ADVERTISEMENT

ಪರಿಸರದ ಹೆಸರಿನಲ್ಲಿ ಆದಿಮಾನವರಾಗಲು ಸಿದ್ಧರಿಲ್ಲ: ಸಚಿವ ಶಿವರಾಮ ಹೆಬ್ಬಾರ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2020, 19:30 IST
Last Updated 17 ಆಗಸ್ಟ್ 2020, 19:30 IST
ಯಲ್ಲಾಪುರ ತಾಲ್ಲೂಕಿನ ಗುಳ್ಳಾಪುರದಲ್ಲಿ ನಿರ್ಮಿಸಲಾದ ನೂತನ ವಿದ್ಯುತ್ ಉಪಕೇಂದ್ರವನ್ನು ಸೋಮವಾರ ಉದ್ಘಾಟಿಸಿ ಸಚಿವ ಶಿವರಾಮ ಹೆಬ್ಬಾರ ಮಾತನಾಡಿದರು.
ಯಲ್ಲಾಪುರ ತಾಲ್ಲೂಕಿನ ಗುಳ್ಳಾಪುರದಲ್ಲಿ ನಿರ್ಮಿಸಲಾದ ನೂತನ ವಿದ್ಯುತ್ ಉಪಕೇಂದ್ರವನ್ನು ಸೋಮವಾರ ಉದ್ಘಾಟಿಸಿ ಸಚಿವ ಶಿವರಾಮ ಹೆಬ್ಬಾರ ಮಾತನಾಡಿದರು.   

ಯಲ್ಲಾಪುರ: ‘ನಮಗೂ ಬದುಕುವ ಹಕ್ಕಿದೆ. ಜಿಲ್ಲೆಯ ಜನ ಪರಿಸರದ ಹೆಸರಿನಲ್ಲಿ ಆದಿಮಾನವರಾಗಲು ಸಿದ್ಧರಿಲ್ಲ. ಜಿಲ್ಲೆಯ ಪರಿಸರವಾದಿಗಳು, ಬುದ್ಧಿಜೀವಿಗಳು ಅಭಿವೃದ್ಧಿ ಯೋಜನೆಗಳಿಗೆ ಪರಿಸರದ ಹೆಸರು ಹೇಳಿ ಅಡ್ಡಗಾಲು ಹಾಕಬಾರದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

ತಾಲ್ಲೂಕಿನ ಗುಳ್ಳಾಪುರದಲ್ಲಿ ₹ 7.16 ಕೋಟಿ ವೆಚ್ಚದಲ್ಲಿ ಸ್ಥಾಪಿಸಲಾದ 33/11 ಕೆ.ವಿ ವಿದ್ಯುತ್ ಉಪಕೇಂದ್ರವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಜಿಲ್ಲೆಯನ್ನು ಪಕ್ಷಾತೀತವಾಗಿ ಸಮಗ್ರ ಅಭಿವೃದ್ಧಿಯತ್ತ ಕೊಂಡೊಯ್ಯುವುದು ನಮ್ಮ ಗುರಿಯಾಗಬೇಕು. ಗುಳ್ಳಾಪುರದಲ್ಲಿ ಗ್ರಿಡ್ ಆಗಬೇಕೆಂಬ ಬಹಳ ವರ್ಷದ ಕನಸು ಇಂದು ನನಸಾಗಿದೆ. ಇದು ಜನರಿಗೆ ವಿದ್ಯುತ್ ಸಮಸ್ಯೆ ನಿವಾರಿಸಲು ಸಹಕಾರಿಯಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ಸಂಸದ ಅನಂತಕುಮಾರ ಹೆಗಡೆ ಮಾತನಾಡಿ, ‘ಅಭಿವೃದ್ಧಿಯ ಕುರಿತು ವಿಸ್ತೃತ ಕಲ್ಪನೆ ಇಲ್ಲದವರು ಅದಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ. ಈ ಹಿಂದೆ ಕೇಂದ್ರದಿಂದ ಭರವಸೆ ಮಾತ್ರ ಸಿಗುತ್ತಿತ್ತು. ಈಗ ಇಚ್ಛಾಶಕ್ತಿ ಹೊಂದಿದ ಸರ್ಕಾರ ಕೇಂದ್ರದಲ್ಲಿದ್ದು, ಅನುದಾನ ಹರಿದು ಬರುತ್ತಿದೆ. ಅಭಿವೃದ್ಧಿಯ ವೇಗ ಹೆಚ್ಚಿದೆ’ ಎಂದರು.

ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ‘ಹೊಸ ಉಪಕೇಂದ್ರದಿಂದ ಗ್ರಾಮೀಣ ಭಾಗಗಳ ವಿದ್ಯುತ್ ಸಮಸ್ಯೆಗಳು ಕಡಿಮೆಯಾಗಲಿವೆ. ಕೊರತೆ ಇರುವ ಸಿಬ್ಬಂದಿ ಹಾಗೂ ಅವರಿಗೆ ಅಗತ್ಯ ಸಲಕರಣೆ, ಸೌಕರ್ಯಗಳನ್ನು ನೀಡಿದರೆ ಹೆಸ್ಕಾಂ ಮತ್ತಷ್ಟು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಲು ಅನುಕೂಲವಾಗಲಿದೆ’ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಚಂದ್ರಕಲಾ ಭಟ್ಟ, ಉಪಾಧ್ಯಕ್ಷೆ ಸುಜಾತಾ ಸಿದ್ದಿ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಶ್ರುತಿ ಹೆಗಡೆ, ಜಗದೀಶ ನಾಯ್ಕ, ಉಪವಿಭಾಗಾಧಿಕಾರಿ ಈಶ್ವರ ಉಳ್ಳಾಗಡ್ಡಿ, ತಹಶೀಲ್ದಾರ್ ಗಣಪತಿ ಶಾಸ್ತ್ರಿ, ಅಂಕೋಲಾ ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಪರಶುರಾಮ ಸಾವಂತ, ಹೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ರೋಶನಿ, ಹೆಸ್ಕಾಂ ಅಧಿಕಾರಿಗಳಾದ ದೀಪಕ್ ಕಾಮತ, ತಿಪ್ಪಣ್ಣ, ಟಿ.ಪಿ.ಶೆಟ್ಟಿ, ಡಿ.ಬಿ.ಕಾಂಬ್ಳೆ, ಮಂಜುನಾಥ, ಮುಖಂಡ ಶ್ರೀಕಾಂತ ಶೆಟ್ಟಿ ಇದ್ದರು.

ಶ್ರದ್ಧಾ ಭಟ್ಟ ಪ್ರಾರ್ಥಿಸಿದರು. ವಿನಾಯಕ ಪೇಟ್ಕರ್ ಸ್ವಾಗತಿಸಿದರು. ಮೇಘರಾಜ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.