ADVERTISEMENT

ವೈದ್ಯಕೀಯ ಉಪಕರಣ ಖರೀದಿ ಅವ್ಯವಹಾರ ಆರೋಪ: ಸರ್ಕಾರದ ವಿರುದ್ಧ ಕಾಂಗ್ರೆಸ್ ಹೋರಾಟ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2020, 11:25 IST
Last Updated 1 ಸೆಪ್ಟೆಂಬರ್ 2020, 11:25 IST
ಎಂ.ನಾರಾಯಣಸ್ವಾಮಿ
ಎಂ.ನಾರಾಯಣಸ್ವಾಮಿ   

ಶಿರಸಿ: ‘ಕೋವಿಡ್ ಚಿಕಿತ್ಸೆಗಾಗಿ ವೈದ್ಯಕೀಯ ಉಪಕರಣ ಖರೀದಿಯಲ್ಲಿ ರಾಜ್ಯ ಸರ್ಕಾರ ನಡೆಸಿರುವ ಭ್ರಷ್ಟಾಚಾರ, ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಸುಗ್ರೀವಾಜ್ಞೆ ವಿರೋಧಿಸಿ ಸದನದಲ್ಲಿ ಅಹೋರಾತ್ರಿ ಧರಣಿ ನಡೆಸಲಿದ್ದೇವೆ’ ಎಂದು ವಿಧಾನ ಪರಿಷತ್‌ನ ಕಾಂಗ್ರೆಸ್ ಮುಖ್ಯ ಸಚೇತಕ ಎಂ.ನಾರಾಯಣಸ್ವಾಮಿ ಹೇಳಿದರು.

ನಗರಕ್ಕೆ ಮಂಗಳವಾರ ಭೇಟಿ ನೀಡಿದ್ದ ಅವರು ಸುದ್ದಿಗಾರರ ಜೊತೆ ಮಾತನಾಡಿದರು. ‌

‘ಸರ್ಕಾರ ಕಾಟಾಚಾರಕ್ಕೆ ಸೆ.21ರಿಂದ ಕೇವಲ 10 ದಿನ ಸದನ ಕರೆದಿದೆ. ಇದರಲ್ಲಿ ಚರ್ಚೆಗೆ ಏಳು ದಿನ ಮಾತ್ರ ಸಿಗಬಹುದು. ಈ ಅವಧಿಯಲ್ಲೇ 24 ಮಸೂದೆಗಳನ್ನು ಮಂಡಿಸಲು ಸರ್ಕಾರ ಸಿದ್ಧವಾಗಿದೆ. ಹಾಗಿದ್ದರೆ ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ, ನೆರೆ ಹಾವಳಿಯಿಂದ ಉಂಟಾಗಿರುವ ಸಮಸ್ಯೆಗಳ ಕುರಿತು ಚರ್ಚಿಸಲು ಅವಕಾಶವೂ ಸಿಗುವ ಸಾಧ್ಯತೆ ವಿರಳ’ ಎಂದು ಹೇಳಿದರು.

ADVERTISEMENT

‘ಈ ಅಧಿವೇಶವನ್ನು ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಸಬೇಕಿತ್ತು. ಈ ಹಿಂದೆ ಜೆ.ಡಿ.ಎಸ್– ಕಾಂಗ್ರೆಸ್ ಮೈತ್ರಿ ಸರ್ಕಾರ ಆಡಳಿತದಲ್ಲಿ ಇದ್ದಾಗ, ಬಿ.ಜೆ.ಪಿ.ಯವರು 60 ದಿನ ಅಧಿವೇಶನ ನಡೆಸಲು ಒತ್ತಾಯಿಸಿದ್ದರು. ಆದರೆ, ಈಗ ಅಧಿಕಾರದಲ್ಲಿರುವ ಅವರೇ ಅಧಿವೇಶನವನ್ನು 10 ದಿನಕ್ಕೆ ಸೀಮಿತಗೊಳಿಸಿದ್ದಾರೆ’ ಎಂದು ಟೀಕಿಸಿದರು.

‘ವಿರೋಧ ಪಕ್ಷವಾಗಿ ನಾವು ಸದನದಲ್ಲಿ ಸರ್ಕಾರದ ಮೇಲೆ ಒತ್ತಡ ತರಲು ಸಿದ್ಧತೆ ನಡೆಸಿಕೊಂಡಿದ್ದೇವೆ. ವಿಧಾನಸಭೆ ಮತ್ತು ವಿಧಾನ ಪರಿಷತ್ ಎರಡೂ ಕಡೆಗಳಲ್ಲಿ ಪಕ್ಷದ ಶಾಸಕರಿಂದ ತಲಾ ಐದು ಪ್ರಶ್ನೆಗಳನ್ನು ಕೇಳಲಿದ್ದೇವೆ. ಈಗಾಗಲೆ ಎರಡು ಸಾವಿರ ಪ್ರಶ್ನೆಗಳನ್ನು ಸಿದ್ಧಪಡಿಸಿಕೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.

ಕಾಂಗ್ರೆಸ್ ಜಿಲ್ಲಾ ಸಮಿತಿಯ ಅಧ್ಯಕ್ಷ ಭೀಮಣ್ಣ ನಾಯ್ಕ, ಪ್ರಮುಖರಾದ ದೀಪಕ ದೊಡ್ಡೂರು, ಎಸ್.ಕೆ.ಭಾಗ್ವತ್, ಜಗದೀಶ ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.