ADVERTISEMENT

ನೀರಿನ ಯೋಜನೆಗೆ ಆಗ್ರಹ: ರಾಮನಗರ ಬಂದ್ 24ಕ್ಕೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2022, 14:33 IST
Last Updated 21 ಮಾರ್ಚ್ 2022, 14:33 IST

ಕಾರವಾರ: ಸೂಪಾ ಜಲಾಶಯ ನಿರ್ಮಾಣಕ್ಕಾಗಿ ಸ್ಥಳಾಂತರ ಆದವರ ಕಾಲೊನಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿ, ಮಾರ್ಚ್ 24ರಂದು ರಾಮನಗರ ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯಲ್ಲಿ ಬಂದ್ ಕರೆ ನೀಡಲಾಗಿದೆ.

‘ರಾಮನಗರ ಜಿಲ್ಲಾ ಪಂಚಾಯಿತಿ ಕ್ಷೇತ್ರ ಜಲಾಂದೋಲನ ಸಮಿತಿ’ಯು, ‘ನಮ್ಮ ನೀರು ನಮ್ಮ ಹಕ್ಕು’ ಘೋಷವಾಕ್ಯದಡಿಯಲ್ಲಿ ಹೋರಾಟ ಹಮ್ಮಿಕೊಂಡಿದೆ. ಅಂದು ಬೆಳಿಗ್ಗೆ 10ರಿಂದ ವಾಹನ ಸಂಚಾರ ತಡೆದು ಪ್ರತಿಭಟನೆಗೂ ನಿರ್ಧರಿಸಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಪಿ.ಎಸ್.ದೇಸಾಯಿ ತಿಳಿಸಿದ್ದಾರೆ.

‘40 ವರ್ಷಗಳ ಹಿಂದೆ ಸೂಪಾ ಜಲಾಶಯ ನಿರ್ಮಾಣದ ಸಂದರ್ಭದಲ್ಲಿ ಸರ್ಕಾರ ಭರವಸೆ ನೀಡಿದ್ದ ಪ್ರಕಾರ, ಕುಡಿಯುವ ಮತ್ತು ಕೃಷಿ ಉದ್ದೇಶಕ್ಕಾಗಿ ನೀರು ಒದಗಿಸಬೇಕಿತ್ತು. ಆದರೆ, ಅದಿನ್ನೂ ಈಡೇರಿಲ್ಲ. ಸ್ಥಳೀಯರಿಗೆ ಮೊದಲು ಯೋಜನೆ ರೂಪಿಸುವ ಬದಲು ದಾಂಡೇಲಿ, ಹಳಿಯಾಳ ಮತ್ತು ಅಳ್ನಾವರ ತಾಲ್ಲೂಕುಗಳಿಗೆ ಕಾಳಿ ನದಿಯ ನೀರನ್ನು ಸಾಗಿಸಲಾಗುತ್ತಿದೆ. ಜೊಯಿಡಾ ತಾಲ್ಲೂಕಿನಲ್ಲಿ ಕಾಳಿ ಉಗಮವಾದರೂ ನಮಗೇ ಒಂದು ಹನಿ ನೀರನ್ನೂ ಸರ್ಕಾರ ಒದಗಿಸುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಜಲಾಶಯಕ್ಕಾಗಿ ಜಾಗ ಬಿಟ್ಟುಕೊಟ್ಟ ನಾವಿಲ್ಲಿ ಇನ್ನೂ ನೀರು ಸಿಗದೇ ಪರದಾಡುತ್ತಿದ್ದೇವೆ. ಈ ನಡುವೆ, ರಾಜ್ಯ ಸರ್ಕಾರವು ಬಜೆಟ್‌ನಲ್ಲಿ ಉತ್ತರ ಕರ್ನಾಟಕದ ಐದು ಜಿಲ್ಲೆಗಳಿಗೆ ಕಾಳಿ ನದಿಯ ನೀರನ್ನು ಹರಿಸುವ ಬಗ್ಗೆ ಪ್ರಸ್ತಾಪಿಸಿದೆ. ಇದು ಯಾವ ರೀತಿಯ ಸಾಮಾಜಿಕ ನ್ಯಾಯ’ ಎಂದು ಪ್ರಶ್ನಿಸಿದ್ದಾರೆ.

‘ಸರ್ಕಾರದ ಧೋರಣೆಯನ್ನು ಖಂಡಿಸಿ ಮತ್ತು ಜಲ ಜೀವನ ಮಿಷನ್ ಅಡಿಯಲ್ಲಿ ನಿರಾಶ್ರಿತರಿಗೆ ಕುಡಿಯುವ ನೀರಿನ ಯೋಜನೆ ಮಂಜೂರು ಮಾಡುವಂತೆ ಒತ್ತಾಯಿಸಿ ತೀವ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.