ADVERTISEMENT

ಕೇಂದ್ರ ಸರ್ಕಾರ ಜನವಿರೋಧಿ ನೀತಿ ಕೈಬಿಡಲಿ

ರಾಷ್ಟ್ರಪತಿಗೆ ಮನವಿ ಸಲ್ಲಿಸಿದ ಕಾಂಗ್ರೆಸ್ ಕಾರ್ಯಕರ್ತರು

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2019, 16:43 IST
Last Updated 12 ನವೆಂಬರ್ 2019, 16:43 IST
ಶಿರಸಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು
ಶಿರಸಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು   

ಶಿರಸಿ: ಕೇಂದ್ರ ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿದ್ದು, ಮಧ್ಯಪ್ರವೇಶಿಸಿ, ಜನವಿರೋಧಿ ಪ್ರವೃತ್ತಿ ಕೈಬಿಟ್ಟು ಆರ್ಥಿಕ ಪರಿಸ್ಥಿತಿ ಉತ್ತಮ ಪಡಿಸಲು ಸೂಚನೆ ನೀಡಬೇಕು ಎಂದು ರಾಷ್ಟ್ರಪತಿ ಅವರನ್ನು ಒತ್ತಾಯಿಸಿ, ಕಾಂಗ್ರೆಸ್ ಜಿಲ್ಲಾ ಘಟಕವು ಮಂಗಳವಾರ ಇಲ್ಲಿ ತಹಶೀಲ್ದಾರ್ ಎಂ.ಆರ್.ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಿತು.

2014ರ ಚುನಾವಣೆ ನಂತರ ರಾಷ್ಟ್ರದಲ್ಲಿ ಬಿಜೆಪಿಯಿಂದ ಜನವಿರೋಧಿ ಆಡಳಿತ ನಡೆಯುತ್ತಿದೆ. ರೈತರು, ಕೂಲಿ ಕಾರ್ಮಿಕರು, ಬಡವರ ಚಿಂತೆಯಿಲ್ಲದ ಬಿಜೆಪಿ ಸರ್ಕಾರ ಉದ್ಯಮಿಗಳನ್ನು ಬೆಂಬಲಿಸಿ ದೇಶದ ಜನರಿಗೆ ಅನ್ಯಾಯ ಮಾಡುತ್ತಿದೆ. ದಿನಬಳಕೆ ವಸ್ತುಗಳ ದರ ಹೆಚ್ಚಾಗಿ ಜನರು ಜೀವನ ನಡೆಸುವುದು ಕಷ್ಟವಾಗಿದೆ. ಭಾವನಾತ್ಮಕ ವಿಷಯ ಮುಂದಿಟ್ಟು ಚುನಾವಣೆ ಗೆಲ್ಲುವ ಬಿಜೆಪಿಯಿಂದ ಜನರಿಗೆ ಕಿಂಚಿತ್ ಪ್ರಯೋಜನವಿಲ್ಲ. ಅತಿವೃಷ್ಟಿ, ಅನಾವೃಷ್ಟಿಯಂತಹ ಸಂದರ್ಭದಲ್ಲಿಯೂ ಸ್ಪಂದಿಸದ ಕೇಂದ್ರ ಸರ್ಕಾರ ಈ ದೇಶಕ್ಕೆ ಕಪ್ಪುಚುಕ್ಕೆಯಾಗಿದೆ ಎಂದು ಮನವಿಯಲ್ಲಿ ದೂರಲಾಗಿದೆ.

ರಾಷ್ಟ್ರದಲ್ಲಿ ಅತಿವೃಷ್ಟಿ, ಅನಾವೃಷ್ಟಿ ಉಂಟಾಗಿ ಜನರ ಬದುಕು ದುಸ್ತರವಾಗಿದೆ. ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೇ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಪ್ರಧಾನಿ ಮಾತ್ರ ವಿದೇಶಿ ಪ್ರವಾಸದಲ್ಲಿ ಮಗ್ನರಾಗಿದ್ದಾರೆ. ವಿದೇಶಿ ವಸ್ತುಗಳಿಗೆ ಭಾರತದಲ್ಲಿ ಮುಕ್ತ ಮಾರುಕಟ್ಟೆ ಕಲ್ಪಿಸಿ ಮೂಲಕ ಮತ್ತೆ ದೇಶವನ್ನು ವಿದೇಶಿ ಕಂಪನಿಗೆ ಮಾರಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಎಲ್ಲ ಕಾರಣಕ್ಕೆ ದೇಶದ ಜನರು ಕಂಗಾಲಾಗಿದ್ದು, ತಕ್ಷಣ ರಾಷ್ಟ್ರಪತಿ ಮಧ್ಯ ಪ್ರವೇಶಿಸಿ ಪರಿಸ್ಥಿತಿ ಸುಧಾರಿಸಬೇಕು. ಶಿಸ್ತಿನ ಆಡಳಿತ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿ ದೇಶದಲ್ಲಿನ ಬಡತನ, ನಿರುದ್ಯೋಗ ನಿರ್ಮೂಲನೆ ಮಾಡಬೇಕು ಎಂದು ವಿವರಿಸಲಾಗಿದೆ.

ADVERTISEMENT

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ, ಪ್ರಮುಖರಾದ ಎಸ್.ಕೆ.ಭಾಗವತ, ಜಗದೀಪ ತೆಂಗೇರಿ, ಕೆ.ಜಿ.ನಾಗರಾಜ, ವೆಂಕಟೇಶ ಹೆಗಡೆ, ಸಿ.ಎಫ್.ನಾಯ್ಕ, ಶ್ರೀಲತಾ ಕಾಳೇರಮನೆ, ರಮೇಶ ದುಬಾಶಿ, ಎಚ್.ಎಂ.ನಾಯ್ಕ, ದೀಪಕ ದೊಡ್ಡೂರು, ಹೊನ್ನಪ್ಪ ನಾಯಕ ಕುಮಟಾ, ವಿ.ಎಲ್.ನಾಯಕ ಕುಮಟಾ, ನಾಗೇಶ ನಾಯ್ಕ, ಅಬ್ದುಲ್ ಮಜೀದ್, ಎಂ.ಆರ್.ನಾಯ್ಕ, ಅಬ್ಬಾಸ್ ತೋನ್ಸೆ, ಎಂ.ಎನ್.ಸುಬ್ರಹ್ಮಣ್ಯ, ಶ್ರೀಪಾದ ಹೆಗಡೆ, ಈಶ್ವರ ನಾಯ್ಕ, ಕೃಷ್ಣಾ ಹಿರೇಹಳ್ಳಿ, ಸಂತೋಷ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.