ADVERTISEMENT

ಮಣಿಪುರ ಘಟನೆ ಖಂಡಿಸಿ ಕ್ರೈಸ್ತ ಸಮುದಾಯದವರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2023, 6:58 IST
Last Updated 31 ಜುಲೈ 2023, 6:58 IST
   

ಕಾರವಾರ: ಮಣಿಪುರದಲ್ಲಿ ನಡೆದ ಹಿಂಸಾಚಾರ ಖಂಡಿಸಿ ಕಾರವಾರ ಧರ್ಮಪ್ರಾಂತ್ಯ ಮತ್ತು ಜಿಲ್ಲೆಯ ಕ್ರೈಸ್ತ ಸಂಘಟನೆಗಳು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಇಲ್ಲಿನ ಮಿತ್ರ ಸಮಾಜ ಮೈದಾನದಿಂದ ಮೆರವಣಿಗೆ ಆರಂಭಿಸಲಾಯಿತು. ಜಿಲ್ಲೆಯ ವಿವಿಧೆಡೆಗಳಿಂದ ನೂರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು. ಯಾವುದೇ ಘೋಷಣೆ ಕೂಗದೆ ಮೌನವಾಗಿ ಹೆಜ್ಜೆ ಹಾಕಿದರು. ಹಿಂಸೆ ಬೇಡ ಶಾಂತಿ ಬೇಕು, ಮೌನ ಬೇಡ ಶಾಂತಿ ಬೇಕು ಎಂಬ ಭಿತ್ತಿ ಫಲಕ ಪ್ರದರ್ಶಿಸಲಾಯಿತು.

ಜಿಲ್ಲಾಧಿಕಾರಿ ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿದ ಕ್ರೈಸ್ತ ಸಮುದಾಯದವರು ಹಿಂಸಾಚಾರಕ್ಕೆ ತುತ್ತಾಗಿ ನೆಲೆ ಕಳೆದುಕೊಂಡವರಿಗೆ ನ್ಯಾಯ ಒದಗಿಸಲು ಒತ್ತಾಯಿಸಿದರು.

ADVERTISEMENT

ಹಿಂಸಾಚಾರದಲ್ಲಿ ಹಲವಾರು ಅಮಾಯಕರು ಕೊಲ್ಲಲ್ಪಟ್ಟಿದ್ದಾರೆ. ದಂಗೆಯಲ್ಲಿ 400ಕ್ಕೂ ಅಧಿಕ ಪ್ರಾರ್ಥನಾ ಮಂದಿರಗಳನ್ನು ಕಿಡಿಗೇಡಿಗಳು, ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ಮಹಿಳೆಯರನ್ನು ಅಮಾನುಷವಾಗಿ ನಡೆಸಿಕೊಳ್ಳಲಾಗಿದೆ ಎಂದು ಆರೋಪಿಸಿದರು.

ನಾಗರಿಕ ಸಮಾಜ ತಲೆತಗ್ಗಿಸುವ ಘಟನೆಯನ್ನು ದೇಶ ಒಕ್ಕೊರಲಿನಿಂದ ಖಂಡಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಬೆಳಗಾವಿ ಧರ್ಮಪ್ರಾಂತ್ಯದ ಅಧ್ಯಕ್ಷ ಡೆರಿಕ್ ಫರ್ನಾಂಡಿಸ್, 'ಜನಾಂಗೀಯ ವೈಷಮ್ಯದ ಕೃತ್ಯ ತಲೆತಗ್ಗಿಸುವಂತಿದೆ. ಅಮಾಯಕರ ಮೇಲೆ ಹಿಂಸಾಚಾರ ನಡೆಸಿದ್ದು ತಪ್ಪು. ಸಂತ್ರಸ್ತರಿಗೆ ನ್ಯಾಯ ಸಿಗಲಿ' ಎಂದರು.

ಸೈಮನ್ ಟೆಲ್ಲಿಸ್, ಸಿಕ್ವೆರಾ, ಸೆಲ್ವದೋರ್ ರೋಡ್ರಿಗಸ್, ಪೀಟರ್ ಗೊನ್ಸಾಲ್ವಿಸ್, ಸ್ಯಾಮ್ಸನ್ ಡಿಸೋಜಾ, ಅಲ್ಫಾನ್ಸೊ ಸ್ಟ್ಯಾನಿ, ಫ್ರ್ಯಾಂಕಿ ಗುಡ್ಹೊನೊ, ಜಾರ್ಜ್ ಫರ್ನಾಂಡಿಸ್, ಲಿಯೊ ಲೂಯಿಸ್, ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.