ADVERTISEMENT

ಜೊಯಿಡಾದಲ್ಲಿ ‘ಚಿಟ್ಟೆ ಉದ್ಯಾನ’

ಪತಂಗಗಳ ಆವಾಸ ಸ್ಥಾನವಾದ ಸಸ್ಯೋದ್ಯಾನ; ಜಿಲ್ಲೆಯಲ್ಲಿ ಪ್ರಥಮ ಪ್ರಯತ್ನ

ದೇವರಾಜ ನಾಯ್ಕ
Published 24 ಸೆಪ್ಟೆಂಬರ್ 2019, 19:45 IST
Last Updated 24 ಸೆಪ್ಟೆಂಬರ್ 2019, 19:45 IST
ಜೊಯಿಡಾದ ಸಸ್ಯೋದ್ಯಾನದಲ್ಲಿ ಗಿಡವೊಂದರ ಮೇಲೆ ಚಿಟ್ಟೆ ಕುಳಿತಿರುವುದು
ಜೊಯಿಡಾದ ಸಸ್ಯೋದ್ಯಾನದಲ್ಲಿ ಗಿಡವೊಂದರ ಮೇಲೆ ಚಿಟ್ಟೆ ಕುಳಿತಿರುವುದು   

ಕಾರವಾರ: ಜೊಯಿಡಾ ಸಾಲುಮರದ ತಿಮ್ಮಕ್ಕ ಉದ್ಯಾನದಲ್ಲಿ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ‘ಚಿಟ್ಟೆ ಉದ್ಯಾನ’ ಸಿದ್ಧಗೊಳ್ಳುತ್ತಿದ್ದೆ. ಅರಣ್ಯ ಅಧಿಕಾರಗಳ ಮುತುವರ್ಜಿಯಲ್ಲಿ ಪ್ರಾರಂಭಗೊಳ್ಳುತ್ತಿರುವ ಈ ಉದ್ಯಾನ, ಈಗಾಗಲೇ 34 ಪ್ರಭೇದದ ಚಿಟ್ಟೆಗಳಿಗೆ ಆಶ್ರಯ ಕಲ್ಪಿಸಿದೆ.

ಸಾಲುಮರದ ತಿಮ್ಮಕ್ಕ ಉದ್ಯಾನ 43 ಎಕರೆ ವಿಸ್ತಾರವಾದ ಜಾಗ ಹೊಂದಿದೆ. ಇದರಲ್ಲಿ ಈಗಾಗಲೇ 10 ಎಕರೆ ಅಭಿವೃದ್ಧಿಪಡಿಸಿ, ವೃಕ್ಷ ಉದ್ಯಾನವನ್ನು ನಿರ್ಮಾಣ ಮಾಡಲಾಗಿದೆ.ಅದರಲ್ಲಿ ಒಂದು ಎಕರೆ ಪ್ರದೇಶವನ್ನುಈಗ ‘ಚಿಟ್ಟೆ ಉದ್ಯಾನ’ವನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಇದು ಮುಂದಿನ ದಿನಗಳಲ್ಲಿ ಪ್ರವಾಸಿಗರಿಗೆಹಾಗೂ ಅಧ್ಯಯನ ವಿದ್ಯಾರ್ಥಿಗಳಿಗೆ ನೆಚ್ಚಿನ ತಾಣವಾಗಲಿದೆ ಎನ್ನುವುದು ಅರಣ್ಯ ಅಧಿಕಾರಿಗಳ ಅಭಿಪ್ರಾಯವಾಗಿದೆ.

