ADVERTISEMENT

‘ಸಮಿತಿಯ ಸಲಹೆ ಪಡೆದೇ ತರಗತಿ ಪ್ರಾರಂಭ’

ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2021, 12:27 IST
Last Updated 11 ಸೆಪ್ಟೆಂಬರ್ 2021, 12:27 IST
ಬಿ.ಸಿ.ನಾಗೇಶ್
ಬಿ.ಸಿ.ನಾಗೇಶ್   

ಹೊನ್ನಾವರ (ಉತ್ತರ ಕನ್ನಡ): ‘ಒಂದನೇ ತರಗತಿಯಿಂದ ಭೌತಿಕ ಬೋಧನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದರೆ, ಕೋವಿಡ್ ಸಂಬಂಧ ತಾಂತ್ರಿಕ ಸಲಹಾ ಸಮಿತಿಯ ಅಭಿಪ್ರಾಯ ಪಡೆಯದೇ ತರಗತಿಗಳನ್ನು ಪ್ರಾರಂಭಿಸುವುದಿಲ್ಲ’ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟಪಡಿಸಿದ್ದಾರೆ.

ತಾಲ್ಲೂಕಿನ ಬಂಗಾರಮಕ್ಕಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಂದಿನ ಶೈಕ್ಷಣಿಕ ವರ್ಷದಿಂದಲೇ ಎನ್.ಇ.ಪಿ ಅಡಿ ಬೋಧನೆ ಆರಂಭಿಸಲು ಪ್ರಯತ್ನಿಸಲಾಗುತ್ತಿದೆ’ ಎಂದೂ ತಿಳಿಸಿದರು.

ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ (ಎನ್ಇಪಿ) ಕಾಂಗ್ರೆಸ್ ವಿರೋಧದ ಬಗ್ಗೆ ಪ್ರತಿಕ್ರಿಯಿಸಿ, ‘ಕಸ್ತೂರಿ ರಂಗನ್‌ ಅವರಂಥ ಮೇಧಾವಿಯ ನೇತೃತ್ವದಲ್ಲಿ ಸಿದ್ಧಪಡಿಸಲಾದ ನೀತಿಯನ್ನು ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ವ್ಯಂಗ್ಯವಾಡುತ್ತಾರೆ. ಮನಮೋಹನ್ ಸಿಂಗ್ ಅವರಿಗೆ 10 ವರ್ಷ ಸಲಹೆಗಾರ ಆಗಿದ್ದವರ ಬಗ್ಗೆಯೇ ಟೀಕಿಸುತ್ತಾರೆ. ಕಸ್ತೂರಿ ರಂಗನ್ ಅವರು ಮನಮೋಹನ್ ಸಿಂಗ್ ಜತೆಗಿದ್ದಾಗ ಸರಿ, ಹೊರ ಬಂದಾಗ ಆರ್‌.ಎಸ್‌.ಎಸ್ ಎಂದು ಅರ್ಥವೇ’ ಎಂದು ಪ್ರಶ್ನಿಸಿದರು.

ADVERTISEMENT

ಪಠ್ಯ ಪುನರ್ ರಚನೆ ಪರಿಶೀಲನಾ ಸಮಿತಿಯ ನೇಮಕದ ಬಗ್ಗೆ ಕಾಂಗ್ರೆಸ್ ಮುಖಂಡರ ಅಸಮಾಧಾನದ ಕುರಿತು ಮಾತನಾಡಿದ ಅವರು, ‘ಬಿ.ಜೆ.ಪಿ.ಯವರು ಏನೇ ಮಾಡಿದರೂ ಟೀಕಿಸುವ ಕೆಟ್ಟ ಅಭ್ಯಾಸ ಕಾಂಗ್ರೆಸ್‌ನವರದ್ದಾಗಿದೆ. ಕಾಂಗ್ರೆಸ್‌ಗೆ ಆಡಳಿತ ಪಕ್ಷವಾಗಿ ವರ್ತಿಸಿ ಗೊತ್ತಿದೆಯೇ ಹೊರತು ವಿರೋಧ ಪಕ್ಷವಾಗಿ ಗೊತ್ತಿಲ್ಲ. ಎಲ್ಲ ಕಡೆ ಜಾತಿ, ಧರ್ಮವನ್ನು ಅಡ್ಡ ತರುತ್ತಾರೆ. 2015ರಲ್ಲಿ ಜಾರಿ ಮಾಡಲಾದ ಪಠ್ಯಕ್ರಮದ ಪರಿಶೀಲನೆಗೆ ಕಾಂಗ್ರೆಸ್‌ನವರು 2017ರಲ್ಲಿ ಯಾಕೆ ಸಮಿತಿ ಮಾಡಿದ್ದರು? ಮಕ್ಕಳ ಪಠ್ಯ ಸರಿಯಾಗಿದೆಯೇ ಎಂದು ಪರಿಶೀಲಿಸಲು ಸಮಿತಿ ರಚಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.