
ಶಿರಸಿ: ‘ಅನುದಾನ ಬೇಕಾದರೆ ಒಳ್ಳೆಯ ನಾಟಿ ಕೋಳಿ ಅಡುಗೆ ಮಾಡುವುದಾಗಿ ಹೇಳಿ, ಸಿಎಂ ಸಿದ್ದರಾಮಯ್ಯ ವಿಧಾನಸಭಾ ಅಧಿವೇಶನ ಬಿಟ್ಟು ಬೇಕಾದರೂ ಬರುತ್ತಾರೆ’ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಟೀಕಿಸಿದರು.
ನಗರದಲ್ಲಿ ಮಾಧ್ಯಮದವರ ಜತೆ ಶನಿವಾರ ಮಾತನಾಡಿದ ಅವರು, ‘ರಾಜ್ಯ ಕಾಂಗ್ರೆಸ್ ಸರ್ಕಾರ ಜನರ ಪಾಲಿಗೆ ಇದ್ದು ಸತ್ತಂತಾಗಿದ್ದು, ರೈತರ ಆತ್ಮಹತ್ಯೆಯಲ್ಲಿ 2ನೇ ಸ್ಥಾನದಲ್ಲಿದೆ. ಕಬ್ಬು, ತೊಗರಿ, ಭತ್ತ, ಮಕ್ಕೆಜೋಳ ಬೆಳೆಗಾರರು ಸಂಕಷ್ಟ ಎದುರಿಸುತ್ತಿದ್ದಾರೆ. ಕಾಡು ಪ್ರಾಣಿಗಳ ಸಂಕಷ್ಟ, ಅರಣ್ಯ ಇಲಾಖೆಯ ಕಾಟದ ನಡುವೆ ರೈತರು ಹೈರಾಣಾಗಿ ಚಳವಳಿಯ ದಾರಿ ಹಿಡಿದಿದ್ದಾರೆ. ಜನಪರ ಯೋಜನೆಗಳನ್ನು ಅನುಷ್ಠಾನ ಮಾಡುವ ಸಾಮರ್ಥ್ಯ ಮತ್ತು ಯೋಗ್ಯತೆಯನ್ನು ರಾಜ್ಯ ಸರ್ಕಾರ ಕಳೆದುಕೊಂಡಿದೆ. ಕೇವಲ ದಲ್ಲಾಳಿಗಳ, ಲೂಟಿ ಹೊಡೆಯುವವರ ಪಾಲಿಗೆ ಸರ್ಕಾರ ಬದುಕಿದ್ದು, ಗುತ್ತಿಗೆದಾರರ ಕಮಿಷನ್ 80 ಪರ್ಸಂಟ್ ಈ ಸರ್ಕಾರದಲ್ಲಾಗಿದೆ. ಭ್ರಷ್ಟಾಚಾರ, ಬೆಲೆ ಏರಿಕೆ ಕಾರಣಕ್ಕೆ ಈ ಸರ್ಕಾರ ಸುದ್ದಿಯಾಗಿರುವುದು ಬಿಟ್ಟರೆ ಕಳೆದ ಎರಡುವರೆ ವರ್ಷದಲ್ಲಿ ಯಾವ ಕಾರಣಕ್ಕೆ ಸುದ್ದಿಯಾಗಿದೆ?’ ಎಂದು ಪ್ರಶ್ನಿಸಿದರು.
‘ಕಷ್ಟದಲ್ಲಿರುವ ರಾಜ್ಯದ ಜನತೆ ಪಾಲಿಗೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ಕಣ್ಣಿನಲ್ಲಿ ನೀರು ಬರುವುದಿಲ್ಲ. ಒಳ್ಳೆಯ ನಾಟಿಕೋಳಿ ಇದ್ದರೆ ಬಾಯಲ್ಲಿ ನೀರು ಸುರಿಸುತ್ತ ಓಡಿ ಬರುತ್ತಾರೆ’ ಎಂದ ಅವರು, ‘ದಲ್ಲಾಳಿಗಳು ಯಾರಿಗೆ ಯಾವ ವಸ್ತು ಇಷ್ಟ ಎಂಬುದನ್ನು ಪತ್ತೆದಾರಿಕೆ ಮಾಡಿರುತ್ತಾರೆ. ಪ್ರಾಮಾಣಿಕರಾಗಿದ್ದರೆ ವಾಚ್ ಕೊಡುಗೆ ನೀಡುವುದಿಲ್ಲ. ಭ್ರಷ್ಟ ವ್ಯವಸ್ಥೆ ಪೋಷಣೆ ಮಾಡುವವರಿಗೆ ದೊಡ್ಡ ಖದೀಮರು ಬೇಕಾದ ವಸ್ತು ನೀಡುತ್ತಾರೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.