ADVERTISEMENT

ಹುಲಿಹೊಂಡ: ಕಬ್ಬಿನ ಗದ್ದೆಯಲ್ಲಿ ಕಾಣಿಸಿಕೊಂಡ ಚಿರತೆ ಮರಿಗಳು

​ಪ್ರಜಾವಾಣಿ ವಾರ್ತೆ
Published 17 ಜನವರಿ 2024, 6:57 IST
Last Updated 17 ಜನವರಿ 2024, 6:57 IST
   

ಮುಂಡಗೋಡ: ತಾಲ್ಲೂಕಿನ ಹುಲಿಹೊಂಡ ಗ್ರಾಮದ ಸನಿಹದ ಕಬ್ಬಿನ ಗದ್ದೆಯಲ್ಲಿ ಚಿರತೆ ಮರಿಗಳು ಪ್ರತ್ಯಕ್ಷವಾಗಿದ್ದು, ಕಬ್ಬು ಕಟಾವು ಮಾಡಲು ಹೋಗಿದ್ದ ಕಾರ್ಮಿಕರು ಭಯದಿಂದ ಕಬ್ಬು ಕಟಾವು ಮಾಡದೇ ಮರಳಿದ್ದಾರೆ.

ರೈತ ಶಿವಾನಂದ ಕೆಂಗಾಪುರ ಎಂಬುವರ ಗದ್ದೆಯಲ್ಲಿದ್ದ ಕಬ್ಬನ್ನು ಕಟಾವು ಮಾಡುತ್ತಿದ್ದಾಗ ಎರಡು ಚಿರತೆ ಮರಿಗಳು ಪ್ರತ್ಯಕ್ಷವಾಗಿವೆ. ಚಿರತೆ ಮರಿಗಳನ್ನು ಕೈಯಲ್ಲಿ ಎತ್ತಿಕೊಂಡು ಅನತಿ ದೂರದಲ್ಲಿ ಇಟ್ಟಿದ್ದಾರೆ. ಕಟಾವು ಮಾಡಿದ ಕಬ್ಬನ್ನು ಲಾರಿಗೆ ತುಂಬುವಾಗ ತಾಯಿ ಚಿರತೆಯು ಕಾರ್ಮಿಕರ ಮೇಲೆ ದಾಳಿ ಮಾಡುವ ಪ್ರಯತ್ನ ಮಾಡಿದೆ. ಆತಂಕಗೊಂಡ ಕಾರ್ಮಿಕರು ಲಾರಿ ಏರಿ ಜೀವ ಉಳಿಸಿಕೊಂಡಿದ್ದಾರೆ.

ಜ.12ರಂದು ಚಿರತೆ ಮರಿ ಪ್ರತ್ಯಕ್ಷವಾಗಿದ್ದರೂ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ರೈತರಿಂದ ಕೇಳಿಬರುತ್ತಿದೆ.

ADVERTISEMENT

ಮರಿಗಳನ್ನು ಸನಿಹದ ಕಬ್ಬಿನ ಗದ್ದೆಗೆ ಮತ್ತೆ ಕರೆದುಕೊಂಡು ಹೋಗಿರುವ ತಾಯಿ ಚಿರತೆಯು, ಮಂಗಳವಾರ ರಾತ್ರಿ ಟಾರ್ಚ್ ಬೆಳಕಿಗೆ ಮುಖ ಮಾಡಿ ಚೀರುತ್ತ ಬಂದಿದೆ. ಬುಧವಾರ ಅರಣ್ಯ ಸಿಬ್ಬಂದಿ ಗದ್ದೆಗೆ ಭೇಟಿ ನೀಡಿ, ಚಿರತೆಯ ಚಲನವಲನ ವೀಕ್ಷಿಸಿದರು.

ಕಬ್ಬಿನ ಗದ್ದೆಯಲ್ಲಿಯೇ ಚಿರತೆ ತನ್ನ ಮರಿಗಳೊಂದಿಗೆ ಬಿಡಾರ ಹೂಡಿದ್ದರಿಂದ ಕಬ್ಬು ಕಟಾವು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

'ಕಳೆದ ನಾಲ್ಕು ದಿನಗಳ ಹಿಂದೆ ಎರಡು ಚಿರತೆ ಮರಿಗಳು ಕಬ್ಬಿನ ಗದ್ದೆಯಲ್ಲಿ ಪ್ರತ್ಯಕ್ಷವಾಗಿದ್ದವು. ಮಾರನೇ ದಿನ ಮರಿಗಳನ್ನು ಮತ್ತೊಂದು ಕಬ್ಬಿನ ಹದ್ದೆಗೆ ಕರೆದುಕೊಂಡು ಹೋಗಿದೆ. ಕಬ್ಬು ಕಟಾವು ಮಾಡುವಾಗ ಚಿರತೆ ದಾಳಿ ಮಾಡಿದ್ದರಿಂದ ಆತಂಕಗೊಂಡ ಕೂಲಿಕಾರ್ಮಿಕರು ಕಬ್ಬನ್ನು ಸ್ಥಳದಲ್ಲಿಯೇ ಬಿಟ್ಟು ಹೋಗಿದ್ದಾರೆ' ಎಂದು ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷ ಹನಮಂತ ಕಂಬಾರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.