ADVERTISEMENT

ದುಬೈನಿಂದ ಬಂದಿದ್ದ ಭಟ್ಕಳದ ಇಬ್ಬರಿಗೆ ಕೋವಿಡ್ 19 ಸೋಂಕು ದೃಢ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2020, 6:20 IST
Last Updated 24 ಮಾರ್ಚ್ 2020, 6:20 IST
   

ಕಾರವಾರ:ದುಬೈನಿಂದ ಭಟ್ಕಳಕ್ಕೆ ಬಂದ ಇಬ್ಬರಲ್ಲಿ ಕೋವಿಡ್ 19 ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ತಿಳಿಸಿದ್ದಾರೆ.

ಮಾರ್ಚ್ 21ಕ್ಕೆ ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದ 40 ವರ್ಷದ ಪುರುಷ, ತಮ್ಮದೇ ವಾಹನದಲ್ಲಿ ಸಹೋದರ ಸಂಬಂಧಿ ಜೊತೆ ಭಟ್ಕಳದ ಮನೆಗೆ ಬಂದಿದ್ದರು. ನಂತರ ಅರ್ಧ ಗಂಟೆ ಮನೆಯಲ್ಲಿದ‌್ದು, ತಾಲ್ಲೂಕು ಆಸ್ಪತ್ರೆಗೆ ಬಂದು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಅವರ ಗಂಟಲುದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು.

ಮತ್ತೊಬ್ಬ ವ್ಯಕ್ತಿ 65 ವರ್ಷದವರಾಗಿದ್ದು, 18ಕ್ಕೆ ದುಬೈನಿಂದ ಹೊರಟು ಮುಂಬೈಗೆ ಬಂದಿದ್ದರು. ಅಲ್ಲಿಂದ 19ರಂದು ರೈಲಿನಲ್ಲಿ ಹೊರಟು 20ಕ್ಕೆ ಭಟ್ಕಳದ ಮನೆಗೆ ತಲುಪಿದ್ದರು. ಆರೋಗ್ಯ ಕಾರ್ಯಕರ್ತರು ಮರುದಿನ ತಪಾಸಣೆ ನಡೆಸಿದಾಗ ಸೋಂಕಿನ ಲಕ್ಷಣಗಳು ಕಂಡುಬಂದಿದ್ದವು. ಅವರನ್ನು ಮನೆಯಲ್ಲೇ ಕ‌್ವಾರಂಟೈನ್ ಮಾಡಲಾಗಿತ್ತು. ಅವರ ಗಂಟಲು ದ್ರವದ ಪರೀಕ್ಷೆಯೂ ಕೋವಿಡ್ 19 ಪಾಸಿಟಿವ್ ಬಂದಿದೆ. ಇಬ್ಬರ ಪ್ರಯಾಣ ವಿವರಗಳು ಮತ್ತು ಸಂಪರ್ಕಕ್ಕೆ ಬಂದವರ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ತಿಳಿಸಿದರು.

ADVERTISEMENT

ಭಟ್ಕಳ ಪಟ್ಟಣವನ್ನೇ ಕ್ಲಸ್ಟರ್ ಎಂದು ಪರಿಗಣಿಸಲಾಗಿದ್ದು, ಅಲ್ಲಿಗೆ ಹೋಗುವುದು ಮತ್ತು ಬರುವುದನ್ನು ನಿಷೇಧಿಸಲಾಗಿದೆ. ಅಲ್ಲಿ ಫ್ಯುಮಿಗೇಷನ್ ಮಾಡಲಾಗಿದೆ. ಆರೋಗ್ಯ ಕಾರ್ಯಕರ್ತರು 15 ದಿನ ಪ್ರತಿ ಮನೆಗೆ ಭೇಟಿ ನೀಡಲಿದ್ದಾರೆ.

ಭಟ್ಕಳ ತಾಲ್ಲೂಕು ಆಸ್ಪತ್ರೆಯನ್ನು ಕೇವಲ ಕೋವಿಡ್ 19 ಚಿಕಿತ್ಸೆಗಾಗಿ ಮೀಸಲಿಡಲಾಗಿದೆ. ಅಲ್ಲಿದ್ದ ಇತರ ರೋಗಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.