ಕುಮಟಾ: ಧರ್ಮಸ್ಥಳದ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರ ಈ ವರ್ಷದ ಚಾತುರ್ಮಾಸ ವ್ರತ ಆಚರಣೆಗೆ ತಾಲ್ಲೂಕಿನ ಕೋನಳ್ಳಿಯ ವನದುರ್ಗಾ ಕಲ್ಯಾಣ ಮಂಟಪ ಸಜ್ಜುಗೊಂಡಿದ್ದು, ಇದಕ್ಕಾಗಿಯೇ ವಿಶೇಷ ‘ಗುರು ಭವನ’ ನಿರ್ಮಾಣಗೊಂಡಿದೆ.
ಸಂಯಮ, ಶೃದ್ಧೆಯ ಪ್ರತೀಕವಾಗಿರುವ, ಆಧ್ಯಾತ್ಮಿಕ ಪ್ರಗತಿಗೆ ಸಹಕಾರಿ ಆಗಲಿದೆ ಎಂಬ ನಂಬಿಕೆ ಹೊಂದಿರುವ ಚಾತುರ್ಮಾಸ ವೃತಾಚರಣೆಗೆ ಬಹುಪ್ರಾಮುಖ್ಯತೆ ಇದೆ. ಸ್ವಾಮೀಜಿ ಈ ಬಾರಿ ಕುಮಟಾದ ಕೋನಳ್ಳಿಯನ್ನು ಪವಿತ್ರ ಚಾತುರ್ಮಾಸ ವೃತಾಚರಣೆಗೆ ಆಯ್ದುಕೊಂಡಿರುವುದು ಈ ಭಾಗದ ಭಕ್ತ ವಲಯದಲ್ಲಿ ಸಂತಸ ಇಮ್ಮಡಿಸಿದೆ.
ಚಾತುರ್ಮಾಸ ವ್ರತಾಚರಣೆಯನ್ನು ಇಲ್ಲಿಯೇ ಕೈಗೊಳ್ಳಲು ಕೋನಳ್ಳಿ ವನದುರ್ಗಾ ದೇವಾಲಯ ಹಾಗೂ ಕಲ್ಯಾಣ ಮಂಟಪ ಸಮಿತಿ ಅಧ್ಯಕ್ಷ ಎಚ್.ಆರ್.ನಾಯ್ಕ ಅವರ ನೇತೃತ್ವದ ನಿಯೋಗ ಕಳೆದ ವರ್ಷವೇ ಸ್ವಾಮೀಜಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತ್ತು. ಇದಕ್ಕೆ ಸ್ವಾಮೀಜಿ ಸಮ್ಮತಿಸಿದ್ದರು. ಚಾತುರ್ಮಾಸ ವ್ರತಾಚರಣೆ ಸಂದರ್ಭದಲ್ಲಿ ಶ್ರೀಗಳ ವಾಸ್ತವ್ಯಕ್ಕಾಗಿ ಕೋನಳ್ಳಿ ಗ್ರಾಮಸ್ಥರು ಸುಮಾರು ₹40 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಕೇವಲ ಮೂರು ತಿಂಗಳ ಅವಧಿಯಲ್ಲಿ ಗುರು ಭವನ ನಿರ್ಮಿಸಿದ್ದಾರೆ.
ಕೋನಳ್ಳಿಯಲ್ಲಿ ನಡೆಯುವ ಚಾತುರ್ಮಾಸ ವ್ರತವನ್ನು ಐತಿಹಾಸಿಕ ಕಾರ್ಯಕ್ರಮವಾಗಿಸಲು ಚಾತುರ್ಮಾಸ್ಯ ಸಮನ್ವಯ ಸಮಿತಿ ಹಗಲಿರಳು ಶ್ರಮಿಸುತ್ತಿದೆ.
‘ಕೋನಳ್ಳಿಯಲ್ಲಿ ಚಾತುರ್ಮಾಸ ನಡೆಸುವಂತೆ ಗ್ರಾಮಸ್ಥರೆಲ್ಲ ಸೇರಿ ಶ್ರೀಗಳಲ್ಲಿ ಕೇಳಿಕೊಂಡಾಗ ಅವರು ಪ್ರೀತಿಯಿಂದ ಒಪ್ಪಿಕೊಂಡಿದ್ದಾರೆ. ಅವರು ನಮ್ಮ ಮೇಲೆ ಇಟ್ಟ ವಿಶ್ವಾಸಕ್ಕೆ ಪ್ರತಿಯಾಗಿ ನಾವು ಕಾರ್ಯಕ್ರಮ ಯಶಸ್ವಿಗೊಳಿಸಲು ಪಣ ತೊಟ್ಟಿದ್ದೇವೆ. ಎಲ್ಲ ಸಮಾಜದ ಬಂಧುಗಳು ಪಾಲ್ಗೊಳ್ಳುವಂತೆ ಮಾಡುವ ಮೂಲಕ ಸೋದರತ್ವ ಬಿತ್ತುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಇದು ಶ್ರೀಗಳ ಆಶಯವೂ ಹೌದು. ಸುತ್ತಲಿನ ಎಲ್ಲ ಸಮಾಜದ ಬಂಧುಗಳು ಕಾಯಕ್ರಮದ ತಯಾರಿಯಲ್ಲಿ ನಮ್ಮೊಂದಿಗೆ ಕೈ ಜೋಡಿಸಿದ್ದಾರೆ’ ಎಂದು ಸಮಿತಿ ಅಧ್ಯಕ್ಷ ಎಚ್.ಆರ್.ನಾಯ್ಕ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.