ADVERTISEMENT

ನೆರೆ ಹಾನಿ ವೀಕ್ಷಣೆಗೆ ಕೇಂದ್ರ ತಂಡ: ಹೆಚ್ಚಿನ ಪರಿಹಾರಕ್ಕೆ ಮನವರಿಕೆ ಮಾಡಲು ಮನವಿ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2021, 5:41 IST
Last Updated 6 ಸೆಪ್ಟೆಂಬರ್ 2021, 5:41 IST
   

ಯಲ್ಲಾಪುರ: ಕಳೆದ ತಿಂಗಳು ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಆದ ಹಾನಿಯ ವಿವರವನ್ನು ಕಲೆಹಾಕಲು ಕೇಂದ್ರದ ತಂಡವು ಜಿಲ್ಲೆಗೆ ಭೇಟಿ ನೀಡಿದ್ದು, ಸೋಮವಾರ ವಿವಿಧೆಡೆ ಸಂಚರಿಸಲಿದೆ.

ಯಲ್ಲಾಪುರದ ಎ.ಪಿ.ಎಂ.ಸಿ ಆವರಣದಲ್ಲಿ ನಡೆದ ಸಭೆಯಲ್ಲಿ, ಹಾನಿಯ ವಿವರಗಳನ್ನು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ವಿವರಿಸಿದರು. ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿ ಕೈಲಾಸ್ ಸಂಕ್ಲಾ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆಯ ಹಿರಿಯ ಅಧಿಕಾರಿ ಎಸ್.ವಿಜಯಕುಮಾರ್ ಹಾಗೂ ರಾಜ್ಯ ಕೆ.ಎಸ್.ಡಿ.ಎಂ.ಎ.ದ ಹಿರಿಯ ಸಲಹೆಗಾರ ಡಾ.ಜಿ. ಶ್ರೀನಿವಾಸ್ ರೆಡ್ಡಿ ಇವರ ತಂಡಕ್ಕೆ ಮನವರಿಕೆ ಮಾಡಿಕೊಟ್ಟರು.

ಅತಿವೃಷ್ಟಿಯಿಂದ ಜಿಲ್ಲೆಯ ಹಳಿಯಾಳ, ಯಲ್ಲಾಪುರ, ಶಿರಸಿ, ದಾಂಡೇಲಿ, ಅಂಕೋಲಾ, ಕಾರವಾರ ತಾಲ್ಲೂಕಿನಲ್ಲಿ ಹೆಚ್ಚಿನ ಹಾನಿಯಾಗಿದೆ. ಯಲ್ಲಾಪುರ ತಾಲ್ಲೂಕಿನಲ್ಲಿ ಹೆಚ್ಚು ಭೂಕುಸಿತವಾಗಿದ್ದು, ಅದರಲ್ಲಿ ಹೆಚ್ಚಿನ ಪ್ರದೇಶ ಅರಣ್ಯ ಪ್ರದೇಶವಾಗಿದೆ. ಹಾಗಾಗಿ ಜನವಸತಿಗೆ ಹೆಚ್ಚು ಪರಿಣಾಮ ಬೀರಲಿಲ್ಲ. ಆದರೂ ಮನೆಗಳು, ರಸ್ತೆ, ಹೆದ್ದಾರಿ, ಸೇತುವೆ, ಚಿಕ್ಕ ನೀರಾವರಿಗೆ ಹೆಚ್ಚು ಪರಿಣಾಮ ಬೀರಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.

ADVERTISEMENT

ಚಿಕ್ಕ ಮತ್ತು ಅತಿ ಚಿಕ್ಕ ರೈತರಿಗೆ ರೂ. 19.13 ಕೋಟಿ, ಪಶುಸಂಗೋಪನೆಗೆ ರೂ 54 ಲಕ್ಷ, ಮೀನುಗಾರಿಕೆಗೆ ರೂ 30 ಲಕ್ಷ, ಮನೆಹಾನಿಗೆ ರೂ 16.85 ಕೋಟಿ, ರಸ್ತೆ, ಸರ್ಕಾರಿ ಕಟ್ಟಡ, ಹೆದ್ದಾರಿಯಂತಹ ಮೂಲ ಸೌಕರ್ಯಗಳಿಗೆ ರೂ 828 ಕೋಟಿ, ಈ ರೀತಿ ಒಟ್ಟು 863.57 ಕೋಟಿ ರೂಪಾಯಿ ಹಾನಿಯಾಗಿದೆ. ಆದರೆ, ಕೇಂದ್ರ ಸರ್ಕಾರದ ಎಸ್.ಡಿ.ಆರ್.ಎಫ್. ಮತ್ತು ಎನ್.ಡಿ.ಆರ್.ಎಫ್ ಅನ್ವಯ ಕೇವಲ ರೂ 56.25 ಕೋಟಿ ಪರಿಹಾರ ವಿತರಿಸಲು ಸಾಧ್ಯವಿದೆ ಎಂದು ವಿವರಿಸಿದರು.

'ಸರ್ಕಾರದ ವಸತಿ ಯೋಜನೆಯಲ್ಲಿ ಧನಸಹಾಯ ಪಡೆದ ಮನೆ ಹಾನಿಯಾಗಿದ್ದರೆ ಅದರ ವಿವರ ಕಲೆಹಾಕಿ ಪರಿಹಾರದ ಹಣ ದ್ವಿಗುಣವಾಗದಂತೆ ನೋಡಿಕೊಳ್ಳಿ' ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿ ಕೇಲಾಸ್ ಸಂಕ್ಲಾ ಸಲಹೆ ನೀಡಿದರು.

ಸಭೆಗೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ, 'ಕೇಂದ್ರ ತಂಡವನ್ನು ಸನ್ಮಾನಿಸಿದರು. ಜಿಲ್ಲೆಯಲ್ಲಿ ಸುಮಾರು ರೂ 900 ಕೋಟಿ ಹಾನಿಯನ್ನು ಅಂದಾಜಿಸಲಾಗಿದೆ. ಜಿಲ್ಲೆಯ ಜನರ ಪರಿಸ್ಥಿತಿಯನ್ನು ಅವಲೋಕನ ಮಾಡಿ, ಇಲ್ಲಿನ ಸ್ಥಿತಿಯನ್ನು ಕೇಂದ್ರಕ್ಕೆ ಮನವರಿಕೆ ಮಾಡಕೊಟ್ಟು ಹೆಚ್ಚಿನ ಅನುದಾನ ಸಿಗುವಂತೆ ಮಾಡಿ ಜನರಿಗೆ ಅನುಕೂಲ ಮಾಡಿಕೊಡಬೇಕು' ಎಂದು ಮನವಿ ಮಾಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ, ಜಿಲ್ಲಾ ಪಂಚಾಯ್ತಿ ಸಿ.ಇ.ಒ ಪ್ರಿಯಾಂಗಾ ಎಂ., ಶಿರಸಿ ಉಪ ವಿಭಾಗಾಧಿಕಾರಿ ಆಕೃತಿ ಬನ್ಸಾಲ್, ತಹಶೀಲ್ದಾರ್ ಶ್ರೀಕೃಷ್ಣ ಕಾಮ್ಕರ್, ಜಿಲ್ಲೆ ಮತ್ತು ತಾಲ್ಲೂಕಿನ ಹಿರಿಯ ಅಧಿಕಾರಿಗಳಿದ್ದರು.

ನಂತರ ಕೇಂದ್ರ ತಂಡವು ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆಗೆ ತೆರಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.