ADVERTISEMENT

ಹೊಸ ಮೀಸಲಾತಿ | ಶಿರಸಿಯಲ್ಲಿ ಕಾಂಗ್ರೆಸ್‌ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2023, 8:26 IST
Last Updated 29 ಮಾರ್ಚ್ 2023, 8:26 IST
   

ಶಿರಸಿ: ವಿವಿಧ ಜಾತಿ, ವರ್ಗಗಳ ಮೀಸಲಾತಿಯಲ್ಲಿ ತಾರತಮ್ಯ, ಸಂವಿಧಾನ ವಿರೋಧಿ ನೀತಿ ಅನುಸರಣೆ ಜೊತೆ ವ್ಯಕ್ತಿಗತ ಹಕ್ಕುಗಳಿಗೆ ಧಕ್ಕೆ ನೀಡುತ್ತಿರುವ ಕೇಂದ್ರ ಸರ್ಕಾರದ ನಡೆ ವಿರುದ್ಧ ಶಿರಸಿಯಲ್ಲಿ ಕಾಂಗ್ರೆಸ್ ಪರಿಶಿಷ್ಟ ಜಾತಿ, ವರ್ಗಗಳ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಬುಧವಾರ ನಗರದ ಬಿಡ್ಕಿ ಬಯಲಿನ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಧರಣಿ ನಡೆಸಿದ ಕಾಂಗ್ರೆಸ್ ಕಾರ್ಯೊರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಕಾಂಗ್ರೆಸ್ ಮುಖಂಡ ವೆಂಕಟೇಶ ಹೆಗಡೆ ಹೊಸಬಾಳೆ ಮಾತನಾಡಿ, 1947ಕ್ಕೆ ಸಿಕ್ಕ ಸ್ವಾತಂತ್ರ್ಯ ಬಿಜೆಪಿ ಅಧಿಕಾರಾವಧಿಯಲ್ಲಿ ಹರಣ ಆಗುತ್ತಿದೆಯೇ ಎಂಬ ಭಾವನೆ ಬರುತ್ತಿದೆ. ಐಟಿ, ಇಡಿಗಳನ್ನು ತಮ್ಮಿಚ್ಛೆಯಂತೆ ಬಳಸಿಕೊಂಡು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕುಟುಂಬದ ಕುಡಿಯನ್ನು ಚಿವುಟಲು ಮುಂದಾಗಿದೆ. ಇದಕ್ಕೆ ಮುಂಬರುವ ದಿನಗಳಲ್ಲಿ ಬಿಜೆಪಿ ಬೆಲೆ ತೆರಬೇಕು ಎಂದರು.

ADVERTISEMENT

ಹೋರಾಟಗಾರ ರವೀಂದ್ರ ನಾಯ್ಕ ಮಾತನಾಡಿ, ಇಂದು ದೇಶದಾದ್ಯಂತ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಸರ್ಕಾರದ ವಿರುದ್ಧ ಮಾತನಾಡಿದರೆ ಅಂಥವರ ಬಾಯಿ ಮುಚ್ಚಿಸುವ ಕೆಲಸ ಆಗುತ್ತಿದೆ. ವ್ಯಕ್ತಿಗತ ಹಕ್ಕಿನ ಹರಣ ಮಾಡಲಾಗುತ್ತಿದೆ. ಕಾಂಗ್ರೆಸ್ ಬೆಳವಣಿಗೆ ಸಹಿಸದೆ ಬಿಜೆಪಿ ಇಂಥ ಕೃತ್ಯದಲ್ಲಿ ತೊಡಗಿದೆ ಎಂದರು.

ಎಐಸಿಸಿ ಹಿಂದುಳಿದ ವರ್ಗಗಳ ಕೊ ಆರ್ಡಿ‌ನೇಟರ್ ನಾಗರಾಜ ನಾರ್ವೇಕರ್ ಮಾತನಾಡಿ, ಇಂದು ಸಂವಿಧಾನ ವಿರೋಧಿ ಚಟುವಟಿಕೆ ಕೇಂದ್ರ ಸರ್ಕಾರದಿಂದ ಹೆಚ್ಚಿದೆ. ನ್ಯಾಯಾಲಯದ ಆದೇಶ ಧಿಕ್ಕರಿಸಿ ದ್ವೇಷದ ರಾಜಕಾರಣ ನಡೆಯುತ್ತಿದೆ. ಇದು ಖಂಡನೀಯ ಎಂದರು.
ಬಿಜೆಪಿಯಲ್ಲಿರುವ ಹಿಂದುಳಿದ ವರ್ಗದ ಯುವಕರು ಚುನಾವಣೆ ಮುಗಿಯುವವರೆಗೆ ಎಚ್ಚರಿದಿಂದ ಇರಬೇಕು. ಆಡಳಿತಕ್ಕಾಗಿ ಬಿಜೆಪಿ ಸಾವಿನ ರಾಜಕೀಯ ಆರಂಭಿಸುತ್ತದೆ ಎಂದರು.

ಸಿದ್ದಾಪುರ ಕಾಂಗ್ರೆಸ್ ಘಟಕದ ಅಧ್ಯಕ್ಷ ವಸಂತ ನಾಯ್ಕ, ಬನವಾಸಿ ಬ್ಲಾಕ್ ಘಟಕದ ಅಧ್ಯಕ್ಷ ಸಿ.ಎಫ್.ನಾಯ್ಕ, ಪಕ್ಷದ ವಿವಿಧ ಹಂತದ ಪದಾಧಿಕಾರಿಗಳಾದ ಎಸ್.ಕೆ.ಭಾಗವತ, ಬಸವರಾಜ ದೊಡ್ಮನಿ, ರಾಜು ಉಗ್ರಾಣಕರ್, ಶೈಲೇಶ ಗಾಂಧಿ, ಸತೀಶ ನಾಯ್ಕ, ದೇವರಾಜ್ ಮರಾಠಿ, ಪ್ರದೀಪ ಶೆಟ್ಟಿ, ಬಿ.ಆರ್.ನಾಯ್ಕ, ಅಬ್ಬಾಸ್ ತೋನ್ಸೆ, ರಘು ಕಾನಡೆ, ದೀಪಕ ದೊಡ್ಡೂರು, ಮೋಹಿನಿ ಬೈಲೂರು, ಗಾಯತ್ರಿ
ನೇತ್ರೇಕರ್, ಸುಮಾ ಉಗ್ರಾಣಕರ್ ಇತರರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.