ADVERTISEMENT

ಮತದಾರರ ವಿಶ್ವಾಸ ಉಳಿಸಿಕೊಳ್ಳಲು ಬದ್ಧ: ಸಂಸದ ಕಾಗೇರಿ

​ಪ್ರಜಾವಾಣಿ ವಾರ್ತೆ
Published 4 ಜೂನ್ 2025, 12:48 IST
Last Updated 4 ಜೂನ್ 2025, 12:48 IST
ಸಂಸದರಾಗಿ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಶಿರಸಿಯ ದೀನದಯಾಳ ಸಭಾಂಗಣದಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ಸಂಸದ ವಿಶ್ವೆಶ್ವರ ಹೆಗಡೆ ಕಾಗೇರಿ ವರನ್ನು ಅಭಿನಂದಿಸಲಾಯಿತು
ಸಂಸದರಾಗಿ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಶಿರಸಿಯ ದೀನದಯಾಳ ಸಭಾಂಗಣದಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ಸಂಸದ ವಿಶ್ವೆಶ್ವರ ಹೆಗಡೆ ಕಾಗೇರಿ ವರನ್ನು ಅಭಿನಂದಿಸಲಾಯಿತು   

ಶಿರಸಿ: ಸಂಸದನಾಗಿ ಒಂದು ವರ್ಷದ ಸಾಧನೆಯ ಜತೆ ಮುನ್ನೋಟದ ಜವಾಬ್ದಾರಿ ತೆಗೆದುಕೊಳ್ಳಲು ಸಿದ್ಧನಿದ್ದು, ವಿವಿಧ ಕ್ಷೇತ್ರದ ತಜ್ಞರು, ಸಾಮಾಜಿಕ ಮುಖಂಡರು ಕ್ಷೇತ್ರದ ಅಭಿವೃದ್ಧಿ ಪರ ತಮ್ಮ ಸಲಹೆ, ಸೂಚನೆಯನ್ನು ಮುಕ್ತವಾಗಿ ನೀಡಬಹುದು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಸಂಸದರಾಗಿ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಗರದ ದೀನದಯಾಳ ಸಭಾಂಗಣದಲ್ಲಿ ಬುಧವಾರ ಬಿಜೆಪಿ ಜಿಲ್ಲಾ ಘಟಕದಿಂದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಮತದಾರರು ನನ್ನ ಮೇಲಿಟ್ಟ ವಿಶ್ವಾಸ ಉಳಿಸಿಕೊಳ್ಳಲು ನಿರಂತರವಾಗಿ ಶ್ರಮಿಸುತ್ತಿದ್ದೇನೆ. ಕೇಂದ್ರ ಸರ್ಕಾರದ ಅಧಿಕಾರಿಗಳ ಜತೆ ನಿರಂತರ ಸಂರ್ಕದಲ್ಲಿದ್ದು, ಜಿಲ್ಲೆಯ ಜನತೆಯ ಭಾವನೆ ತಿಳಿಸುವ ಕೆಲಸ ಮಾಡುತ್ತಿದ್ದೇನೆ. ಜತೆಗೆ, ಪಕ್ಷ ಸಂಘಟನೆಯಲ್ಲಿಯೂ ಸಕ್ರಿಯವಾಗಿ ಭಾಗಿಯಾಗುತ್ತಿದ್ದೇನೆ ಎಂದರು. 

