ADVERTISEMENT

ಚಂಡಿಕಾ ಸೇತುವೆ: ಎರಡು ತಿಂಗಳಲ್ಲಿ ಆರು ಬಾರಿ ಜಲಾವೃತ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2024, 14:04 IST
Last Updated 1 ಆಗಸ್ಟ್ 2024, 14:04 IST
ಕುಮಟಾ ತಾಲ್ಲೂಕಿನ ಉಪ್ಪಿನಪಟ್ಟಣ-ಕಗತಾಲ ನಡುವಿನ ಚಂಡಿಕಾ ಹೊಳೆಯ ಸೇತುವೆ ಮುಳುಗಡೆಯಾಗಿರುವುದು
ಕುಮಟಾ ತಾಲ್ಲೂಕಿನ ಉಪ್ಪಿನಪಟ್ಟಣ-ಕಗತಾಲ ನಡುವಿನ ಚಂಡಿಕಾ ಹೊಳೆಯ ಸೇತುವೆ ಮುಳುಗಡೆಯಾಗಿರುವುದು   

ಕುಮಟಾ: ತಾಲ್ಲೂಕಿನ ಅಳಕೋಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕತಗಾಲ ಮತ್ತು ಉಪ್ಪಿನಪಟ್ಟಣ ನಡುವಿನ ಹಲವು ಗ್ರಾಮಗಳನ್ನು ಸಂಪರ್ಕಿಸುವ ಚಂಡಿಕಾ ಹೊಳೆಯ ಸುಮಾರು 45 ವರ್ಷಗ ಹಿಂದಿನ ಸೇತುವೆ. ಈ ವರ್ಷದ ಎರಡು ತಿಂಗಳ ಅವಧಿಯ ಮಳೆಯಲ್ಲಿ ಆರು ಬಾರಿ ಮುಳುಗಡೆಯಾಗಿ ಜನರಿಗೆ ತೊಂದರೆ ಉಂಟಾಗಿದೆ.

ದಟ್ಟ ಕಾಡಿನಿಂದಾವೃತವಾದ ದೂರದ ಯಾಣದಿಂದ ಹರಿದು ಬರುವ ಚಂಡಿಕಾ ಹೊಳೆಗೆ ಕುಮಟಾ- ಶಿರಸಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಕತಗಾಲದಿಂದ ಒಂದು ಕಿ.ಮೀ ದೂರದ ಉಪ್ಪಿನಪಟ್ಟಣ ಬಳಿ ಸೇತುವೆ ಇದೆ. ಈ ಸೇತುವೆ ಕತಗಾಲದಿಂದ ಉಪ್ಪಿನಪಟ್ಟಣ, ಶಿರಗುಂಜಿ, ಮಲವಳ್ಳಿ, ಕಂದಳ್ಳಿ, ಭಂಡಿವಾಳ, ಕವಲೋಡಿ ಗ್ರಾಮಗಳಿಗೆ ಮುಖ್ಯ ಸಂಪರ್ಕ ಕೊಂಡಿಯಾಗಿದೆ. ಈ ಗ್ರಾಮಗಳಿಂದ ಕತಗಾಲ, ಕುಮಟಾಕ್ಕೆ ಶಾಲಾ-ಕಾಲೇಜಿಗೆ ನೂರಾರು ವಿದ್ಯಾರ್ಥಿಗಳು ಬರುತ್ತಾರೆ.

ಕುಮಟಾದಿಂದ ಶಿರಗುಂಜಿಗೆ ನಿತ್ಯ ಬಸ್ ವ್ಯವಸ್ಥೆ ಕೂಡ ಇದೆ. ಸೇತುವೆ ಅಡಿ ಹರಿಯುವ ಚಂಡಿಕಾ ಹೊಳೆ ಸಮೀಪದಲ್ಲಿಯೇ ಅಘನಾಶಿನಿ ಸೇರುವುದರಿಂದ ಅಘನಾಶಿನಿಗೆ ಪ್ರವಾಹ ಬಂದಾಗ ಚಂಡಿಕಾ ಸೇತುವೆ ಸಂಪೂರ್ಣ ಜಲಾವೃತವಾಗಿ ಸಂಚಾರ ಸ್ಥಗಿತಗೊಳ್ಳುತ್ತದೆ.

ADVERTISEMENT

ಸ್ಥಳೀಯ ಗ್ರಾಮ ಪಂಚಾಯ್ತಿ ಸದಸ್ಯ ಮಹೇಶ ದೇಶಭಂಡಾರಿ, ಸೇತುವೆ ಕಂಬಕ್ಕೆ ಪ್ರವಾಹದಲ್ಲಿ ತೇಲಿ ಬರವ ಮರಗಳು ಡಿಕ್ಕಿ ಹೊಡೆದು ಶಿಥಿಲಗೊಂಡಿವೆ. ಸಂಜೆ ಹೊತ್ತು ಸೇತುವೆ ಜಲಾವೃತಗೊಂಡು ಮಳೆ ಜೋರಾದರೆ ವಿದ್ಯಾರ್ಥಿಗಳು ಸಾರ್ವಜನಿಕರು ಸೇತುವೆಯ ಆಚೆ-ಈಚೆಯೇ ಇರುವಂಥ ಸ್ಥಿತಿ ನಿರ್ಮಾಣವಾಗುತ್ತದೆ. ಸೇತುವೆಯ ಎರಡೂ ಬದಿಗೆ ರಕ್ಷಣಾ ವ್ಯವಸ್ಥೆ ಇಲ್ಲದ್ದರಿಂದ ಜಲಾವೃತಗೊಂಡ ಸೇತುವೆ ದಾಟುವಾಗ ರಭಸದ ನೀರಿಗೆ ಜನರು ಕೊಚ್ಚಿ ಹೋಗು ಅಪಾಯ ಇದೆ. ಹೊಸ ಸೇತುವೆ ನಿರ್ಮಾಣದ ಬಗ್ಗೆ ಸ್ಥಳೀಯ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಗಜಾನನ ಪೈ ನೇತೃತ್ವದಲ್ಲಿ ಉಪವಿಭಗಾಧಿಕಾರಿಗೆ ಮನವಿ ಸಹ ನೀಡಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.