ADVERTISEMENT

ಶಿರಸಿ ಜಾತ್ರೆ | ಪ್ರಾಣಿ ಬಲಿ ನಿಷೇಧಿಸಿ 90 ವರ್ಷ: ಪಟ್ಟದ ಕೋಣನಿಗೆ ರಾಜ ಮರ್ಯಾದೆ

ರಾಜೇಂದ್ರ ಹೆಗಡೆ
Published 19 ಮಾರ್ಚ್ 2024, 4:41 IST
Last Updated 19 ಮಾರ್ಚ್ 2024, 4:41 IST
ಶಿರಸಿ ಮಾರಿಕಾಂಬಾ ದೇವಾಲಯದ ಪಟ್ಟದ ಕೋಣ ಜಾತ್ರೆ ಹಿನ್ನೆಲೆಯಲ್ಲಿ ನಗರದ ವಿವಿಧ ಪ್ರದೇಶಗಳಲ್ಲಿ ಮೆರವಣಿಗೆ ಮೂಲಕ ಕೊಂಡೊಯ್ಯುತ್ತಿರುವ ದೇವಾಲಯದ ಸಿಬ್ಬಂದಿ
ಶಿರಸಿ ಮಾರಿಕಾಂಬಾ ದೇವಾಲಯದ ಪಟ್ಟದ ಕೋಣ ಜಾತ್ರೆ ಹಿನ್ನೆಲೆಯಲ್ಲಿ ನಗರದ ವಿವಿಧ ಪ್ರದೇಶಗಳಲ್ಲಿ ಮೆರವಣಿಗೆ ಮೂಲಕ ಕೊಂಡೊಯ್ಯುತ್ತಿರುವ ದೇವಾಲಯದ ಸಿಬ್ಬಂದಿ    

ಶಿರಸಿ: ರಾಜ್ಯದ ಹಲವೆಡೆ ಜಾತ್ರಾ ಮಹೋತ್ಸವಗಳಲ್ಲಿ ಪ್ರಾಣಿ ಬಲಿ ಚಾಲ್ತಿಯಲ್ಲಿದೆ. ಆದರೆ ಶಿರಸಿ ಮಾರಿಕಾಂಬಾ ಜಾತ್ರೆಯಲ್ಲಿ ಮಾತ್ರ ಸನ್ನಿವೇಶ ವಿಭಿನ್ನವಾಗಿದ್ದು, ಸುಮಾರು 90 ವರ್ಷಗಳ ಹಿಂದೆಯೇ ಇಲ್ಲಿ ಪ್ರಾಣಿ ಬಲಿ ಸಂಪೂರ್ಣ ನಿಷೇಧಿಸಲಾಗಿದೆ.

ದ್ವೈವಾರ್ಷಿಕ ಮಾರಿಕಾಂಬಾ ಜಾತ್ರೆ ಈ ಬಾರಿ ಮಾರ್ಚ್‌ 19ರಿಂದ 27ರವರೆಗೆ ನೆರವೇರಲಿದ್ದು, ನಾಡಿನ ವಿವಿಧೆಡೆಯ ಲಕ್ಷಾಂತರ ಮಂದಿ ಪಾಲ್ಗೊಳ್ಳುತ್ತಾರೆ. ಆದರೆ ಈ ಸಂದರ್ಭದಲ್ಲಿ ದೇವಿಯ ಸಂಪ್ರೀತಿಗೆಂದು ಯಾವುದೇ ಪ್ರಾಣಿಯ ನೆತ್ತರು ಹರಿಸುವ ಪದ್ಧತಿ ಇಲ್ಲಿ ಇಲ್ಲವೇ ಇಲ್ಲ. ಇದರಿಂದಾಗಿ ಉಗ್ರರೂಪದ ಶಕ್ತಿದೇವತೆ ಇಲ್ಲಿ ಸಾತ್ವಿಕ ಆರಾಧನೆಯ ಶಾಂತ ದೇವತೆಯಾಗಿ ಭಕ್ತರನ್ನು ಅನುಗ್ರಹಿಸುತ್ತಿದ್ದಾಳೆ.

ಸೊಗಸಾದ ಕಾವಿ ಕಲೆಯ ಚಿತ್ರಗಳು ರಾರಾಜಿಸುತ್ತಿರುವ ಮಾರಿಕಾಂಬಾ ದೇವಸ್ಥಾನದ ಗರ್ಭಗುಡಿಯ ಪಕ್ಕದಲ್ಲಿ ಬಲಿಷ್ಠ ಕೋಣವೊಂದು ಭಕ್ತಾದಿಗಳ ಗಮನ ಸೆಳೆಯುತ್ತದೆ. ಕೆಲವರು ಈ ಕೋಣವನ್ನು ಜಾತ್ರೆ ಸಂದರ್ಭದಲ್ಲಿ ಬಲಿಕೊಡುತ್ತಾರೆಂದು ಅಂದುಕೊಂಡರೆ ಅದು ತಪ್ಪು. ಆ ಕೋಣ ಎಂಟ್ಹತ್ತು ವರ್ಷಗಳಿಂದ ಹೀಗೆ ಅಲ್ಲಿಯೇ ನೆಲೆಸಿದ್ದಾಗಿರುತ್ತದೆ. 