ADVERTISEMENT

'ಕ್ಷೇತ್ರದಲ್ಲಿ ವಿವಿಧ ರೈಲ್ವೆ ಯೋಜನೆ ಅನುಷ್ಠಾನಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದೇನೆ. ಅಂಕೋಲಾ-ಹುಬ್ಬಳ್ಳಿ ಯೋಜನೆ ಸಂಬಂಧ ಸಮಗ್ರ ಯೋಜನಾ ವರದಿಗಾಗಿ ರೈಲ್ವೆ ಮಂಡಳಿಗೆ ವರದಿ ಸಲ್ಲಿಕೆಯಾಗಿದೆ. ತಾಳಗುಪ್ಪ- ಶಿರಸಿ-ಹುಬ್ಬಳ್ಳಿ ರೈಲ್ವೆ ಯೋಜನೆಗೂ ವೇಗ ನೀಡಲಾಗಿದೆ. ಖಾನಾಪುರ ರೈಲ್ವೆ ಸ್ಟೇಶನ್ ಅಭಿವೃದ್ಧಿಗೂ ಅನುದಾನ ನೀಡಲಾಗಿದೆ. ಜತೆ, ಮುಂದಿನ 2 ವರ್ಷದಲ್ಲಿ ಕೊಂಕಣ ರೈಲ್ವೆ ಅಭಿವೃದ್ಧಿ ಶಕೆ ಆರಂಭವಾಗಲಿದೆ' ಎಂದ ಅವರು, 'ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಿಗೆ ವೇಗ ನೀಡಲಾಗಿದೆ. 150ರಷ್ಟು 2ಜಿ ಟವರ್ ಗಳನ್ನು 4 ಜಿಗೆ ಪರಿವರ್ತಿಸಲಾಗಿದೆ. ಹೊಸದಾಗಿ 75 ಟವರ್ ಆರಂಭಿಸಲಾಗಿದೆ. ಹಳೆಯ ಟವರ್ ಗಳ ಬ್ಯಾಟರಿ ಸಮಸ್ಯೆ ಇರುವಲ್ಲಿ ಬ್ಯಾಟರಿ ಅಳವಡಿಕೆ ಕೂಡ ಮಾಡಲಾಗುತ್ತಿದೆ' ಎಂದು ಹೇಳಿದರು. 

'ಸೀಬರ್ಡ್ ಮುಂದಿನ ನೇಮಕಾತಿ ಸಂದರ್ಭದಲ್ಲಿ ಕಾರವಾರದಲ್ಲೇ ಪರೀಕ್ಷಾ ಕೇಂದ್ರ ತೆರೆಯಲು ಚಿಂತಿಸಲಾಗಿದೆ. ಕೈಗಾದಲ್ಲೂ ಸ್ಥಳೀಯರಿಗೆ ಉದ್ಯೋಗ ನೀಡುವ ಸಂಬಂಧ ಅಧಿಕಾರಿ ಮಟ್ಟದಲ್ಲಿ ಪ್ರಯತ್ನಿಸಲಾಗುತ್ತಿದೆ. ಬನವಾಸಿ, ಗೋಕರ್ಣ ಅಭಿವೃದ್ಧಿಗೆ ಪ್ರಯತ್ನ ಮಾಡಲಾಗುತ್ತಿದೆ. ರಾಜ್ಯದ ಸಹಕಾರ ಸಿಕ್ಕಿದರೆ ಪ್ರವಾಸೋದ್ಯಮ ಅಭಿವೃದ್ಧಿಗೆ ಅನುಕೂಲ ಆಗಲಿದೆ' ಎಂದು ಹೇಳಿದ ಅವರು, '68ರಲ್ಲಿ 67 ದಿನ ಅಧಿವೇಶನದಲ್ಲಿ ಭಾಗಿಯಾಗಿದ್ದೇನೆ. ಕ್ಷೇತ್ರದ ವಿವಿಧ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ಕೆಲಸ ಮಾಡಿದ್ದೇನೆ ಎಂದು ಮಾಹಿತಿ ನೀಡಿದರು.

'ಜೂನ್ 9 ರಿಂದ 25 ರವರೆಗೆ ಸಂಕಲ್ಪ ಸೇ ಸಿದ್ದಿ ಕಾರ್ಯಕ್ರಮ ಆರಂಭವಾಗಲಿದೆ. ಪ್ರತಿ ಪಂಚಾಯಿತಿ ಮಟ್ಟದಲ್ಲಿ ಕೇಂದ್ರ ಸರ್ಕಾರದ 11 ವರ್ಷಗಳ ಸಾಧನೆಗಳ ಅನಾವರಣ ಆಗಲಿದೆ' ಎಂದರು. 

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಎಸ್.ಹೆಗಡೆ, ಪಕ್ಷದ ಪದಾಧಿಕಾರಿಗಳಾದ ಆನಂದ ಸಾಲೇರ, ಶರ್ಮಿಳಾ ಮಾದನಗೇರಿ, ರಮಾಕಾಂತ ಭಟ್, ಉಷಾ ಹೆಗಡೆ, ಪ್ರಶಾಂತ ನಾಯ್ಕ, ರಾಘವೇಂದ್ರ ಶೆಟ್ಟಿ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.