ADVERTISEMENT

ನೀರು ಕಾಣದ ಕೊಳವೆ ಬಾವಿಗಳು: ಜೆಜೆಎಂ ಕಾಮಗಾರಿ ಪೂರ್ಣಗೊಳಿಸಲು ಹೆಚ್ಚಿದ ಅಡೆತಡೆ

ರಾಜೇಂದ್ರ ಹೆಗಡೆ
Published 14 ಮಾರ್ಚ್ 2025, 6:47 IST
Last Updated 14 ಮಾರ್ಚ್ 2025, 6:47 IST
ಶಿರಸಿ ತಾಲ್ಲೂಕಿನ ಬನವಾಸಿ ಹೋಬಳಿಯ ಗ್ರಾಮವೊಂದರಲ್ಲಿ ಕೊಳವೆ ಬಾವಿ ಕೊರೆಯುತ್ತಿರುವ ಸಂದರ್ಭದಲ್ಲಿ ಎದ್ದಿರುವ ದೂಳು
ಶಿರಸಿ ತಾಲ್ಲೂಕಿನ ಬನವಾಸಿ ಹೋಬಳಿಯ ಗ್ರಾಮವೊಂದರಲ್ಲಿ ಕೊಳವೆ ಬಾವಿ ಕೊರೆಯುತ್ತಿರುವ ಸಂದರ್ಭದಲ್ಲಿ ಎದ್ದಿರುವ ದೂಳು   

ಶಿರಸಿ: ಸಾರ್ವಜನಿಕರಿಗೆ ಶುದ್ಧ ಹಾಗೂ ನಿರಂತರ ಕುಡಿಯುವ ನೀರು ನೀಡಲು ತಾಲ್ಲೂಕಿನಲ್ಲಿ ಅನುಷ್ಠಾನಗೊಂಡಿರುವ ಜಲಜೀವನ ಮಿಷನ್ (ಜೆಜೆಎಂ) ಅಡಿ ಜಲಮೂಲಕ್ಕಾಗಿ ತೋಡಿದ 103 ಕೊಳವೆ ಬಾವಿಗಳಲ್ಲಿ 37 ಕೊಳವೆ ಬಾವಿಗಳಲ್ಲಿ ನೀರೇ ಬಂದಿಲ್ಲ!

ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜೆಜೆಎಂ ಅಡಿ ಮೂರು ಹಂತಗಳಲ್ಲಿ ಕಾಮಗಾರಿ ಅನುಷ್ಠಾನಗೊಂಡಿದೆ. ಒಟ್ಟೂ 119 ಕಾಮಗಾರಿಗಳು ಮಂಜೂರಾಗಿದ್ದು, 74 ಪೂರ್ಣಗೊಂಡಿವೆ. ಉಳಿದವು ಪ್ರಗತಿ ಹಂತದಲ್ಲಿವೆ. ಈ ಕಾಮಗಾರಿಯಡಿ ಕೊಳವೆ ಬಾವಿ ಜಲಮೂಲ ನಿರ್ಮಾಣ ವಿಷಯ ಪ್ರಸ್ತುತ ಗುತ್ತಿಗೆದಾರರಿಗೆ ನಿದ್ದೆಗೆಡಿಸಿದೆ. ‘ಇದೇ ಕಾರಣಕ್ಕೆ ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತಿರುವ ಕೊಳವೆ ಬಾವಿ ತೋಡಲು ಗುತ್ತಿಗೆದಾರರು ಹಿಂದೇಟು ಹಾಕುತ್ತಿದ್ದಾರೆ’ ಎಂಬ ಮಾತು ವ್ಯಾಪಕವಾಗಿದೆ. 

‘ಯೋಜನೆ ಅನುಷ್ಠಾನದ ಸ್ಥಳಕ್ಕೆ ಬಂದ ಭೂವಿಜ್ಞಾನಿಗಳು ತೋರಿಸಿದ ಕಡೆ ಕೊಳವೆಬಾವಿ ಕೊರೆದರೂ ನೀರು ಮಾತ್ರ ಸಿಗುತ್ತಿಲ್ಲ. ಕೆಲವು ಕಡೆ ಎರಡು, ಮೂರು ಕೊಳವೆಬಾವಿ ಕೊರೆಸಿದರೂ ಪ್ರಯೋಜನಕ್ಕೆ ಬರುತ್ತಿಲ್ಲ. ಯೋಜನೆಯಡಿ ಎರಡು ಕೊಳವೆ ಬಾವಿ ಕೊರೆಯಲು ಅನುದಾನ ಇರುತ್ತದೆ. ಅದಕ್ಕಿಂತ ಹೆಚ್ಚು ಕೊಳವೆ ಬಾವಿ ಕೊರೆಯಲು ಕಾಮಗಾರಿ ಗುತ್ತಿಗೆ ಪಡೆದವರು ಕೊಳವೆ ಬಾವಿಗಾಗಿಯೇ ಹೆಚ್ಚುವರಿ ಮೊತ್ತದ ಗುತ್ತಿಗೆಯನ್ನು ಪ್ರತ್ಯೇಕವಾಗಿ ಪಡೆಯಬೇಕಿದೆ. ಇಲ್ಲವೇ ನಷ್ಟಕ್ಕೆ ಒಳಗಾಗಬೇಕು’ ಎಂಬುದಾಗಿ ಹೆಸರು ಹೇಳಲಿಚ್ಛಿಸದ ಗುತ್ತಿಗೆದಾರರೊಬ್ಬರು ಹೇಳಿದರು.

