ಅಂಕೋಲಾ: ‘ಕಾಂಗ್ರೆಸ್ ಪಕ್ಷ ಸಮಾಜದಲ್ಲಿ ಧ್ವನಿ ಇಲ್ಲದವರನ್ನು ಮುಖ್ಯ ವಾಹಿನಿಗೆ ತರುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಶಕ್ತಿಯ ಮುಂದೆ ಬಿಜೆಪಿ ರಾಜ್ಯದಲ್ಲಿ ಉಸಿರೆತ್ತುತ್ತಿಲ್ಲ. ಬಿಜೆಪಿಯವರು ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುತ್ತಾ ಇನ್ನೊಂದೆಡೆ ಗ್ಯಾರಂಟಿ ಪ್ರಯೋಜನಗಳನ್ನು ಪಡೆಯುವುದರಲ್ಲಿ ಅವರೇ ಮೊದಲ ಸ್ಥಾನದಲ್ಲಿದ್ದಾರೆ’ ಎಂದು ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಗೌಡ ಹೇಳಿದರು.
ನಗರದ ನಾಡವರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಯುವ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡಿದರು.
‘ಬಿಜೆಪಿ ಪಕ್ಷದಲ್ಲಿ ಆಯಾ ಪ್ರಾಂತಕ್ಕೊಂದು ಅಧ್ಯಕ್ಷರಾಗಿದ್ದಾರೆ. ಬೆಂಗಳೂರು ನಗರದಲ್ಲಿ ಆರ್. ಅಶೋಕ, ಇನ್ನೊಂದೆಡೇ ಯತ್ನಾಳ ಹೀಗೆ ರಾಜ್ಯದ ಹಲವು ಭಾಗಗಳಲ್ಲಿ ಅವರವರೇ ಪಕ್ಷದ ಅಧ್ಯಕ್ಷರಾಗಿ ಕಾಂಗ್ರೆಸ್ ನ ಶಕ್ತಿಯ ಮುಂದೆ ನಲಗುತ್ತಿದ್ದಾರೆ. ರಾಜ್ಯದಲ್ಲಿ ನಮ್ಮದೇ ಸರ್ಕಾರವಿದ್ದು, ನಮ್ಮ ಪಕ್ಷದ ವಿಚಾರಗಳನ್ನು ಮನೆ ಮನೆಗೆ ತಲುಪಿಸುವ ಕೆಲಸವನ್ನು ಯುವ ಕಾಂಗ್ರೆಸ್ ಮಾಡಲಿ’ ಎಂದರು.
ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಜಾತಾ ಗಾಂವಕರ ಮಾತನಾಡಿ, ‘ರಾಜ್ಯದಲ್ಲಿ ಯುವ ಶಕ್ತಿ ಬಲಗೊಳ್ಳಬೇಕು. ಹಿರಿಯರ ಮಾರ್ಗದರ್ಶನ, ಜನಪ್ರತಿನಿಧಿಗಳು ಹಾಗೂ ಪಕ್ಷದ ನಾಯಕರು, ಕಿರಿಯರ ಸಹಕಾರವನ್ನು ಪಡೆದು ಪಕ್ಷವನ್ನು ಗಟ್ಟಿಗೊಳಿಸುವ ಕಾಯಕ ಯುವ ಕಾಂಗ್ರೆಸ್ ನಿಂದಾಗಲಿ’ ಎಂದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಾಯಿ ಗಾಂವಕರ, ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಅಬ್ದುಲ್ ದೇಸಾಯಿ ಮತ್ತು ಕಾರ್ಯಾಧ್ಯಕ್ಷ ಬಾಹುಬಲಿ ಜೈನ ಮಾತನಾಡಿದರು.
ಕಾರವಾರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಕಲ್ಗುಟಕರ, ಅಂಕೋಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಶ್ವರ ನಾಯಕ, ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪಾಂಡುರಂಗ ಗೌಡ, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಹನೀಫ್ ಖುರೇಷಿ, ಪವನ್ ನಾಯ್ಕ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಅಮೋದ ಸಿರ್ಸಿಕರ್, ಉಪಾಧ್ಯಕ್ಷ ಹಸನ ಪಠಾಣ್, ಹರೀಶ್ ನಾಯ್ಕ, ಪ್ರಧಾನ ಕಾರ್ಯದರ್ಶಿಗಳಾದಸೈಯದ ಖಾದ್ರಿ, ಕಾವ್ಯನಂದ ನಾಯ್ಕ, ಸಂತೋಷ ನಾಯ್ಕ, ನೂತನ್ ಜೈನ, ಅಂಕೋಲಾ ಯುವ ಕಾಂಗ್ರೆಸ್ ಅಧ್ಯಕ್ಷರ ಅಭಿನಂದನ ಖಾರ್ವಿ, ಕಾರವಾರ ಯುವ ಕಾಂಗ್ರೆಸ್ ಅಧ್ಯಕ್ಷ ಅಭಿರಾಣೆ, ಮಾರುತಿ ಹರಿಕಂತ್ರ ಸೇರಿದಂತೆ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.