ADVERTISEMENT

ಜಾತ್ರೆ ಸಂದರ್ಭದಲ್ಲಿ ದೇವಿಯ ವಿವಾಹ ಮಹೋತ್ಸವಕ್ಕೆ ಪೂರಕವಾಗಿ ಕಂಕಣ ಕಟ್ಟುವ ವಿಧಾನ ನೆರವೇರಿದ ನಂತರದಲ್ಲಿ ಪಟ್ಟದ ಕೋಣ ನಗರದ ವಿವಿಧ ಬಡಾವಣೆಗಳಲ್ಲಿ ಸಂಚರಿಸುತ್ತದೆ. ಭಕ್ತಾದಿಗಳು ಕೋಣಕ್ಕೆ ನೀರನ್ನೆರೆದು ಕುಂಕುಮ ಹಚ್ಚಿ ಅರ್ಚಿಸಿ ಅಕ್ಕಿ, ಕಾಯಿ ನೀಡುತ್ತಾರೆ. ಜಾತ್ರೆಯ ವೇಳೆಗೆ ಪಟ್ಟದ ಕೋಣ ಮತ್ತೆ ದೇವಾಲಯದೊಳಗೆ ಆಶ್ರಯ ಪಡೆದಿರುತ್ತದೆ.

‘ದಶಕಗಳ ಹಿಂದೆಯೇ ಇಲ್ಲಿ ಕೋಣನ ವಧೆ ಸ್ಥಗಿತಗೊಳಿಸಿದ ಬಗ್ಗೆ ಮಾಹಿತಿ ಲಭ್ಯವಾಗುತ್ತದೆ. ಅಲ್ಲದೇ ದೇವಸ್ಥಾನದ ಜಾತ್ರೆ-ಉತ್ಸವಗಳಲ್ಲಿ ಪ್ರಾಣಿ ಬಲಿ ನಿಷೇಧಿಸಿದ ನಂತರದಲ್ಲಿ ಸಾತ್ವಿಕ ಬಲಿಯಾಗಿ ಬೂದುಗುಂಬಳ ಕಾಯಿ ಬಳಸಲಾಗುತ್ತಿದೆ. ರಾಜ್ಯದ ಅನೇಕ ಕಡೆಗಳಲ್ಲಿ ಉತ್ಸವ-ಜಾತ್ರೆ ಹೆಸರಿನಲ್ಲಿ ನಿರ್ದಯವಾಗಿ ಪ್ರಾಣಿಗಳನ್ನು ಬಲಿಕೊಡುವ ಮಂದಿಗೆ ಶಿರಸಿ ಮಾರಿಕಾಂಬಾ ಜಾತ್ರೆ ಅನುಕರಣೀಯವಾಗಿದೆ’ ಎಂಬುದು ಇಲ್ಲಿನ ಜನರ ಅಭಿಪ್ರಾಯ.

1934ರಲ್ಲಿ ಮಹಾತ್ಮಾ ಗಾಂಧಿ ಶಿರಸಿಗೆ ಆಗಮಿಸಿದ್ದರು. ಆಗ ಮಾರಿಕಾಂಬಾ ದೇವಿ ಜಾತ್ರೆಯ ಸಂದರ್ಭದಲ್ಲಿ ಪ್ರಾಣಿಬಲಿ ನೀಡುತ್ತಿದ್ದುದು ಅವರಿಗೆ ತಿಳಿಯಿತು. ಅಹಿಂಸಾವಾದಿಯಾದ ಗಾಂಧೀಜಿ ಪ್ರಾಣಿ ಬಲಿ ನೀಡಬಾರದೆಂಬ ಆಗ್ರಹದ ಸಂದೇಶ ನೀಡಿದರು. ಪರ, ವಿರೋಧ, ವಾಗ್ವಾದದ ನಡುವೆ ಅಂತಿಮವಾಗಿ ಮಾರಿಕಾಂಬೆ ಸನ್ನಿಧಿಯಲ್ಲಿ ಪ್ರಾಣಿ ಬಲಿ ನಿಷೇಧದ ನಿರ್ಧಾರ ಕೈಗೊಳ್ಳಲಾಯಿತು ಎಂದು ಹಿರಿಯರು ನೆನಪಿಸಿಕೊಳ್ಳುತ್ತಾರೆ. ಇದನ್ನೇ ನಿರಂತರವಾಗಿ ಕಟ್ಟುನಿಟ್ಟಾಗಿ ಅನುಸರಿಸಿಕೊಂಡು ಬರಲಾಗಿದೆ ಎನ್ನುವುದು ಗಮನಾರ್ಹ ಸಂಗತಿ.

ಕೋಣವನ್ನು ಮಾರಿಕಾಂಬೆಯ ಪತಿಯಾದ ಮಹಿಷಾಸುರನ ಪ್ರತೀಕವೆಂದು ಪರಿಗಣಿಸುತ್ತಿದ್ದು ಪಟ್ಟದ ಕೋಣ ಎನ್ನಲಾಗುತ್ತದೆ. ಒಮ್ಮೆ ಆಯ್ಕೆಯಾಗಿ ದೇವಾಲಯಕ್ಕೆ ಬಂದ ನಂತರದಲ್ಲಿ ಎಷ್ಟು ವರ್ಷ ಆಯಸ್ಸು ಇದೆಯೋ ಅಷ್ಟು ಕಾಲ ಇಲ್ಲಿಯೇ ಇರುತ್ತದೆ

-ಆರ್.ಜಿ.ನಾಯ್ಕ– ಮಾರಿಕಾಂಬಾ ದೇವಾಲಯ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.