ಶಿರಸಿ: ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ಮಳೆಗಾಲ ಆರಂಭವಾದರೆ ರಸ್ತೆಗಳು ಕೆರೆಗಳಂತಾಗಿ ಜನರು ಓಡಾಡಲು ಬಾರದಂತಾಗುತ್ತದೆ. ಇಂತಹ ಪರಿಸ್ಥಿತಿ ಎದುರಿಸುವ ಸಲುವಾಗಿ ಮುಂಜಾಗೃತಾ ಕ್ರಮವಾಗಿ ಉದ್ಯೋಗ ಖಾತ್ರಿ ಯೋಜನೆಯಡಿ ನೀರಿನ ಕಾಲುವೆಗಳ ದುರಸ್ಥಿ ಕಾರ್ಯ ಕೈಗೊಳ್ಳಲಾಗುತ್ತಿದೆ.
ತಾಲ್ಲೂಕಿನ ಕಾನಗೋಡ ಗ್ರಾಮ ಪಂಚಾಯಿತಿ ಅಜ್ಜಿಬಳ ಗ್ರಾಮದ ಸೊಂಡ್ಲಿಬೈಲ್ ಗ್ರಾಮದ ಕೆರೆಯ ಪಕ್ಕದಲ್ಲಿ ಗ್ರಾಮದ ಸಂಪರ್ಕ ರಸ್ತೆಗಳು ಹಾದುಹೋಗುತ್ತವೆ. ಮಳೆ ಆರಂಭವಾದರೆ ಇಲ್ಲಿನ ರಸ್ತೆಗಳಲ್ಲಿಯೂ ನೀರು ತುಂಬಿ ಓಡಾಡಲು ಕಷ್ಟವಾಗುತ್ತಿತ್ತು. ಇದನ್ನರಿತ ಗ್ರಾಮ ಪಂಚಾಯಿತಿ ಉದ್ಯೋಗ ಖಾತ್ರಿ ಯೋಜನೆಯಡಿ ₹2 ಲಕ್ಷ ವೆಚ್ಚದಲ್ಲಿ ಕಾಲುವೆ ಪುನರುಜ್ಜೀವನ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
ಈ ವೇಳೆ ಕಾಮಗಾರಿ ಸ್ಥಳದಲ್ಲಿ ರೋಜಗಾರ್ ದಿನ ಹಾಗೂ ದುಡಿಯೋಣ ಬಾ ಅಭಿಯಾನ ಆಚರಿಸಿ ಕೂಲಿಕಾರರಿಗೆ ನರೇಗಾ ಯೋಜನೆಯ ಮಾಹಿತಿ ನೀಡುವ ಮೂಲಕ ಅಂತರ್ಜಲ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಕಾಮಗಾರಿಗಳನ್ನು ಪಡೆಯಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜಾರಾಮ ಭಟ್ ತಿಳಿಸಿದರು.
ಮಳೆ ನೀರನ್ನು ಸಂರಕ್ಷಿಸಲು ಹಾಗೂ ರಸ್ತೆಯನ್ನು ಸುರಕ್ಷಿತವಾಗಿಡಲು ಕಾಲುವೆ ದುರಸ್ಥಿ ಅನುಕೂಲವಾಗಿದ್ದು, ಸುತ್ತಲಿನ ಕೂಲಿಕಾರರಿಗೂ ಕೆಲಸ ದೊರೆತು ಅವರ ಆರ್ಥಿಕತೆ ಸುಧಾರಿಸಲು ಅನುಕೂಲವಾಗಿದೆ ಎಂದು ಸ್ಥಳೀಯರಾದ ಸುಬ್ರಾಯ ಹೆಗಡೆ ಹೇಳಿದರು.
ತಾಲ್ಲೂಕು ಐಇಸಿ ಸಂಯೋಜಕಿ ಪೂರ್ಣಿಮಾ ಗೌಡ, ಸಿಬ್ಬಂದಿ ಚಂದ್ರಶೇಖರ ಹಾಗೂ ಸ್ಥಳೀಯರು ಭಾಗಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.