ADVERTISEMENT

ಓಲಂಪಿಕ್ ಜಾವೆಲಿನ್ ಪಟುಗಳಿಗೆ ಕಾಶಿನಾಥ ನಾಯ್ಕರಿಂದ ತರಬೇತಿ

ಗಣಪತಿ ಹೆಗಡೆ
Published 18 ಜುಲೈ 2021, 4:47 IST
Last Updated 18 ಜುಲೈ 2021, 4:47 IST
ಒಲಂಪಿಕ್‍ನ ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿರುವ ಅನುರಾಣಿ, ಶಿವಪಾಲ್ ಜತೆ  ತರಬೇತುದಾರ ಕಾಶಿನಾಥ ನಾಯ್ಕ (ಎಡದಿಂದ ಕೊನೆಯವರು)
ಒಲಂಪಿಕ್‍ನ ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿರುವ ಅನುರಾಣಿ, ಶಿವಪಾಲ್ ಜತೆ  ತರಬೇತುದಾರ ಕಾಶಿನಾಥ ನಾಯ್ಕ (ಎಡದಿಂದ ಕೊನೆಯವರು)   

ಶಿರಸಿ: ಭುವನದ ಬೆಡಗು ಒಲಂಪಿಕ್‍ಗೆ ದೂರದ ಟೋಕಿಯೊದಲ್ಲಿ ವೇದಿಕೆ ಸಿದ್ಧಗೊಳ್ಳುತ್ತಿದೆ. ಚಿನ್ನದ ಪದಕಕ್ಕೆ ಕೊರಳೊಡ್ಡಲು ಸಿದ್ಧರಾಗಿ, ದೇಶ ಪ್ರತಿನಿಧಿಸುವ ಜಾವೆಲಿನ್ ಪಟುಗಳಿಗೆ ಜಿಲ್ಲೆಯ ಕುವರನೊಬ್ಬ ಕಠಿಣ ತರಬೇತಿ ನೀಡುತ್ತಿದ್ದಾರೆ.

ಭಾರತೀಯ ಸೇನೆಯಲ್ಲಿ ‘ಸುಭೇದಾರ್’ ಹುದ್ದೆಯಲ್ಲಿರುವ, ಪ್ರಸ್ತುತ ಪುಣೆಯ ಆರ್ಮಿ ಸ್ಪೋರ್ಟ್ಸ್ ಇನ್ಸ್‌ಟಿಟ್ಯೂಟ್‍ನಲ್ಲಿ ತರಬೇತುದಾರರಾಗಿರುವ ಬೆಂಗಳೆ ಗ್ರಾಮದ ಕಾಶಿನಾಥ ನಾಯ್ಕ ಒಲಂಪಿಕ್‍ನಲ್ಲಿ ಪಾಲ್ಗೊಳ್ಳುತ್ತಿರುವ ಶಿವಪಾಲ್ ಮತ್ತು ಅನುರಾಣಿಗೆ ಜಾವೆಲಿನ್ ಕಲಿಸಿದ ಗುರುವಾಗಿದ್ದಾರೆ.

ಈ ಒಲಂಪಿಕ್‍ನಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ ಭಾರತವನ್ನು ಮೂವರು ಕ್ರೀಡಾಪಟುಗಳು ಪ್ರತಿನಿಧಿಸಲಿದ್ದಾರೆ. ಈ ಪೈಕಿ ನೀರಜ್ ಛೋಪ್ರಾ ಸ್ವೀಡನ್‍ನಲ್ಲಿ ತರಬೇತಿ ಪಡೆದುಕೊಳ್ಳುತ್ತಿದ್ದಾರೆ. ಉತ್ತರಪ್ರದೇಶ ಮೂಲದ ಅನುರಾಣಿ, ಶಿವಪಾಲ್ ಅವರನ್ನು ಸ್ಪರ್ಧೆಗೆ ಅಣಿಗೊಳಿಸುವ ಜವಾಬ್ದಾರಿ ಕಾಶಿನಾಥ ಹೆಗಲೇರಿದೆ. ವಿದೇಶಿ ತರಬೇತುದಾರರೊಬ್ಬರು ಜತೆಗಿದ್ದಾರೆ.

ADVERTISEMENT

23 ವರ್ಷದಿಂದ ಸೈನ್ಯದಲ್ಲಿ ಸೇವೆಯಲ್ಲಿರುವ ಕಾಶಿನಾಥ 2010ರ ನವದೆಹಲಿಯ ಕಾಮನ್‍ವೆಲ್ತ್ ಗೇಮ್ಸ್‌ನಲ್ಲಿ ಜಾವೆಲಿನ್ ಎಸೆತದಲ್ಲಿ ಕಂಚಿನ ಪದಕ ಗಳಿಸಿದ್ದರು. 2013ರಿಂದ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ದೇಶ ಪ್ರತಿನಿಧಿಸುವ ಕ್ರೀಡಾಪಟುಗಳಿಗೆ ತರಬೇತಿ ನೀಡುತ್ತಿದ್ದಾರೆ. ಈವರೆಗೆ ನೂರಾರು ಜನರಿಗೆ ತರಬೇತಿ ನೀಡಿ, ಸಾಧನೆ ತೋರುವಲ್ಲಿ ಇವರ ಪಾತ್ರ ಮಹತ್ವದ್ದಿದೆ.

ವಿಶ್ವ ಚಾಂಪಿಯನ್‍ಶಿಪ್‍, ಏಷಿಯನ್ ಗೇಮ್ಸ್ ಸೇರಿದಂತೆ ಹಲವು ಸ್ಪರ್ಧೆಗಳಲ್ಲಿ ಪದಕ ಸಾಧನೆ ಮೆರೆದ ಅನುರಾಣಿ 2013ರಿಂದ ಕಾಶಿನಾಥ ಬಳಿ ತರಬೇತಿಯಲ್ಲಿದ್ದರು. ಆರಂಭದಲ್ಲಿ 45 ಮೀ.ವರೆಗೆ ಜಾವೆಲಿನ್ ಎಸೆಯುತ್ತಿದ್ದ ಅವರು ಈಗ 63 ಮೀ.ಗೂ ಹೆಚ್ಚು ದೂರ ಎಸೆಯಬಲ್ಲ ಚಾಕಚಕ್ಯತೆ ಹೊಂದಿದ್ದಾರೆ.

ಆರಂಭಿಕ ಹಂತದಲ್ಲಿ 72–75 ಮೀ. ದೂರ ಎಸೆಯುವ ಸಾಮರ್ಥ್ಯ ಹೊಂದಿದ್ದ ಶಿವಪಾಲ್ ಆರು ವರ್ಷಗಳ ತರಬೇತಿ ಮುಗಿಯುವ ಹೊತ್ತಿಗೆ 85 ಮೀ. ದೂರದವರೆಗೆ ಜಾವೆಲಿನ್ ಎಸೆಯುವ ಸಾಮರ್ಥ್ಯ ಪಡೆದಿದ್ದರೆ ಅದರ ಹಿಂದೆ ಕಾಶಿನಾಥ ನಾಯ್ಕ ಶ್ರಮವಿದೆ.

ಜು.23 ರಂದು ಟೋಕಿಯೊಗೆ ಪ್ರಯಾಣ ಬೆಳೆಸಲಿರುವ ಇಬ್ಬರು ಕ್ರೀಡಾಪಟುಗಳಿಗೆ ಒಲಂಪಿಕ್‍‍ನ ಪದಕ ಬೇಟೆಗೆ ಗೆಲುವಿನ ಸೂತ್ರವನ್ನು ಕಾಶಿನಾಥ ಹೇಳಿಕೊಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.