ADVERTISEMENT

ಉತ್ತರ ಕನ್ನಡ: ಮಹಿಷನಲ್ಲಿ ಮಾರಮ್ಮನ ಅವತಾರ

ರೊಟ್ಟಿ–ಪಲ್ಯ ತಂದು ದೇವಿಗೆ ಅರ್ಪಿಸುವ ಲಂಬಾಣಿಗರು

ಸಂಧ್ಯಾ ಹೆಗಡೆ
Published 24 ಫೆಬ್ರುವರಿ 2020, 19:30 IST
Last Updated 24 ಫೆಬ್ರುವರಿ 2020, 19:30 IST
ಶಿರಸಿ ಮಾರಿಕಾಂಬಾ ದೇವಾಲಯದಲ್ಲಿರುವ ಮಾರಿಕೋಣ
ಶಿರಸಿ ಮಾರಿಕಾಂಬಾ ದೇವಾಲಯದಲ್ಲಿರುವ ಮಾರಿಕೋಣ   

ಶಿರಸಿ: ಹಾನಗಲ್, ಹಾವೇರಿ, ಮುಂಡಗೋಡ ಭಾಗದಿಂದ ಬರುವ ಲಂಬಾಣಿ ಜನಾಂಗದವರು ದೇವಾಲಯದಲ್ಲಿರುವ ಮಹಿಷನಲ್ಲಿ ಮಾರಮ್ಮನ ಅವತಾರವನ್ನು ಕಾಣುತ್ತಾರೆ ! ಸಾಕ್ಷಾತ್‌ ಮಾರಮ್ಮನೇ ಮಹಿಷರೂಪಿಯಾಗಿ ವರ ನೀಡುತ್ತಾಳೆ ಎಂಬುದು ಅವರ ನಂಬಿಕೆ.

ಲಂಬಾಣಿಗರಿಗೆ ಶಿರಸಿ ಮಾರಿಕಾಂಬೆ ಆರಾಧ್ಯ ದೇವತೆ. ಅವರ ಎಲ್ಲ ಕಷ್ಟ–ಸುಖಕ್ಕೆ ಆಗುವವಳು ಮಾರಮ್ಮ. ವರ್ಷವಿಡೀ ದೇವಿಗೆ ನಡೆದುಕೊಳ್ಳುವ ಅವರು, ಜಾತ್ರೆಗೆ ಸಹಸ್ರಾರು ಸಂಖ್ಯೆಯಲ್ಲಿ ಬರುತ್ತಾರೆ. ಮಾರಿಕಾಂಬೆಯ ಕಲ್ಯಾಣೋತ್ಸವ ಅವರಿಗೆ ಹೆಚ್ಚು ಸಂಭ್ರಮ.

ಮಾರ್ಚ್3ರಿಂದ ಪ್ರಾರಂಭವಾಗುವ ಜಾತ್ರೆಗೆ ಈಗಿನಿಂದಲೇ ಬರಲಾರಂಭಿಸಿದ್ದಾರೆ ಲಂಬಾಣಿ ಮಹಿಳೆಯರು. ಅವರಿಗೆ ಮಾರಿಕಾಂಬೆಯಷ್ಟೇ ಪ್ರೀತಿ, ದೇವಾಲಯದ ಪಕ್ಕದಲ್ಲಿರುವ ಮಾರಿಕೋಣದ ಮೇಲೆ. ದೇವಿಗೆ ಹಣ್ಣು–ಕಾಯಿ ಪೂಜೆ ಸಲ್ಲಿಸುವ ಅವರು, ಮಾರಿಕೋಣನ ಎದುರು ಕುಳಿತುಕೊಳ್ಳುತ್ತಾರೆ. ಮನೆಯಿಂದ ತಂದಿರುವ ಹಣ್ಣು–ಹಂಪಲು, ರೊಟ್ಟಿಯನ್ನು ಕೊಡುತ್ತಾರೆ. ಕೋಣ ಅದನ್ನು ತಿನ್ನುವವರೆಗೂ ತಾಸುಗಟ್ಟಲೇ ಕಾದು ಕುಳಿತುಕೊಳ್ಳುತ್ತಾರೆ. ಒಮ್ಮೆ ಅದು ತಿಂದೇ ಇಲ್ಲವೆಂದರೆ, ನೊಂದು ಕಣ್ಣೀರು ಸುರಿಸುತ್ತಾರೆ.

