ADVERTISEMENT

ಕಾಂಗ್ರೆಸ್ ಕಾರ್ಯಕರ್ತರ ಒಗ್ಗಟ್ಟಿನಿಂದ ‘ಭೀಮ’ಬಲ

ಬ್ಲಾಕ್ ಹಾಗೂ ಜಿಲ್ಲಾ ಸಮಿತಿ ಸಭೆಯಲ್ಲಿ ಉಪಚುನಾವಣೆ ಸಿದ್ಧತೆ ಬಗ್ಗೆ ಚರ್ಚೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 12:46 IST
Last Updated 1 ಡಿಸೆಂಬರ್ 2019, 12:46 IST
ಶಿರಸಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭೀಮಣ್ಣ ನಾಯ್ಕ ಮಾತನಾಡಿದರು
ಶಿರಸಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭೀಮಣ್ಣ ನಾಯ್ಕ ಮಾತನಾಡಿದರು   

ಶಿರಸಿ: ಯಲ್ಲಾಪುರ ಕ್ಷೇತ್ರದಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಒಗ್ಗಟ್ಟು ತೋರಬೇಕು ಮತ್ತು ಕಾರ್ಯಕರ್ತರು ಪಕ್ಷನಿಷ್ಠರಾಗಿ ಕೆಲಸ ಮಾಡಿ, ವ್ಯಕ್ತಿಗಿಂತ ಪಕ್ಷ ದೊಡ್ಡದು ಎಂಬುದನ್ನು ಸಾಬೀತುಪಡಿಸಬೇಕು ಎಂದು ಮಂಗಳವಾರ ಇಲ್ಲಿ ನಡೆದ ಕಾಂಗ್ರೆಸ್ ಜಿಲ್ಲಾ ಹಾಗೂ ಬ್ಲಾಕ್ ಸಮಿತಿ ಸಭೆಗಳಲ್ಲಿ ನಿರ್ಧರಿಸಲಾಯಿತು.

ಬ್ಲಾಕ್ ಹಾಗೂ ಜಿಲ್ಲಾ ಸಮಿತಿ ಸಭೆಗಳು ಪ್ರತ್ಯೇಕವಾಗಿ ನಡೆದವು. ಎರಡೂ ಸಭೆಗಳಲ್ಲಿ ಉಪಚುನಾವಣೆಯ ಸಿದ್ಧತೆ, ಕಾರ್ಯಚಟುವಟಿಕೆಯ ಬಗ್ಗೆ ಚರ್ಚಿಸಲಾಯಿತು. ಪಕ್ಷದ ಅಭ್ಯರ್ಥಿ, ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಮಾತನಾಡಿ, ‘ಕಾಂಗ್ರೆಸ್‌ನ ತತ್ವ, ಸಿದ್ಧಾಂತಗಳ ಮೇಲೆ ನಂಬಿಕೆ ಇಟ್ಟಿರುವ ಯಾರೂ ಪಕ್ಷ ಬಿಟ್ಟಿಲ್ಲ. ಯಲ್ಲಾಪುರ ಕ್ಷೇತ್ರದ ಮತದಾರರಿಗೆ ಇದನ್ನು ಮನವರಿಕೆ ಮಾಡಿಕೊಟ್ಟು ಅತಿ ಹೆಚ್ಚು ಮತಗಳಿಂದ ಕಾಂಗ್ರೆಸ್‌ ಅನ್ನು ಗೆಲ್ಲಿಸಬೇಕು. ಆತ್ಮಸಾಕ್ಷಿ ಒಪ್ಪುವಂತೆ ಚುನಾವಣೆಯಲ್ಲಿ ಕಾರ್ಯನಿರ್ವಹಿಸಬೇಕು’ ಎಂದರು.

ಯುವ ಮುಖಂಡ ದೀಪಕ ದೊಡ್ಡೂರು ಮಾತನಾಡಿ, ‘ಯಲ್ಲಾಪುರ ಕ್ಷೇತ್ರದ ಅಭಿವೃದ್ಧಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಕಿಸೆಯಿಂದ ಅನುದಾನ ನೀಡಿಲ್ಲ ಎನ್ನುವ ಹೆಬ್ಬಾರ್, ಈಗ ₹ 365 ಕೋಟಿ ಅನುದಾನವನ್ನು ಯಡಿಯೂರಪ್ಪ ಕಿಸೆಯಿಂದ ತಂದಿದ್ದಾರಾ’ ಎಂದು ಪ್ರಶ್ನಿಸಿದರು.

ADVERTISEMENT

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಮೊಗೇರ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ಪ್ರಮುಖರಾದ ಜಗದೀಶ ಗೌಡ, ಸಿ.ಎಫ್.ನಾಯ್ಕ, ಕೃಷ್ಣ ಹಿರೇಹಳ್ಳಿ, ಬಸವರಾಜ ದೊಡ್ಮನಿ, ಎಚ್.ಎಂ.ನಾಯ್ಕ, ಗಾಯತ್ರಿ ನೇತ್ರೆಕರ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಮಜೀದ್, ಖಾದರ್ ಆನವಟ್ಟಿ, ಸೂರ್ಯಪ್ರಕಾಶ ಹೊನ್ನಾವರ, ಕೆ.ಜಿ.ನಾಗರಾಜ ಇದ್ದರು.

ಕಣ್ಣೀರು ಹಾಕಿದ ಭೀಮಣ್ಣ:

’ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷನಾಗಿ 11 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ನನಗೆ ಇಡೀ ಜಿಲ್ಲೆಯ ಕಾರ್ಯಕರ್ತರು ಬೆನ್ನೆಲುಬಾಗಿ ನಿಂತಿದ್ದಾರೆ. ಸಹೋದರನೆಂದು ತಿಳಿದು ಪ್ರೋತ್ಸಾಹ ನೀಡಿದ ಎಲ್ಲರಿಗೂ ಚಿರ ಋಣಿ. ನನ್ನಿಂದ ಲೋಪವಾಗಿದ್ದರೆ ಕ್ಷಮಿಸಿ. ಪಕ್ಷದ ವರಿಷ್ಠರು ತೀರ್ಮಾನಿಸಿ, ನನಗೆ ಯಲ್ಲಾಪುರ ಉಪಚುನಾವಣೆಯಲ್ಲಿ ಟಿಕೆಟ್ ನೀಡಿದ್ದಾರೆ. ಗೆಲುವಿಗೆ ನಿಮ್ಮ ಸಹಕಾರ ಕೋರುತ್ತೇನೆ’ ಎನ್ನುತ್ತ ಭೀಮಣ್ಣ ಗದ್ಗದಿತರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.