ADVERTISEMENT

‘ಹಲವು ಕಡೆ ಕೊರೆದ ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿವೆ. ಇದರಿಂದ ಏಪ್ರಿಲ್, ಮೇ ತಿಂಗಳಲ್ಲಿ ನೀರಿನ ಸಮಸ್ಯೆ ಎದುರಾಗುವುದು ನಿಶ್ಚಿತವಾಗಿದೆ. ಹೊಸದಾಗಿ ಕೊರೆಯುತ್ತಿರುವ ಕೊಳವೆ ಬಾವಿಗಳಲ್ಲಿ ನೀರು ಸಿಗುತ್ತಿಲ್ಲ. ಮತ್ತೆ ಮತ್ತೆ ಹೊಸ ಜಲಮೂಲ ಕೊರೆಯುವ ಸ್ಥಿತಿ ಎದುರಾಗಿದೆ. ಇದರಿಂದ ಸಾರ್ವಜನಿಕರಿಗೆ ನೀರು ವಿತರಣೆಯೂ ವಿಳಂಬವಾಗುತ್ತಿದೆ’ ಎಂದರು.

‘ನೀರಿನ ಮೂಲವನ್ನು ಸಮರ್ಪಕವಾಗಿ ತೋರಿಸುವವರನ್ನು ಇಟ್ಟುಕೊಂಡು ಕೊಳವೆ ಬಾವಿ ಕೊರೆಯಬೇಕು. ಇಲ್ಲದಿದ್ದರೆ ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತದೆ’ ಎಂದು ಸಾಮಾಜಿಕ ಕಾರ್ಯಕರ್ತ ರಮೇಶ ನಾಯ್ಕ ಹೇಳುತ್ತಾರೆ.

‘ಬನವಾಸಿ ಹೋಬಳಿಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬನವಾಸಿ, ಪಾರ್ಸಿ, ಅಂಡಗಿ, ಭಾಶಿಯಂಥ ಪ್ರದೇಶದಲ್ಲಿ ನೀರಿನ ಕೊರತೆಯಿದೆ. ಭೂವಿಜ್ಞಾನಿಗಳ ಮೂಲಕವೇ ನೀರನ್ನು ಗುರುತಿಸಿ, ಪಾಯಿಂಟ್ ಮಾಡಲಾಗುತ್ತಿದೆ. ಆದರೂ 37 ಕೊಳವೆ ಬಾವಿಗಳು ಬಳಕೆಗೆ ಸಾಧ್ಯವಿಲ್ಲದಂತಾಗಿವೆ. ತಾಲ್ಲೂಕಿನ ಪೂರ್ವ ಭಾಗದಲ್ಲಿ ಕೊರೆಯುವ ಕೊಳವೆ ಬಾವಿಗಳಲ್ಲಿ ನೀರು ಸಿಗುತ್ತಿಲ್ಲ. ಪಶ್ಚಿಮ ಭಾಗದ ಗ್ರಾಮಗಳಲ್ಲಿ ಅಷ್ಟಾಗಿ ಸಮಸ್ಯೆ ಕಾಡುತ್ತಿಲ್ಲ' ಎಂಬುದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳ ಅಭಿಪ್ರಾಯ. 

ನೀರು ಬರದ ಕೊಳವೆ ಬಾವಿಗಳ ಬದಲಿಗೆ ಎಲ್ಲ ಕಡೆ ಬೇರೆ ಜಲಮೂಲ ಇಲ್ಲವೇ ಪ್ರತ್ಯೇಕ ಕೊಳವೆಬಾವಿ ನಿರ್ಮಿಸಿ ಯೋಜನೆ ಅನುಷ್ಠಾನ ಮಾಡಲಾಗಿದೆ
ರಂಗಪ್ಪ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.