ADVERTISEMENT

‘ಹದಿನೈದು ದಿನಕ್ಕೊಮ್ಮೆ, ತಿಂಗಳಿಗೊಮ್ಮೆ ಬರ್ಲೇ ಬೇಕ್ರಿ. ಆಕಿ ಮನಸ್ ಮಾಡಿದ್ರೆ ಮತ್ತೂ ಬೇಗ್ ಬರ್ತೇನಿ. ನನ್ ಮ್ಯಾಗೂ ಮಾರೆಮ್ಮ ಬರ್ತಾಳೆ. ಮನ್ಯಾಗ್ ಮಾರೆಮ್ಮನ ಗುಡಿಗೆ ಹೊಕ್ಕೇನಿ ಅಂದ್ರ ಸಾಕ್. ಅದು ತನಗ ಏನ್ ಬೇಕ್ ಹೇಳೇ ಬಿಡ್ತೈತಿ. ಅದು ನಮ್ ಮನಸ್ನಾಗ್ ಬಂದು ಹೇಳಿದ್ದನ್ನ ಮಾಡ್ಕೊಂಡು ಬರ್ತೇವಿ. ರೊಟ್ಟಿ–ಪಲ್ಯ ಅಂದ್ರ ಅದನ್ನೇ ತರ್ತೇವಿ’ ಎಂದು ಮಾರಿಕೋಣನಿಗೆ ಬಾಳೆಹಣ್ಣು ಕೊಡುತ್ತಿದ್ದ ಮುಂಡಗೋಡ ಕರಗಿನಕೊಪ್ಪದ ಲಕ್ಷ್ಮವ್ವ ಹೇಳಿದರು.

ಮಾರಿಕೋಣನಲ್ಲಿ ದೈವತ್ವವನ್ನು ಕಾಣುವ ಲಂಬಾಣಿಗರು, ದೇವರ ಗುಡಿಗಿಂತ ಹೆಚ್ಚು ಸಮಯವನ್ನು ಕೋಣನ ಕೊಠಡಿಯ ಹೊರಗೇ ಕಳೆಯುತ್ತಾರೆ. ಕೋಣನ ಎದುರು ದುಃಖ ಅರುಹಿಕೊಳ್ಳುತ್ತಾರೆ. ಮನದ ದುಗುಡವನ್ನು ಮಾತಾಗಿ ಹೊರಗಿಕ್ಕುತ್ತಾರೆ. ರೊಟ್ಟಿಯ ಮೇಲೆ ಪಲ್ಯ ಹಾಕಿ, ಅದರ ಮೇಲೆ ಮತ್ತೆ ರೊಟ್ಟಿಯಿಟ್ಟು, ಬರ್ಗರ್‌ನಂತೆ ಸಿದ್ಧಪಡಿಸಿ ತಂದು ಮಾರಮ್ಮನಿಗೆ ಕೊಡುತ್ತಾರೆ.

‘ನನ್ನ ನಾಲ್ಕು ಮಕ್ಕಳಲ್ಲಿ ಒಬ್ಬ ಮಗ ಚಿಕ್ಕವನಿರುವಾಗ ಚುರಕಾಗಿರಲಿಲ್ಲ. ವಾರಿಗೆ ಹುಡುಗರ ಬಳಿ ಹೊಡೆತ ತಿಂದು ಬಂದು ಅಳುತ್ತಿದ್ದ. ಅವನನ್ನು ಸರಿಮಾಡುವಂತೆ ಮಾರೆಮ್ಮನ ಬಳಿ ಒಂದೇ ಮನಸ್ಸಿನಿಂದ ಕೇಳಿಕೊಂಡೆ. ಹಾಗೆ ಕೇಳಿಕೊಂಡಿದ್ದೇ ಆಕೆ ವರ ಕೊಟ್ಟಳು. ಮಗ ಎಲ್ಲರಂತಾದ. ಮಾರಿಕಾಂಬಾ ಜಾತ್ರೆಗೆ ಬರುವ ನಾವು ದೇವಿಯ ಭಂಡಾರ ಒಯ್ದು, ಕುರಿ ಅಥವಾ ಕೋಳಿಗೆ ಹಾಕಿ, ಆಕೆಗೆ ಹರಕೆ ಒಪ್ಪಿಸುತ್ತೇವೆ’ ಎಂದು ಲಕ್ಷ್ಮವ್ವ ತನ್ನ ಕತೆಯನ್ನು ಹೇಳಿಕೊಂಡಳು.

ಜಾತ್ರೆಯ ನಂತರದಲ್ಲಿ ಪ್ರಸ್ತುತ ಮಾರಿಕೋಣ ಇರುವ ಜಾಗದ ಹಿಂಭಾಗದಲ್ಲಿ ಮಹಿಷ ಮಂಟಪ ನಿರ್ಮಿಸಿ, ಭಕ್ತರಿಗೆ ಕೋಣನ ದರ್ಶನಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಮಾರಿಕಾಂಬಾ ಧರ್ಮದರ್ಶಿ ಮಂಡಳಿ ಅಧ್ಯಕ್ಷ ವೆಂಕಟೇಶ ನಾಯ್ಕ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.