ ಕಡಿಮೆ ಹಣ ನೀಡುತ್ತಿಲ್ಲ. ಕೆಲವರು ಹೆಚ್ಚಿನ ಹಣವನ್ನೂ ನೀಡುತ್ತಾರೆ. ಹೆಚ್ಚಿನ ಮೊತ್ತ ಅವರಿಗೆ ಮರಳಿಸುತ್ತೇನೆ’ ಎಂದರು.

ಮೂಲತಃ ಹೊನ್ನಾವರ ತಾಲ್ಲೂಕಿನ ಜಲವಳ್ಳಿಯವರಾದ ಸುಮುಖಾನಂದ ಸದ್ಯ ಹೊನ್ನಾವರದ ಅರೆಅಂಗಡಿಯ ನಿವಾಸಿಯಾಗಿದ್ದಾರೆ. ಪ್ರೌಢಶಾಲೆ ಶಿಕ್ಷಕರಾಗಿದ್ದ ಅವರು 8 ವರ್ಷಗಳ ಹಿಂದೆ ನಿವೃತ್ತಿ ಹೊಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.