ADVERTISEMENT

ಹಸಿರು ಪೀಠದ ಮೊರೆ ಹೋಗಲು ಸಿದ್ಧತೆ

ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ಐದು, ಆರನೇ ಘಟಕಗಳ ಸ್ಥಾಪನೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2019, 12:42 IST
Last Updated 23 ಸೆಪ್ಟೆಂಬರ್ 2019, 12:42 IST

ಕಾರವಾರ: ಕೈಗಾ ಅಣುವಿದ್ಯುತ್ ಸ್ಥಾವರದ ಐದು ಮತ್ತು ಆರನೇ ಘಟಕಗಳ ಸ್ಥಾಪನೆಯನ್ನು ರಾಷ್ಟ್ರೀಯ ಹಸಿರು ಪೀಠದಲ್ಲಿ ಪ್ರಶ್ನಿಸಲು ಹೋರಾಟ ಸಮಿತಿಯುಅಣಿಯಾಗುತ್ತಿದೆ.

ಈ ಬಗ್ಗೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೈಗಾ ಅಣು ವಿದ್ಯುತ್ ಸ್ಥಾವರದ ಐದು ಮತ್ತು ಆರನೇ ಘಟಕ ವಿರೋಧಿ ಹೋರಾಟ ಸಮಿತಿಯ ಮುಖಂಡರು ಮಾಹಿತಿ ನೀಡಿದರು.

ಸಮಿತಿಯ ಮುಖಂಡಗುರು ಫಾಯ್ದೆಮಾತನಾಡಿ, ‘ಕಾಳಿ ಹುಲಿ ಸಂರಕ್ಷಿತ ವಲಯದಂತಹ ಸೂಕ್ಷ್ಮ ಪ್ರದೇಶಗಳ ಸಮೀಪದಲ್ಲೇ ಕೈಗಾ ಅಣು ವಿದ್ಯುತ್ ಸ್ಥಾವರವಿದೆ. ಇದೇ ಅಂಶವನ್ನು ಮುಖ್ಯವಾಗಿಟ್ಟುಕೊಂಡು ನಮ್ಮ ಹೋರಾಟವನ್ನು ರೂಪಿಸುತ್ತೇವೆ. ಆರಂಭದಲ್ಲಿಕೈಗಾ ಸುತ್ತಮುತ್ತ ಮತ್ತು ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ, ಹೋರಾಟ ಹಮ್ಮಿಕೊಳ್ಳಲಾಗುವುದು. ಬಳಿಕ ನ್ಯಾಯಾಲಯದ ಮೊರೆ ಹೋಗಲಿದ್ದೇವೆ’ ಎಂದು ತಿಳಿಸಿದರು.

ADVERTISEMENT

ಸಮಿತಿಯ ಅಧ್ಯಕ್ಷ ಶಾಂತ ಬಾಂದೇಕರ್ ಮಾತನಾಡಿ, ‘ಅಣು ವಿದ್ಯುತ್ ಸ್ಥಾವರದಿಂದಾಗಿ ಸುತ್ತಮುತ್ತಲಿನ ಗ್ರಾಮಸ್ಥರ, ವನ್ಯಜೀವಿಗಳ ಆರೋಗ್ಯದಲ್ಲಿ ಏರುಪೇರಾಗುತ್ತಿದೆ. ಇದರ ವಿರುದ್ಧ ಡಿ.15ರಂದು ನಡೆದಿದ್ದ ಸಾರ್ವಜನಿಕ ಆಲಿಕೆ ಸಭೆಯ ಸಂದರ್ಭ ಬೃಹತ್ ಪ್ರತಿಭಟನೆ ಮಾಡಲಾಗಿತ್ತು. ನಮ್ಮ ವಿರೋಧದ ನಡುವೆಯೇ ಪರಿಸರ ಮೌಲ್ಯ ನಿರ್ಣಯ ಸಮಿತಿಯು ಹೊಸ ಘಟಕಗಳ ಸ್ಥಾಪನೆಗೆ ಅನುಮತಿ ನೀಡಿರುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೊದಲ ನಾಲ್ಕು ಘಟಕಗಳನ್ನು ಸ್ಥಾಪಿಸಿದ ಬಳಿಕ ಸ್ಥಳೀಯರಿಗೆ ಉದ್ಯೋಗ ನೀಡಿಲ್ಲ.ಬೇರೆ ಊರುಗಳಿಂದ, ರಾಜ್ಯಗಳಿಂದ ಕಾರ್ಮಿಕರನ್ನು, ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗಿದೆ. ಯೋಜನೆಯಿಂದ ಜಮೀನು ಕಳೆದುಕೊಂಡವರಿಗೆ ಸೂಕ್ತ ರೀತಿಯಲ್ಲಿ ಪುನರ್ವಸತಿ ಮಾಡಿಲ್ಲ ಎಂದು ದೂರಿದರು.

ನೂತನ ಘಟಕಗಳಿಂದ ಉತ್ಪಾದಿಸುವ ವಿದ್ಯುತ್ ಸಾಗಿಸುವ ಬಗ್ಗೆ ಯೋಜನಾ ವರದಿಯಲ್ಲಿ ತಿಳಿಸಿಲ್ಲ. ಹೊಸದಾಗಿ ವಿದ್ಯುತ್ ತಂತಿಗಳನ್ನು ಅಳವಡಿಸಲು ಅದೆಷ್ಟೋ ಮರಗಳನ್ನು ಕಡಿಯಬೇಕಾಗುತ್ತದೆ. ಅಣುವಿದ್ಯುತ್‌ಗಿಂತ ಕಡಿಮೆ ವೆಚ್ಚದ, ಪರಿಸರ ಪೂರಕವಾದ ವಿದ್ಯುತ್ ಯೋಜನೆಗಳನ್ನು ಜಾರಿ ಮಾಡಲು ಚಿಂತಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಮಿತಿಯ ಪ್ರಮುಖರಾದ ಶ್ಯಾಮನಾಥ ವಿ.ನಾಯಕ, ಬಾಬು ಪಿ.ನಾಯಕ, ಗಜಾನನ ನಾಯ್ಕ, ಅಶ್ವಿನಿ ಪೆಡ್ನೇಕರ್, ಚಂದ್ರಶೇಖರ ಪಡುವಲ್ಕರ್, ವಿಷ್ಣು ಪಡುವಲ್ಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.