ADVERTISEMENT

35 ವರ್ಷಗಳಿಂದಲೂ ಸಹಕಾರ ಸಂಘದ ಸೇವೆ: ಮನೆ ಬಾಗಿಲಿಗೆ ಬರುವ ಗಣೇಶ!

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2020, 14:11 IST
Last Updated 21 ಆಗಸ್ಟ್ 2020, 14:11 IST
ಶಿರಸಿಯ ಮತ್ತಿಘಟ್ಟಾದಲ್ಲಿ ಸಿದ್ಧಗೊಂಡ ಗಣೇಶನಮೂರ್ತಿಗಳನ್ನು ಗ್ರಾಮಗಳಿಗೆ ಸಾಗಿಸಲು ವಾಹನದ ಮೇಲೆ ಇಟ್ಟಿರುವುದು
ಶಿರಸಿಯ ಮತ್ತಿಘಟ್ಟಾದಲ್ಲಿ ಸಿದ್ಧಗೊಂಡ ಗಣೇಶನಮೂರ್ತಿಗಳನ್ನು ಗ್ರಾಮಗಳಿಗೆ ಸಾಗಿಸಲು ವಾಹನದ ಮೇಲೆ ಇಟ್ಟಿರುವುದು   

ಶಿರಸಿ: ಗಣೇಶ ಚತುರ್ಥಿ ವೇಳೆ ಮಣ್ಣಿನಮೂರ್ತಿಯನ್ನು ಸದಸ್ಯರ ಮನೆ ಬಾಗಿಲಿಗೆ ಉಚಿತವಾಗಿ ತಲುಪಿಸುವ ಕಾರ್ಯವನ್ನು ಮುಂಡಗನಮನೆ ಸೇವಾ ಸಹಕಾರ ಸಂಘ ಮಾಡುತ್ತಿದೆ. 35 ವರ್ಷಗಳಿಂದಲೂ ಈ ಕಾರ್ಯ ಪದ್ಧತಿಯಂತೆ ನಡೆದುಬಂದಿದೆ.

ನಗರದಿಂದ 40 ಕಿಲೋಮೀಟರ್ ದೂರದಲ್ಲಿರುವ ಗ್ರಾಮಗಳಿಗೆ ಹಬ್ಬದ ಮೊದಲ ದಿನವೇ ಮೂರ್ತಿಗಳನ್ನು ತಲುಪಿಸಲಾಗುತ್ತದೆ. ಹಬ್ಬಕ್ಕೆ 15 ದಿನ ಮೊದಲು ಸದಸ್ಯರಿಂದ ಮೂರ್ತಿಯ ಬೇಡಿಕೆ ಪಟ್ಟಿ ಪಡೆಯಲಾಗುತ್ತದೆ. ಮೂರ್ತಿಯ ವೆಚ್ಚವನ್ನು ಆಯಾ ಸದಸ್ಯರು ಭರಿಸುತ್ತಾರೆ. ಆದರೆ, ಸಾಗಾಣಿಕೆ ವೆಚ್ಚವನ್ನು ಸಂಘವೇ ನೀಡುತ್ತದೆ.

‘ಮತ್ತಿಘಟ್ಟಾ ಪ್ರದೇಶವು ಶಿರಸಿ ನಗರದಿಂದ ದೂರದಲ್ಲಿರುವ ಕುಗ್ರಾಮವಾಗಿತ್ತು. ಮೂರು ದಶಕಗಳ ಹಿಂದೆ ಕಲಾವಿದರೊಬ್ಬರು ಗ್ರಾಮಕ್ಕೆ ಬಂದು ಮೂರ್ತಿ ತಯಾರಿಸಿ ಕೊಡುತ್ತಿದ್ದರು. ನಂತರ ಅವರು ಗ್ರಾಮಕ್ಕೆ ಬರುವುದನ್ನು ನಿಲ್ಲಿಸಿದರು. ಪಟ್ಟಣದಿಂದ ಮೂರ್ತಿ ತರುವ ಅನಿವಾರ್ಯತೆ ಎದುರಾಗಿತ್ತು. ಇದರಿಂದ ಜನರು ಹಬ್ಬಕ್ಕೆ ಮೂರ್ತಿ ತರುವುದು ಹೇಗೆಂಬ ಯೋಚನೆಯಲ್ಲಿದ್ದರು. ಅದನ್ನು ನೀಗಿಸಲು ಸಹಕಾರ ಸಂಘ ಹೊಸ ಪ್ರಯತ್ನಕ್ಕೆ ಮುಂದಾಯಿತು’ ಎಂದು ಸಂಘದ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ತಿಳಿಸಿದರು.

ADVERTISEMENT

‘1985 ರಿಂದ ಈ ಸೇವೆ ನಿರಂತರವಾಗಿ ನಡೆದುಕೊಂಡು ಬಂದಿದೆ. ಚತುರ್ಥಿ ವೇಳೆ ನಗರದ ಗುಡಿಗಾರರೋರ್ವರಿಗೆ ಮೂರ್ತಿ ತಯಾರಿಕೆ ಬಗ್ಗೆ ತಿಳಿಸುತ್ತೇವೆ. ಸುಮಾರು 40 ಸದಸ್ಯರ ಮನೆಗಳಿಗೆ ಬೇಕಾಗುವ ಮೂರ್ತಿಗಳನ್ನು ತರಲು ವಾಹನವು ಹಬ್ಬದ ಹಿಂದಿನ ದಿನ ಪೇಟೆಗೆ ತೆರಳುತ್ತದೆ. ಮತ್ತಿಘಟ್ಟಾವರೆಗೆ ಅವುಗಳನ್ನು ತಂದುಕೊಡಲಾಗುತ್ತದೆ. ಇದಕ್ಕಾಗಿ ತಗಲುವ ಅಂದಾಜು ₹ 8 ಸಾವಿರದಿಂದ ₹ 10 ಸಾವಿರವನ್ನು ಸಹಕಾರ ಸಂಘವೇ ಭರಿಸುತ್ತದೆ’ ಎಂದು ಹೇಳಿದರು.

‘ಸಹಕಾರ ಸಂಘದ ಈ ಕಾರ್ಯವು ನಿಜಕ್ಕೂ ಅನುಕೂಲಕರವಾಗಿದೆ. ಪ್ರತಿವರ್ಷ ನಮಗೆ ಪೇಟೆಗೆ ತೆರಳಿ ಪರದಾಡುವ ಪ್ರಸಂಗ ತಪ್ಪಿದೆ’ ಎಂದು ಸಂಘದ ಸದಸ್ಯರೊಬ್ಬರು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.