ADVERTISEMENT

ಯಲ್ಲಾಪುರ: ಒಣ ಮೆಣಸು ಒಯ್ಯುತ್ತಿದ್ದ ಮಹಿಳೆಯರನ್ನು ಕೆಳಗಿಳಿಸದ ಕಂಡಕ್ಟರ್!

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2025, 14:20 IST
Last Updated 21 ಏಪ್ರಿಲ್ 2025, 14:20 IST
ಯಲ್ಲಾಪುರದಲ್ಲಿ ಒಣ ಮೆಣಸು ಒಯ್ಯುತ್ತಿದ್ದ ಮಹಿಳೆಯರನ್ನು ಬಸ್ಸಿನಿಂದ ಕೆಳಗಿಳಿಸಿದ್ದಕ್ಕಾಗಿ ಪ್ರಯಾಣಿಕರು ನಿಲ್ದಾಣದಲ್ಲಿ ಪ್ರತಿಭಟಿಸಿದರು
ಯಲ್ಲಾಪುರದಲ್ಲಿ ಒಣ ಮೆಣಸು ಒಯ್ಯುತ್ತಿದ್ದ ಮಹಿಳೆಯರನ್ನು ಬಸ್ಸಿನಿಂದ ಕೆಳಗಿಳಿಸಿದ್ದಕ್ಕಾಗಿ ಪ್ರಯಾಣಿಕರು ನಿಲ್ದಾಣದಲ್ಲಿ ಪ್ರತಿಭಟಿಸಿದರು   

ಯಲ್ಲಾಪುರ: ಒಣ ಮೆಣಸು ಒಯ್ಯುತ್ತಿದ್ದ ಕಾರಣಕ್ಕಾಗಿ ಇಬ್ಬರು ಮಹಿಳೆಯರನ್ನು ಬಸ್ಸಿನಿಂದ ಕೆಳಗಿಳಿಸಿದ ಘಟನೆ ಭಾನುವಾರ ಪಟ್ಟಣದ ಬಸ್ ನಿಲ್ದಾಣದಲ್ಲಿ ಕೆಲಕಾಲ ಗೊಂದಲ ಸೃಷ್ಟಿಸಿತು.

ಮಾಗೋಡು ಗ್ರಾಮದ ಲಲಿತಾ ಭಾಗ್ವತ ಮತ್ತು ಮಂಗಲಾ ನಾಯ್ಕ ಸಂತೆಯಲ್ಲಿ ಒಣಮೆಣಸು ಖರೀದಿಸಿ ಮನೆಗೆ ಹೋಗಲು ಬಸ್ ಹತ್ತಿ ಕುಳಿತಿದ್ದರು. ಇದನ್ನು ಗಮನಿಸಿದ ನಿರ್ವಾಹಕ ಬಸವರಾಜ್, ಬಸ್ಸಿನಲ್ಲಿ ಒಣ ಮೆಣಸು ಒಯ್ಯಲು ಆಕ್ಷೇಪಿಸಿ ಅವರನ್ನು ಬಸ್ಸಿನಿಂದ ಕೆಳಗಿಳಿಸಿದರು. ಇದರಿಂದ ತೊಂದರೆಗೊಳಗಾದ ಮಹಿಳೆಯರು ನಂದೂಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ನರಸಿಂಹ ಕೋಣೆಮನೆ ಅವರಿಗೆ ಪೋನ್‌ಮಾಡಿ ತಮಗಾದ ತೊಂದರೆಯನ್ನು ವಿವರಿಸಿದರು. ಕೂಡಲೇ ಬಸ್ ನಿಲ್ದಾಣಕ್ಕೆ ಬಂದ ಅವರು ತೊಂದರೆಗೊಳಗಾದ ಮಹಿಳೆಯರ ಜೊತೆ ಸೇರಿ ನಿಲ್ದಾಣದಲ್ಲಿ ಧರಣಿ ಕುಳಿತರು.

‘ಮಹಿಳೆಯರನ್ನು ಗೌರವಯುತವಾಗಿ ಅವರ ಮನೆಗೆ ಮುಟ್ಟಿಸಿ ಬರಬೇಕು' ಎಂದು ಕೋಣೆಮನೆ ಪಟ್ಟುಹಿಡಿದರು. ಬಸ್ ನಿಲ್ದಾಣದಲ್ಲಿದ್ದ ಇತರ ಪ್ರಯಾಣಿಕರು ಪ್ರತಿಭಟನೆಗೆ ಜೊತೆಯಾದರು. ಬಸ್ಸಿನಲ್ಲಿ ಯಾವ ವಸ್ತು ಒಯ್ಯುವುದು ನಿಷೇಧ ಎನ್ನುವದರ ಕುರಿತು ನಿಲ್ದಾಣದಲ್ಲಿ ನಾಮಫಲಕ ಅಳವಡಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.

ADVERTISEMENT

ಡಿಪೋ ವ್ಯವಸ್ಥಾಪಕ ಸಂತೋಷ ವರ್ಣೆಕರ್ ಸ್ಥಳಕ್ಕೆ ಬಂದು ಪ್ರತಿಭಟನಾಕಾರರೊಂದಿಗೆ ಸಂಧಾನ ನಡೆಸಿದರು. 

‘ಕೂಡಲೇ ವಿಶೇಷ ಬಸ್ ಮೂಲಕ ಮಹಿಳೆಯರನ್ನು ಊರಿಗೆ ತಲುಪಿಸಬೇಕು' ಎಂಬ ಒತ್ತಾಯದ ಮೇರೆಗೆ 1.45 ಕ್ಕೆ ಬಿಡುವ ಬಸ್ಸನ್ನು 1.30ಕ್ಕೇ ಮಾಗೋಡಿಗೆ ಕಳುಹಿಸಿ ಪ್ರತಿಭಟನಾಕಾರರನ್ನು ಸಮಾಧಾನ ಮಾಡಲಾಯಿತು

‘ಒಣ ಮೆಣಸನ್ನು ದೊಡ್ಡ ಪ್ರಮಾಣದಲ್ಲಿ ಬಸ್ಸಿನಲ್ಲಿ ಒಯ್ಯುವ ಹಾಗಿಲ್ಲ. ಬೇರೆಯವರಿಗೆ ತೊಂದರೆಯಾಗದ ರೀತಿ ಸಣ್ಣ ಪ್ರಮಾಣದಲ್ಲಿ ಒಯ್ಯಲು ಅವಕಾಶ ಇದೆ' ಎಂದು ಸಾರಿಗೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.