ADVERTISEMENT

ಕಾರವಾರದಲ್ಲಿ ಮೇ 24ರ ತನಕ ಸಂಪೂರ್ಣ ಲಾಕ್‌ಡೌನ್

ಚಿತ್ತಾಕುಲಾ, ಮಲ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಪೂರ್ಣ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 17 ಮೇ 2021, 13:50 IST
Last Updated 17 ಮೇ 2021, 13:50 IST
ಕೋವಿಡ್ ಸಲುವಾಗಿ ಕರ್ಫ್ಯೂ ಸಂದರ್ಭದಲ್ಲಿ ಕಾರವಾರ ನಗರದ ರಸ್ತೆ ಬಿಕೊ ಎನ್ನುತ್ತಿತ್ತು – ಸಂಗ್ರಹ ಚಿತ್ರ
ಕೋವಿಡ್ ಸಲುವಾಗಿ ಕರ್ಫ್ಯೂ ಸಂದರ್ಭದಲ್ಲಿ ಕಾರವಾರ ನಗರದ ರಸ್ತೆ ಬಿಕೊ ಎನ್ನುತ್ತಿತ್ತು – ಸಂಗ್ರಹ ಚಿತ್ರ   

ಕಾರವಾರ: ಕಾರವಾರ ನಗರಸಭೆ ವ್ಯಾಪ್ತಿ, ಚಿತ್ತಾಕುಲಾ ಹಾಗೂ ಮಲ್ಲಾಪುರ ಗ್ರಾಮ ಪಂಚಾಯಿತಿ ಪ್ರದೇಶಗಳನ್ನು ಕೋವಿಡ್ ಸಲುವಾಗಿ ‘ವಿಶೇಷ ಕಂಟೈನ್‌ಮೆಂಟ್ ವಲಯ’ ಎಂದು ಘೋಷಿಸಲಾಗಿದೆ. ಹಾಗಾಗಿ ಈ ಪ್ರದೇಶಗಳ ಜನರು ಮೇ 24ರ ತನಕ ಮನೆಯಿಂದ ಹೊರಗಡೆ ಸಂಚರಿಸುವುದರ ಮೇಲೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ.

ನಗರ ಪ್ರದೇಶದ ಜನರಿಗೆ ಜೀವನಾವಶ್ಯಕ ವಸ್ತುಗಳು, ದಿನಸಿ ಹಾಗೂ ಇತರ ಆಹಾರ ಸಾಮಗ್ರಿಗಳನ್ನು ಕಾರವಾರ ನಗರಸಭೆಯಿಂದ ಹಾಗೂ ಚಿತ್ತಾಕುಲಾ, ಮಲ್ಲಾಪುರ ಗ್ರಾಮಗಳಲ್ಲಿ ಆಯಾ ಗ್ರಾಮ ಪಂಚಾಯತಿಗಳಿಂದಲೇ ಪೂರೈಕೆ ಮಾಡಲಾಗುತ್ತದೆ. ಬೆಳಿಗ್ಗೆ 6ರಿಂದ 10 ಗಂಟೆಯ ಅವಧಿಯಲ್ಲೂ ಯಾವುದೇ ದಿನಸಿ, ಕಿರಾಣಿ ಅಂಗಡಿಗಳನ್ನು ತೆರೆಯುವಂತಿಲ್ಲ ಎಂದು ತಹಶೀಲ್ದಾರ್ ಆರ್.ವಿ.ಕಟ್ಟಿ ತಿಳಿಸಿದ್ದಾರೆ.

ದಂಡ, ಶಿಕ್ಷೆಯ ಎಚ್ಚರಿಕೆ:

ADVERTISEMENT

‘ಈ ಭಾಗದ ಸಾರ್ವಜನಿಕರು ಹೊರಗೆ ಸಂಚರಿಸುತ್ತಿರುವುದು ಕಂಡುಬಂದರೆ ವಿಪತ್ತು ನಿರ್ವಹಣಾ ಕಾಯ್ದೆ 2005ರ ಅಡಿ ದಂಡ ವಿಧಿಸಿ ಹಾಗೂ ಶಿಕ್ಷೆಗೆ ಒಳಪಡಿಸಲಾಗುವುದು. ಇದಕ್ಕೆ ಆಸ್ಪದ ನೀಡದಂತೆ, ಕೋವಿಡ್ ನಿಯಂತ್ರಣಕ್ಕೆ ಸಾರ್ವಜನಿಕರು ಸಹಕರಿಸಬೇಕು. ಕೋವಿಡ್ 19ಗೆ ಸಂಬಂಧಿಸಿದ ಯಾವುದೇ ಮಾಹಿತಿ ಬೇಕಾದರೆ ಕಾರವಾರ ತಹಶೀಲ್ದಾರ್ ಕಚೇರಿಯಲ್ಲಿ ಸ್ಥಾಪಿಸಲಾಗಿರುವ 24x7 ಸಹಾಯವಾಣಿ ಸಂಖ್ಯೆ: 08382 226331 ಅಥವಾ ಮೊಬೈಲ್ ಫೋನ್ ಸಂಖ್ಯೆ: 81477 45176 ಅನ್ನು ಸಂಪರ್ಕಿಬಹುದು’ ಎಂದು ಅವರು ಹೇಳಿದ್ದಾರೆ.

