ADVERTISEMENT

ಅಂಕೋಲಾ | 'ಮತ ಕದ್ದು ಅಧಿಕಾರ ಹಿಡಿದ ಬಿಜೆಪಿ'

ಕಾಂಗ್ರೆಸ್ ಕಾರ್ಯಕಾರಿಣಿ ಸಭೆ: ಎಐಸಿಸಿ ಕಾರ್ಯದರ್ಶಿ ಮಯೂರ ಆರೋಪ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2025, 6:32 IST
Last Updated 16 ಆಗಸ್ಟ್ 2025, 6:32 IST
ಅಂಕೋಲಾದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಆರ್.ವಿ. ದೇಶಪಾಂಡೆ ಮಾತನಾಡಿದರು
ಅಂಕೋಲಾದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಆರ್.ವಿ. ದೇಶಪಾಂಡೆ ಮಾತನಾಡಿದರು   

ಅಂಕೋಲಾ: ‘ದೇಶದಲ್ಲಿ ಮತ ಕದ್ದು ಬಿಜೆಪಿ ಅಧಿಕಾರಕ್ಕೆ ಬಂದಿದೆ. ಇದನ್ನು ಜನಸಾಮಾನ್ಯರಿಗೆ ಮನದಟ್ಟು ಮಾಡುವ ಕೆಲಸವನ್ನು ಪಕ್ಷದ ಕಾರ್ಯಕರ್ತರು ಮಾಡಬೇಕು’ ಎಂದು ಎಐಸಿಸಿ ಕಾರ್ಯದರ್ಶಿ ಮಯೂರ ಜಯಕುಮಾರ್ ಹೇಳಿದರು.

ಪಟ್ಟಣದ ನಾಡವರ ಸಭಾಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಜಿಲ್ಲಾ ಘಟಕದ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡಿದರು.

‘ರಾಹುಲ್ ಗಾಂಧಿ ಅವರು ನಕಲಿ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿ, ಚುನಾವಣೆ ಆಯೋಗಕ್ಕೆ ದಾಖಲೆ ನೀಡುವಂತೆ ಕೇಳಿದರೆ ಆಯೋಗವು ದಾಖಲೆ ಅಳಿಸಿ ಹೋಗಿದೆ ಎಂದು ಹೇಳಿಕೆ ನೀಡುತ್ತ ಬಿಜೆಪಿ ಏಜೆಂಟರಂತೆ ವರ್ತಿಸುತ್ತಿದೆ’ ಎಂದು ಆರೋಪಿಸಿದರು.

ADVERTISEMENT

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾತನಾಡಿ, ‘ಪಕ್ಷದ ಕಾರ್ಯಕರ್ತರು ಚುನಾವಣೆ ಸಂದರ್ಭಗಳಲ್ಲಿ ಸೈನಿಕರಂತೆ ಕೆಲಸ ಮಾಡಿದ್ದಾರೆ. ಕಾರ್ಯಕರ್ತರಿಗೆ ಹಾಗೂ ಮುಖಂಡರಿಗೆ ಪಕ್ಷದಿಂದ ದೊರೆಯಬೇಕಾದ ಗೌರವ ಸಿಕ್ಕೇ ಸಿಗುತ್ತದೆ’ ಎಂದರು.

ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ, ‘ಸಂಘಟನೆ ಗಟ್ಟಿ ಇದ್ದಾಗ ಮಾತ್ರ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯ. ಕಾರ್ಯಕರ್ತರ ಹೃದಯದಲ್ಲಿ ಕೂತಾಗ ಮಾತ್ರ ನಾಯಕನಾಗಿ ಯಶಸ್ವಿಯಾಗಲು ಸಾಧ್ಯವಾಗುತ್ತದೆ’ ಎಂದರು.

ಶಿರಸಿ ಶಾಸಕ ಭೀಮಣ್ಣ ನಾಯ್ಕ, ‘ದೇಶದಲ್ಲಿ ಅಭಿವೃದ್ಧಿ ಕೆಲಸಗಳು ನಡೆದಿದ್ದರೆ ಕಾಂಗ್ರೆಸ್ ಅಧಿಕಾರದಲ್ಲಿದ್ದ ಕಾಲದಲ್ಲಿ. ಬಿಜೆಪಿ ಜನರ ದಿಕ್ಕು ತಪ್ಪಿಸಿ, ಅಧಿಕಾರಕ್ಕೇರುವ ತಂತ್ರವನ್ನಷ್ಟೇ ಮಾಡುತ್ತಿದೆ’ ಎಂದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಾಯಿ ಗಾಂವಕರ, ಮುಖಂಡರಾದ ಡಾ.ಅಂಜಲಿ ನಿಂಬಾಳ್ಕರ್, ನಿವೇದಿತ್ ಆಳ್ವಾ, ಕೆ.ಎಚ್.ಗೌಡ, ಶಾರದಾ ಶೆಟ್ಟಿ, ವಿ.ಎಸ್.ಪಾಟೀಲ್, ರಮಾನಂದ ನಾಯಕ, ಗೋಪಾಲಕೃಷ್ಣ ನಾಯಕ, ಸುಜಾತಾ ಗಾಂವಕರ, ಬೀನಾ ವೈದ್ಯ ಇದ್ದರು.

ಯಾವುದೇ ಯೋಜನೆ ಅನುಷ್ಠಾನ ಗೊಳಿಸಬೇಕಾದರೆ ಅಲ್ಲಿಯ ವಸ್ತುಸ್ಥಿತಿಯನ್ನು ಅರಿಯಬೇಕು. ಜಿಲ್ಲೆಯಲ್ಲಿ ಈ ಹಿಂದೆ ಅನೇಕ ಬಂದರು ಸೇರಿದಂತೆ ದೊಡ್ಡ ಯೋಜನೆಗಳು ಬಂದಾಗ ಸ್ಥಳೀಯರಿಗೆ ಪುನರ್ವಸತಿ ಕಲ್ಪಿಸಲಾಗಿದೆ ಅದಕ್ಕೂ ವಿರೋಧ ವ್ಯಕ್ತವಾಗಿದೆ.ಅದನ್ನು ತಪ್ಪು ಎನ್ನಲಾಗದು

-ಆರ್.ವಿ.ದೇಶಪಾಂಡೆ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.