ADVERTISEMENT

ಮಕ್ಕಳ ಸಹಾಯವಾಣಿ: ಮೈತ್ರಿ ಸಪ್ತಾಹ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2019, 12:26 IST
Last Updated 13 ನವೆಂಬರ್ 2019, 12:26 IST
ಸ್ಟೀಫನ್ ಡಿಸೋಜಾ
ಸ್ಟೀಫನ್ ಡಿಸೋಜಾ   

ಕಾರವಾರ: ‘ಮಕ್ಕಳ ಸಹಾಯವಾಣಿಯೊಂದಿಗೆ ಮೈತ್ರಿ ಸಪ್ತಾಹ ಕಾರ್ಯಕ್ರಮವನ್ನು ಜಿಲ್ಲೆಯ ವಿವಿಧೆಡೆ ಹಮ್ಮಿಕೊಳ್ಳಲಾಗಿದೆ. ನವೆಂಬರ್14ರಂದು ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಚೇರಿಯಲ್ಲಿ ಉದ್ಘಾಟನೆಯಾಗಲಿದೆ’ ಎಂದು ಕೆಡಿಡಿಸಿ ಸಹಾಯಕ ನಿರ್ದೇಶಕ ಫಾದರ್ ಸ್ಟೀಫನ್ ಡಿಸೋಜಾ ತಿಳಿಸಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಮೊದಲ ದಿನ ಸಹಿ ಸಂಗ್ರಹಣೆ, ಪ್ರತಿಜ್ಞಾ ವಿಧಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಅರಿವು ಕಾರ್ಯಕ್ರಮ ಆಯೋಜಿಸಲಾಗಿದೆ. ಮಕ್ಕಳ ಹಕ್ಕುಗಳ ಬಗ್ಗೆ 15ರಂದು ಕಾರವಾರದ ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಜಾಗೃತಿ ಮೂಡಿಸಲಾಗುವುದು’ ಎಂದರು.

‘16ರಂದು ಅಂತರ್ಜಾಲ ಸುರಕ್ಷತೆ, ಪೊಕ್ಸೊ ಕಾಯ್ದೆ ಹಾಗೂ ಅಸುರಕ್ಷಿತ ಸ್ಪರ್ಶ ಕುರಿತು ಅಂಕೋಲಾದ ಕೆಎಲ್‌ಇ ಕಾಲೇಜಿನಲ್ಲಿವಿದ್ಯಾರ್ಥಿಗಳಿಗೆ ಅರಿವು ಕಾರ್ಯಕ್ರಮ ಏರ್ಪಡಿಸಲಾಗಿದೆ. ಅದೇ ದಿನ ಶಿರಸಿಯ ಅಜಿತ್ ಮನೋಚೇತನ ಟ್ರಸ್ಟ್‌ನಲ್ಲಿ ವಿಶೇಷ ಮಕ್ಕಳಿಗೆಚಿತ್ರಕಲೆ ಮತ್ತು ಆಟೋಟಗಳ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ. 18ರಂದು ಅವರ್ಸಾದ ಗ್ರಾಮ ಪಂಚಾಯ್ತಿ ಸಭಾಭವನದಲ್ಲಿ ಬಾಲನ್ಯಾಯ ಕಾಯ್ದೆ, ಮಕ್ಕಳ ಸಹಾಯವಾಣಿ ಕುರಿತು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ತರಬೇತಿ ನೀಡಲಾಗುವುದು. ಅದೇ ದಿನ ಶಿರಸಿ ಬಸ್ ನಿಲ್ದಾಣದಲ್ಲಿ ಜಾಗೃತಿ ಕಾರ್ಯಕ್ರಮವಿದೆ’‍ ಎಂದು ತಿಳಿಸಿದರು.

ADVERTISEMENT

‘19ರಂದುಉಳಗಾದಲ್ಲಿ ಮಕ್ಕಳ ಹಕ್ಕು ಮತ್ತು ಮಕ್ಕಳ ಸಹಾಯವಾಣಿ ಸೇವೆ ಬಗ್ಗೆ ಸಮುದಾಯದ ಜನರಿಗೆ ಅರಿವು ಸಮಾರಂಭವಿದೆ. ಅಂದು ಶಿರಸಿಯ ಮಾರ್ಕೆಟ್ ಹಾಗೂ ಸಿ.ಪಿ ಬಜಾರ್ ಸುತ್ತಮುತ್ತ ಮಾದಕ ವಸ್ತುಗಳ ದುಷ್ಪರಿಣಾಮ ಕುರಿತು ಜಾಥಾ ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.

‘ಪೊಕ್ಸೊ ಕಾಯ್ದೆ, ಸುರಕ್ಷಿತ ಮತ್ತು ಅಸುರಕ್ಷಿತ ಸ್ಪರ್ಶದ ಬಗ್ಗೆ20ರಂದು ಕೆರವಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಅರಿವು ಕಾರ್ಯಕ್ರಮ ಆಯೋಜಿಸಲಾಗಿದೆ. ಆ ದಿನ ಶಿರಸಿಯ ಮಾರಿಕಾಂಬಾ ಪಿಯು ಕಾಲೇಜಿನಲ್ಲಿ ದೈಹಿಕ ದೌರ್ಜನ್ಯ, ಅಂತರ್ಜಾಲ ದುರ್ಬಳಕೆ ಹಾಗೂ ಮಾದಕ ವಸ್ತುಗಳ ದುರ್ಬಳಕೆ ಬಗ್ಗೆ ಜಾಗೃತಿಮೂಡಿಸಲಾಗುವುದು. 21ರಂದು ಕಾರವಾರದ ಕೆಡಿಡಿಸಿ ಕಚೇರಿಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಶಿರಸಿಯ ಆವೆ ಮಾರಿಯಾ ಪ್ರೌಢಶಾಲೆಯಲ್ಲಿ ಮಕ್ಕಳ ಹಕ್ಕುಗಳು ಮತ್ತು ರಕ್ಷಣೆ ಬಗ್ಗೆ ಭಾಷಣ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ’ ಎಂದರು.

ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಮುಖರಾದ ಮಾರುತಿ ನಾಯ್ಕ, ದಾನೇಶ್ವರಿ, ಸುಬ್ರಹ್ಮಣ್ಯ ಶಿರೂರು, ಉಮೇಶ ಮರಾಠಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.