ADVERTISEMENT

ಭಟ್ಕಳ: ಹಣ ಪಡೆದು ವಂಚಿಸಿದ ಶಂಕೆ; ಮಳಿಗೆ ಎದುರು ಜನರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 7:00 IST
Last Updated 5 ನವೆಂಬರ್ 2025, 7:00 IST
   

ಭಟ್ಕಳ: ತಮಿಳುನಾಡಿನ ವ್ಯಕ್ತಿಯೋರ್ವ ಪಟ್ಟಣದ ರಥಬೀದಿಯಲ್ಲಿ ಗೃಹಪಯೋಗಿ ಮಳಿಗೆ ತೆರೆದು ಕಡಿಮೆ ಬೆಲೆಗೆ ಗೃಹಪಯೋಗಿ ವಸ್ತುಗಳನ್ನು ನೀಡುವುದಾಗಿ ಜನರಿಂದ ಲಕ್ಷಾಂತರ ಹಣ ಮುಂಗಡ ಪಡೆದು ಬುಧವಾರ ಭಟ್ಕಳದಿಂದ ಪರಾರಿಯಾಗಿದ್ದಾರೆ. ಹಣ ನೀಡಿ ವಂಚನೆಗೊಳಗಾದ ಗ್ರಾಹಕರು ಅಂಗಡಿ ಮುಂಭಾಗ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ರಥಬೀದಿಯಲ್ಲಿರುವ ಯೂನಿಯನ್‌ ಬ್ಯಾಂಕ್‌ ಎದುರಿನ ಕಾಂಪ್ಲೇಕ್ಸ್‌ನಲ್ಲಿ 2 ದಿನಗಳ ಹಿಂದೆ ಗ್ಲೋಬಲ್‌ ಎಂಟರ್‌ಪ್ರೈಸಸ್‌ ಎಂಬ ಗೃಹಪಯೋಗಿ ಮಳಿಗೆ ತೆರೆದ ತಮಿಳುನಾಡು ಮೂಲದ ವ್ಯಕ್ತಿ ಸ್ಥಳೀಯ 6 ಜನ ಯುವಕ ಯುವತಿಯರನ್ನು ಕೆಲಸಕ್ಕೆ ನೆಮಿಸಿಕೊಂಡಿದ್ದರು.

'ಮಾರುಕಟ್ಟೆಯಲ್ಲಿ ಸಿಗುವ ಗೃಹಪಯೋಗಿ ವಸ್ತುಗಳ ಬೆಲೆಗಿಂತ ಅರ್ಧ ಬೆಲೆಗೆ ನೀಡುವುದಾಗಿ ಲಕ್ಷಾಂತರ ಹಣ ಮುಂಗಡ ಪಡೆದಿದ್ದಾರೆ. ಮೊದಲು ಮೊದಲು ಬಂದ ಗ್ರಾಹಕರಿಗೆ ಹಣ ಪಡೆದ ನಾಲ್ಕೇ ದಿವಸದಲ್ಲಿ ಟಿ.ವಿ, ಪ್ರೀಡ್ಜ್, ಎ.ಸಿ ಗಳನ್ನ ನೀಡಿದ್ದರು. ಜನರ ಖಾತ್ರಿ ಪಡೆಸಿಕೊಂಡ ನಂತರ ಭಿತ್ತಿಪತ್ರಗಳನ್ನು ಮನೆಗೆ ಮನೆಗೆ ಹೋಗಿ ಹಂಚಿ ಗ್ರಾಹಕರ ವಿಶ್ವಾಸ ಗಳಿಸಿದ್ದಾರೆ. ಅಲ್ಪಸಮಯದಲ್ಲೆ ಅವರ ಮೋಸದಾಟಕ್ಕೆ ನಂಬಿದ ಗ್ರಾಹಕರು ₹1ಲಕ್ಷದ ತನಕ ಮುಂಗಡ ಹಣ ನೀಡಿ ತಮಗೆ ಬೇಕಾದ ವಸ್ತುಗಳನ್ನು ಬುಕ್‌ ಮಾಡಿದ್ದರು. ಬುಧವಾರ ಮಳಿಗೆ ಮುಚ್ಚಿ, ಮಾಲೀಕ ನಾಪತ್ತೆಯಾಗಿದ್ದಾರೆ' ಎಂದು ಜನರು ದೂರಿದರು.

ADVERTISEMENT

ಅಂಗಡಿಗೆ ಮುಗಿಬಿದ್ದ ಗ್ರಾಹಕರು ಅಂಗಡಿ ಬೀಗ ಒಡೆದು ಒಳಗಿರುವ ವಸ್ತುಗಳನ್ನು ತೆಗದುಕೊಂಡು ಹೋಗಲು ಪ್ರಯತ್ನ ಮಾಡಿದರು. ಶಹರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ದಿವಾಕರ ಎಂ. ಜನರನ್ನು ಸಮಾಧಾನಿಸಿ ಮುಂಗಡ ಹಣ ನೀಡಿದ ಬಗ್ಗೆ ವೈಯಕ್ತಿಕವಾಗಿ ದೂರು ನೀಡಿದರೇ ಕ್ರಮ ಜರುಗಿಸುವ ಭರವಸೆ ನೀಡಿದರು.

'ಕಡಿಮೆ ಬೆಲೆಗೆ ಗೃಹಪಯೋಗಿ ವಸ್ತುಗಳನ್ನು ನೀಡುತ್ತಾರೆ ಎನ್ನುವ ಭಿತ್ತಿಪತ್ರ ನೋಡಿ ಇಲ್ಲಿ ಬಂದು ಪ್ರೀಡ್ಜ ಖರಿದಿ ಮಾಡಿದ್ದೆ ನಾಲ್ಕು ದಿನದಲ್ಲಿ ನೀಡಿದರು ಮತ್ತೆ 5 ವಸ್ತುಗಳ ಖರೀದಿಗಾಗಿ ₹1 ಲಕ್ಷ ಮುಂಗಡ ನೀಡಿದೆ. ಆದರೆ ಅಂಗಡಿ ಬಂದ್‌ ಮಾಡಿ ಹೋಗಿದ್ದಾರೆ. ನನ್ನಂತೆ ನೂರಾರು ಜನರಿಗೆ ಈ ರೀತಿ ನಂಬಿಸಿ ಕೋಟಿ ಹಣ ಲೂಟಿ ಮಾಡಿ ಹೋಗಿದ್ದಾರೆ. ಪೊಲೀಸರು ಆ ವ್ಯಕ್ತಿಯನ್ನು ಬಂದಿಸಿ ನಮ್ಮ ಹಣ ನಮಗೆ ಮರಳಿಸಬೇಕು' ಎಂದು ಹಣ ಕಳೆದಕೊಂಡ ಸ್ಥಳೀಯರಾದ ಅಜಮತ್ತುಲ್ಲಾ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.