ವಿಶೇಷ ಕಂಟೈನ್‌ಮೆಂಟ್ ವಲಯಗಳಲ್ಲಿ ಕೋವಿಡ್ 19 ಮಾರ್ಗಸೂಚಿಯ ಅನ್ವಯ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಕಾರವಾರ ಡಿವೈಎಸ್‌ಪಿ, ನಗರಸಭೆ ಪ್ರಭಾರ ಆಯುಕ್ತರು, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ, ಸಿಪಿಐ, ನಗರ ಮತ್ತು ಗ್ರಾಮೀಣ ಠಾಣೆಗಳ ಪೊಲೀಸ್ ಇನ್‌ಸ್ಪೆಕ್ಟರ್‌ಗಳ ಜೊತೆ ಸಭೆ ನಡೆಸಿದ ಬಳಿಕ ಈ ತೀರ್ಮಾನಕ್ಕೆ ಬರಲಾಯಿತು.

ಸಂಪೂರ್ಣ ಲಾಕ್‌ಡೌನ್ ಸಂದರ್ಭದಲ್ಲಿ ತುರ್ತು ವೈದ್ಯಕೀಯ ಸಂದರ್ಭಗಳ ಕಾರಣಕ್ಕೆ ಮಾತ್ರ ಸಂಚರಿಸಬಹುದು. ಹೋಟೆಲ್‌ಗಳಲ್ಲಿ ಯಾವುದೇ ಆಹಾರಗಳನ್ನು ಪಾರ್ಸೆಲ್ ನೀಡುವಂತಿಲ್ಲ. ಕೇವಲ ಡೆಲಿವರಿ ಬಾಯ್ಸ್ ಮೂಲಕವೇ ಆಹಾರಗಳನ್ನು ತಲುಪಿಸುವ ವ್ಯವಸ್ಥೆಯನ್ನು ಹೋಟೆಲ್‌ನವರೇ ಮಾಡಬೇಕು. ಅನುಮತಿ ಪಡೆಯದೆ ಅಂಗಡಿ‌ ಮುಂಗಟ್ಟು ತೆರೆದರೆ ಪೊಲೀಸರು ಪ್ರಕರಣ ದಾಖಲಿಸಬೇಕು ಎಂದು ಸಭೆಯಲ್ಲಿ ತಿಳಿಸಲಾಯಿತು.

ವೈದ್ಯಕೀಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜನರ ಸಂಚಾರಕ್ಕೆ ಅನುಕೂಲವಾಗುವಂತೆ ಆಟೊ ಚಾಲಕರ, ಮಾಲೀಕರ ಸಂಘದಿಂದ ನಿಗದಿಪಡಿಸಿದ ಸ್ಥಳಗಳಲ್ಲಿ ಆಟೊಗಳು ಇರುತ್ತವೆ. ಈ ಬಗ್ಗೆ ನಗರಸಭೆ ಮತ್ತು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಪ್ರಚಾರ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ಇತರ ನಿರ್ಣಯಗಳು

* ಹೋಮ್ ಐಸೋಲೇಷನ್‌ನ ಮನೆಗಳಿಗೆ ಚೀಟಿ ಅಂಟಿಸುವುದು‌

* ಕಾರ್ಯಪಡೆಗಳಿಂದ ಪ್ರತಿದಿನ ವರದಿ ಪಡೆಯುವುದು

* ಕೈಗಾ ಉದ್ಯೋಗಿಗಳು ಕೆಲಸಕ್ಕೆ ಹೋಗಿ ಬರಲು ಸೂಕ್ತ ವ್ಯವಸ್ಥೆ

* ಹೋಂ ಐಸೋಲೇಷನ್ ಇರುವವರಿಗೆ ಔಷಧಗಳ ಪೊಟ್ಟಣವನ್ನು ಅವರ ಸ್ಥಳಕ್ಕೆ ತಲುಪಿಸುವುದು

* ಈ ಬಗ್ಗೆ ಟಿ.ಎಚ್.ಒ ಕ್ರಮ ಕೈಗೊಳ್ಳಬೇಕು

* ಆಹಾರ ಪದಾರ್ಥ, ಸಾಮಗ್ರಿ ತಲುಪಿಸುವವರು ಸೂಕ್ತ ಮುಂಜಾಗ್ರತೆ ವಹಿಸುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.