ಸಸಿಗಳ ನಾಟಿ: ಈ ಬಗ್ಗೆ ‘ಪ್ರಜಾವಾಣಿ’ ಜತೆಮಾತನಾಡಿದ ಜೊಯಿಡಾ ವಲಯ ಅರಣ್ಯ ಅಧಿಕಾರಿ ಮಹಿನ್ ಜನ್ನು, ‘ಚಿಟ್ಟೆಗಳು ಕೂತು ಪರಾಗಸ್ಪರ್ಷ ಕ್ರಿಯೆ ನಡೆಸಲು ಅನುಕೂಲವಾಗುವ ಹಾಗೂ ಹೆಚ್ಚು ಮಕರಂದ ನೀಡುವಚಿಕ್ಕ ಚಿಕ್ಕಹೂವಿನ ಗಿಡಗಳನ್ನು ಬೆಳೆಸಲಾಗಿದೆ. ಇದರಲ್ಲಿ 150ಕ್ಕೂ ಅಧಿಕ ಪ್ರಭೇದಗಳನ್ನು ನೆಡಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ಮಧ್ಯಮ ಪ್ರಮಾಣದ ಬಿಸಿಲು ಹಾಗೂ ತಂಪಿನವಾತಾವರಣವನ್ನು ಚಿಟ್ಟೆಗಳು ಬಯಸುತ್ತವೆ. ಉದ್ಯಾನದಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಲಾಗಿದೆ. ಪ್ರತಿದಿನ ನಮ್ಮ ಸಿಬ್ಬಂದಿ ಈ ಉದ್ಯಾನದಲ್ಲಿ ನಿಗಾ ಇಡಲಿದ್ದಾರೆ. ಚಿಟ್ಟೆಗಳಿಗೆ ಅನುಕೂಲಕರ ವಾತಾವರಣ ನಿರ್ಮಿಸಲು ಹೆಚ್ಚು ಗಮನ ಹರಿಸಲಾಗುವುದು’ ಎಂದು ಅವರು ಮಾಹಿತಿ ನೀಡಿದರು.

‘ಸದ್ಯ ಪ್ರಾಯೋಗಿಕವಾಗಿ ಸಣ್ಣ ಜಾಗದಲ್ಲಿ ಚಿಟ್ಟೆ ಉದ್ಯಾನವನ್ನು ನಿರ್ಮಿಸುತ್ತಿದ್ದೇವೆ. ಇದು ಯಶಸ್ವಿಯಾದರೆ ಮತ್ತಷ್ಟು ಪ್ರದೇಶದಲ್ಲಿ ಉದ್ಯಾನವನ್ನು ವಿಸ್ತರಿಸಲಿದ್ದೇವೆ. ಪ್ರವೇಶ ಶುಲ್ಕ ನಿಗದಿಪಡಿಸಿ, ಅದನ್ನು ಉದ್ಯಾನದ ನಿರ್ವಹಣೆಗೆ ಬಳಕೆ ಮಾಡಿಕೊಳ್ಳಲಾಗುವುದು.ಮಾರ್ಗದರ್ಶಕರೊಬ್ಬರನ್ನು ನೇಮಿಸಿ, ಅವರಿಂದ ಪ್ರವಾಸಿಗರಿಗೆ ಚಿಟ್ಟೆಗಳ ಜೀವನ ಶೈಲಿಯ ಬಗ್ಗೆ ಮಾಹಿತಿಒದಗಿಸುವಯೋಚನೆ ಇದೆ’ ಎನ್ನುತ್ತಾರೆ ಅವರು.

‘ಮೊಟ್ಟೆ ಇಟ್ಟಿರುವ ಸದರ್ನ್ ಬಟರ್‌ಫ್ಲೈ’:‘ಏಷ್ಯಾ ಖಂಡದಲ್ಲಿಯೇ ಅತಿದೊಡ್ಡ ಪತಂಗ ಎಂಬ ಹೆಗ್ಗಳಿಕೆ ಪಡೆದಿರುವ‘ಸದರ್ನ್ ಬಟರ್‌ಫ್ಲೈ’ ಈ ಉದ್ಯಾನದಲ್ಲಿಇದ್ದು, ಮೊಟ್ಟೆ ಇಟ್ಟಿದೆ. ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಕಂಡು ಬರುವ ಈ ಪತಂಗಗಳ ರೆಕ್ಕೆ, 140ರಿಂದ 190 ಮಿ.ಮೀ.ವರೆಗೆ ಹರಡಿಕೊಂಡಿರುತ್ತವೆ. ಈ ಪತಂಗದ ಸಂತತಿ ಹೆಚ್ಚಿದರೆ ಉದ್ಯಾನದಲ್ಲಿ ಇವು ಪ್ರವಾಸಿಗರ ಕೇಂದ್ರ ಬಿಂದುವಾಗಲಿದೆ’ ಎನ್ನುವುದು ಮಹಿನ್ ಜನ್ನು ಅವರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.