ಶಿರಸಿ: ‘ಕಾಂಗ್ರೆಸ್ ಪಕ್ಷದಲ್ಲಿ ಒಂದಕ್ಕಿಂತ ಹೆಚ್ಚು ಹುದ್ದೆ ಹೊಂದಿರುವವರು ಕೂಡಲೇ ಒಂದೇ ಹುದ್ದೆಯನ್ನು ಆಯ್ಕೆ ಮಾಡಿಕೊಂಡು, ಬೇರೆ ಹುದ್ದೆಗೆ ರಾಜೀನಾಮೆ ನೀಡಬೇಕು. ಮತ್ತೊಬ್ಬರಿಗೆ ಅವಕಾಶ ಮಾಡಿಕೊಡದಿದ್ದರೆ ಪಕ್ಷದಿಂದಲೇ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಾಯಿನಾಥ ಗಾವಂಕರ ಎಚ್ಚರಿಸಿದರು.
ನಗರದ ಕಾಂಗ್ರೆಸ್ ಜಿಲ್ಲಾ ಕಾರ್ಯಾಲಯದಲ್ಲಿ ಮಂಗಳವಾರ ನಡೆದ 14 ಬ್ಲಾಕ್ ಅಧ್ಯಕ್ಷರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
‘ಕೆಲವು ತಾಲ್ಲೂಕುಗಳಲ್ಲಿ ಒಬ್ಬರೇ ಒಂದಕ್ಕಿಂತ ಹೆಚ್ಚು ಹುದ್ದೆ ಹೊಂದಿರುವವ ವಿಚಾರ ಗಮನಕ್ಕೆ ಬಂದಿದೆ. ಶೀಘ್ರದಲ್ಲೇ ಅಂತಹ ವ್ಯಕ್ತಿಗಳು ಒಂದು ಹುದ್ದೆಗೆ ಮಾತ್ರ ಸೀಮಿತ ಆಗಬೇಕು’ ಎಂದರು.
‘ಯಾವುದೇ ಬ್ಲಾಕ್‌ನಲ್ಲಿ ಗುಂಪುಗಾರಿಕೆಗೆ ಅವಕಾಶ ನೀಡಬಾರದು. ಬ್ಲಾಕ್ ಅಧ್ಯಕ್ಷರು ಎಲ್ಲರನ್ನೂ ವಿಶ್ವಾಸಕ್ಕೆ ತಗೆದುಕೊಂಡು, ಒಂದೇ ಕುಟುಂಬದ ರೀತಿ ಕಾರ್ಯನಿರ್ವಹಿಸಬೇಕು. ಪಕ್ಷದಿಂದ ನೇಮಕವಾದ ಮತಗಟ್ಟೆ ಹಂತ ಏಜೆಂಟ್‌ಗಳು (ಬಿಎಲ್‍ಎ)ಮತದಾರ ಪಟ್ಟಿಯನ್ನು ಸೂಕ್ತವಾಗಿ ಪರಿಶೀಲಿಸಿ, ಹೊಸ ಮತದಾರರ ಸೇರ್ಪಡೆ, ಮೃತ ಮತದಾರರ ಹೆಸರು ಪಟ್ಟಿಯಿಂದ ತಗೆದುಹಾಕುವಂತೆ ನೋಡಿಕೊಳ್ಳಬೇಕು’ ಎಂದು ಹೇಳಿದರು.
ಜಿಲ್ಲಾ ಘಟಕದ ಉಪಾಧ್ಯಕ್ಷ ಶಂಭು ಶೆಟ್ಟಿ ಮಾತನಾಡಿ, ‘ಬ್ಲಾಕ್ ಅಧ್ಯಕ್ಷರು ಸೂಕ್ತ ಮಾಹಿತಿ ಪಡೆದುಕೊಂಡು, ತಮ್ಮ ಬ್ಲಾಕ್ ವ್ಯಾಪ್ತಿಯಲ್ಲಿ ಕಾರ್ಯಾಗಾರ ನಡೆಸಿ ಕಾರ್ಯಕರ್ತರಿಗೆ ಸೂಕ್ತ ಮಾಹಿತಿ ಒದಗಿಸಬೇಕು’ ಎಂದರು.
ಕಾಂಗ್ರೆಸ್ ಸಾಮಾಜಿಕ ಜಾಲತಾಣ ಜಿಲ್ಲಾ ಘಟಕದ ಅಧ್ಯಕ್ಷ ಪ್ರಸನ್ನ ಶೆಟ್ಟಿ, ಶಿರಸಿ ಬ್ಲಾಕ್ ಅಧ್ಯಕ್ಷ ಜಗದೀಶ ಗೌಡ, ಸಿದ್ದಾಪುರದ ವಸಂತ ನಾಯ್ಕ, ಹಳಿಯಾಳದ ಕೃಷ್ಣ ಪಾಟೀಲ, ದಾಂಡೇಲಿಯ ಮೋಹನ ಹಲವಾಯಿ, ಜೊಯಿಡಾದ ಮಾರುತಿ ಗಾವಡೆ, ಕಾರವಾರದ ಅರವಿಂದ ಕಲ್ಗುಟಕರ, ಅಂಕೋಲಾದ ಮಂಜೇಶ್ವರ ನಾಯಕ, ಹೊನ್ನಾವರದ ಮಹೇಶ ನಾಯ್ಕ, ಮಂಕಿಯ ಗೋವಿಂದ ನಾಯ್ಕ, ಭಟ್ಕಳದ ವೆಂಕಟೇಶ ನಾಯ್ಕ, ಯಲ್ಲಾಪುರದ ವಿ.ಎಸ್.ಭಟ್, ಮುಂಡಗೋಡದ ಕೃಷ್ಣ ಹಿರೇಹಳ್ಳಿ, ಬನವಾಸಿಯ ಗಣಪತಿ ನಾಯ್ಕ ಇದ್ದರು.
ಬ್ಲಾಕ್ ಸಮಿತಿ ಸೆಲ್ ಸಮಿತಿ ಘಟಕ ಸಮಿತಿಗಳು ಇನ್ನಷ್ಟು ಕ್ರಿಯಾಶೀಲವಾಗಬೇಕು. ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಹೊಸ ಮುಖಗಳಿಗೂ ಅವಕಾಶ ನೀಡಬೇಕುಸಾಯಿನಾಥ ಗಾಂವಕರ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.