ದಾಂಡೇಲಿ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡುವ ಕೂಲಿಕಾರರ ಮಕ್ಕಳ ಲಾಲನೆ ಪಾಲನೆಗೆ ಅನುಕೂಲವಾಗಲು ದಾಂಡೇಲಿ ತಾಲ್ಲೂಕಿನ ಮೂರು ಕಡೆ ಶಿಶುಪಾಲನಾ ಕೇಂದ್ರ ನಿರ್ಮಿಸಲಾಗಿದ್ದು ಫೆಬ್ರುವರಿ ಎರಡನೇ ವಾರದಲ್ಲಿ ಕಾರ್ಯಾರಂಭ ಮಾಡಲಿವೆ.
ಅಂಬಿಕಾನಗರ, ಆಲೂರು, ಅಂಬೇವಾಡಿಯ ಪಂಚಾಯಿತಿ ವ್ಯಾಪ್ತಿಯ ಮೂರು ಕಡೆ ಕೂಸಿನ ಮನೆ ಶಿಶು ಪಾಲನಾ ಕೇಂದ್ರಗಳನ್ನಾಗಿ ಲಭ್ಯವಿರುವ ಕಟ್ಟಡಗಳನ್ನೇ ಪರಿವರ್ತಿಸಲಾಗಿದೆ. ಸುಣ್ಣ, ಬಣ್ಣ ಹಾಗೂ ಆಕರ್ಷಕ ಚಿತ್ತಾರಗಳನ್ನು ಬಿಡಿಸಲಾಗಿದೆ.
ಕೂಲಿಕಾರರ ಬೇಡಿಕೆಯಂತೆ 6 ತಿಂಗಳಿಂದ 3 ವರ್ಷದೊಳಗಿನ ಮಕ್ಕಳನ್ನು ಪೋಷಿಸಲು ಕೂಸಿನ ಮನೆ ಪರಿಕಲ್ಪನೆ ಜಾರಿಗೆ ತರಲಾಗಿದೆ. ಕೆಲಸದ ವೇಳೆ ತಾಯಂದಿರಿಗೆ ಅನುಕೂಲವಾಗುವಂತೆ ನರೇಗಾ ಯೋಜನೆಯಡಿ ಈ ಸೌಲಭ್ಯ ಕಲ್ಪಿಸಿದ್ದು ಗ್ರಾಮ ವ್ಯಾಪ್ತಿಯಲ್ಲಿ ಲಭ್ಯವಿರುವ ಕಟ್ಟಡವನ್ನು ಈಗ ಕೂಸಿನ ಮನೆಯನ್ನಾಗಿ ಪರಿವರ್ತಿಸಲಾಗಿದೆ.
ಅಡುಗೆ ಕೋಣೆ, ಸುಸಜ್ಜಿತ ಶೌಚಾಲಯ, ಬಾತ್ ರೂಮ್, ಆಟಿಕೆಗಳು, ಪೀಠೋಪಕರಣಗಳು ಹಾಗೂ ಮಕ್ಕಳಿಗೆ ಊಟೋಪಚಾರಕ್ಕೆ ಸಾಮಗ್ರಿಗಳನ್ನು ಒದಗಿಸಲಾಗಿದ್ದು ಪಿಡಿಒಗಳು ಈ ಕೇಂದ್ರದ ಮೇಲುಸ್ತುವಾರಿ ನೋಡಿಕೊಳ್ಳಲಿದ್ದಾರೆ.
‘ಸರ್ಕಾರ ನೀಡಿರುವ ₹ 1 ಲಕ್ಷ ಅನುದಾನದಲ್ಲಿ ಶಿಶು ಕೇಂದ್ರಕ್ಕೆ ಬೇಕಾದ ಶಿಶುಗಳಿಗೆ ಪೂರಕ ಪೌಷ್ಟಿಕ ಆಹಾರ, ತೊಟ್ಟಿಲು, ಆಟಿಕೆ ಪರಿಕರಗಳ ಖರೀದಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಿ ಒಪ್ಪಿಗೆ ಪಡೆಯುವ ಕೆಲಸ ಪ್ರಗತಿಯಲ್ಲಿದೆ. ಮನರೇಗಾ ಜಾಬ್ ಕಾರ್ಡ್ ಹೊಂದಿರುವ 10ನೇ ತರಗತಿ ಉತ್ತೀರ್ಣರಾಗಿರುವ ಮಹಿಳೆಯರನ್ನು ಕೇರ್ ಟೇಕರ್‌ಗಳಾಗಿ ನೇಮಿಸಿ, ಕಳೆದ ತಿಂಗಳು ಜೊಯಿಡಾದಲ್ಲಿ ತರಬೇತಿ ನೀಡಲಾಗಿದೆ. ಇನ್ನೇನು ಕಾರ್ಯಾರಂಭ ಮಾಡಲು ಸಕಲ ಸಿದ್ಧತೆ ಮಾಡಲಾಗಿದೆ. ಕೆರೆ ಹೂಳು ಎತ್ತುವ, ಬೇರೆ ಪರಿಹಾರ ಕಾಮಗಾರಿಗಳು ಆರಂಭವಾದ ತಾಯಂದಿರು ತಮ್ಮ ಮಕ್ಕಳನ್ನು ನಿಶ್ಚಿಂತೆಯಿಂದ ಇಲ್ಲಿ ಬಿಟ್ಟು ಹೋಗಬಹುದು’ ಎನ್ನುತ್ತಾರೆ ದಾಂಡೇಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ ಹಾಲಮ್ಮನವರ.
ಕೂಲಿಕಾರರ ಮಕ್ಕಳ ಜವಾಬ್ದಾರಿ ನೋಡಿಕೊಳ್ಳುವ ಸಲುವಾಗಿ ಸರ್ಕಾರ ಜಾರಿಗೊಳಿಸಿರುವ ಈ ಯೋಜನೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ, ಕೂಸಿನ ಕೇಂದ್ರಗಳನ್ನು ಸರಿಯಾಗಿ ನಿರ್ವಹಣೆ ಮಾಡಿ ಯೋಜನೆ ನಿರಂತರವಾಗಿ ಇರುವಂತೆ ಮಾಡಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.