ADVERTISEMENT

ಕಟ್ಟೆಚ್ಚರದಲ್ಲಿ ಮತದಾರನ ತೀರ್ಪು ಪ್ರಕಟ

ಮುಂಜಾನೆಯಿಂದಲೇ ಚಟುವಟಿಕೆಯ ಕೇಂದ್ರವಾದ ಕುಮಟಾದ ಎ.ವಿ.ಬಾಳಿಗಾ ಕಾಲೇಜು

​ಪ್ರಜಾವಾಣಿ ವಾರ್ತೆ
Published 23 ಮೇ 2019, 13:39 IST
Last Updated 23 ಮೇ 2019, 13:39 IST
ಕುಮಟಾದ ಎ.ವಿ.ಬಾಳಿಗಾ ಕಾಲೇಜಿನಲ್ಲಿ ನಿರ್ಮಿಸಲಾಗಿದ್ದ ಮತ ಎಣಿಕೆ ಕೇಂದ್ರದ ಸ್ಟ್ರಾಂಗ್ ರೂಂ ಅನ್ನು ಚುನಾವಣಾಧಿಕಾರಿಗಳು ತೆರೆಯುತ್ತಿರುವುದು.
ಕುಮಟಾದ ಎ.ವಿ.ಬಾಳಿಗಾ ಕಾಲೇಜಿನಲ್ಲಿ ನಿರ್ಮಿಸಲಾಗಿದ್ದ ಮತ ಎಣಿಕೆ ಕೇಂದ್ರದ ಸ್ಟ್ರಾಂಗ್ ರೂಂ ಅನ್ನು ಚುನಾವಣಾಧಿಕಾರಿಗಳು ತೆರೆಯುತ್ತಿರುವುದು.   

ಕುಮಟಾ:ಲೋಕಸಭಾ ಚುನಾವಣೆಗೆ ಏಪ್ರಿಲ್ 23ರಂದು ನಡೆದ ಮತದಾನದ ಮತ ಎಣಿಕೆಯು ಇಲ್ಲಿನ ಡಾ.ಎ.ವಿ.ಬಾಳಿಗಾ ಕಾಲೇಜಿನಲ್ಲಿ ಗುರುವಾರ ನಡೆಯಿತು.ಬೆಳಿಗ್ಗೆ ಐದು ಗಂಟೆಯಿಂದಲೇ ಬಂದಿದ್ದ ಚುನಾವಣಾ ಸಿಬ್ಬಂದಿ ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಿದರು.

ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ಹರೀಶಕುಮಾರ್ ಅವರ ಸಮ್ಮುಖದಲ್ಲಿ ಬೆಳಿಗ್ಗೆ 7.40ರ ಸುಮಾರಿಗೆ ಸ್ಟ್ರಾಂಗ್ ರೂಂ ಅನ್ನು ತೆರೆಯಲಾಯಿತು. ಚುನಾವಣಾ ಆಯೋಗದ ಸೂಚನೆಯಂತೆ ಬೆಳಿಗ್ಗೆ 8ಕ್ಕೆ ಸರಿಯಾಗಿ ಮತ ಎಣಿಕೆ ಆರಂಭಿಸಲಾಯಿತು. ಮೊದಲಿಗೆ ಅಂಚೆ ಮತ ಯಂತ್ರಗಳನ್ನು ಎಣಿಕೆ ಮಾಡಲಾಯಿತು. ಅದು ಪೂರ್ಣಗೊಳ್ಳುತ್ತಿದ್ದಂತೆಯೇ ವಿದ್ಯುನ್ಮಾನ ಮತಯಂತ್ರಗಳನ್ನು ತೆರೆದು ಮತ ಎಣಿಕೆ ಕಾರ್ಯ ಹಮ್ಮಿಕೊಳ್ಳಲಾಯಿತು. ಜೊತೆಗೇ ವಿವಿಪ್ಯಾಟ್‌ ಚೀಟಿಗಳನ್ನು ಎಣಿಸಲಾಯಿತು.

ಪ್ರತಿ ವಿಧಾನಸಭಾ ಕ್ಷೇತ್ರದ ಮತ ಯಂತ್ರಗಳನ್ನು ಎಂಟು ಪ್ರತ್ಯೇಕ ಕೊಠಡಿಗಳಿಗೆ ತೆಗೆದುಕೊಂಡು ಹೋಗಿ ಮತದಾರರ ನಿರ್ಣಯವನ್ನು ದಾಖಲಿಸಿಕೊಳ್ಳಲಾಯಿತು. ಈ ವೇಳೆ ಬಿಗಿಪೊಲೀಸ್ ಭದ್ರತೆ, ಅಧಿಕಾರಿಗಳು ಹಾಜರಿದ್ದರು. ಸಂ‍ಪೂರ್ಣ ಪ್ರಕ್ರಿಯೆಯನ್ನು ವಿಡಿಯೊ ಚಿತ್ರೀಕರಣ ಮಾಡಿಕೊಳ್ಳಲಾಯಿತು.

ADVERTISEMENT

ತಲಾ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಇಬ್ಬರಂತೆ ಆಬ್ಸರ್ವರ್‌ಗಳನ್ನು ನೇಮಿಸಲಾಗಿತ್ತು. ಒಬ್ಬರು ಮತಗಟ್ಟೆ ಅಧಿಕಾರಿ ಹಾಗೂ 10 ಮಂದಿ ಸಹಾಯಕ ಮತಗಟ್ಟೆ ಅಧಿಕಾರಿಗಳು (ಎಆರ್‌ಒ) ಮತ ಎಣಿಕೆ ಮಾಡಿದರು. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ14 ಟೇಬಲ್‌ಗಳನ್ನು ಅಳವಡಿಸಲಾಗಿತ್ತು. ಅದರಂತೆ ವಿಧಾನಸಭಾ ಕ್ಷೇತ್ರದ ಮತಗಟ್ಟೆಗಳನ್ನು 14ರಿಂದ ಭಾಗಿಸಿದಾಗ ಸಿಗುವ ಸಂಖ್ಯೆಯಷ್ಟು ಸುತ್ತು ಮತ ಎಣಿಕೆ ಮಾಡಲಾಯಿತು. ಕೊನೆಗೆ ಎಲ್ಲವನ್ನೂಕೂಡಿಸಿ ಮುನ್ನಡೆಯನ್ನು ಪ್ರಕಟಿಸಲಾಯಿತು.

ನಿರಂತರ ಮುನ್ನಡೆ:ಏಳನೇ ಬಾರಿಗೆ ಕಣದಲ್ಲಿದ್ದ ಅನಂತಕುಮಾರ ಹೆಗಡೆ, ತಮ್ಮ ಪ್ರತಿಸ್ಪರ್ಧಿ ಆನಂದ ಅಸ್ನೋಟಿಕರ್ ವಿರುದ್ಧ ಮೊದಲ ಸುತ್ತಿನಿಂದಲೂ ಸಾಕಷ್ಟು ಅಂತರ ಕಾಯ್ದುಕೊಂಡಿದ್ದರು. ಮೊದಲ ಸುತ್ತಿನ ಮತ ಎಣಿಕೆ ಪೂರ್ಣಗೊಂಡಾಗಲೇಅವರಿಗೆ 40 ಸಾವಿರಕ್ಕೂ ಹೆಚ್ಚು ಮತಗಳ ಅಂತರ ಪಡೆದಿದ್ದರು. ನಂತರದ ಸುತ್ತಿನಲ್ಲಿ ಈ ಅಂತರ 50 ಸಾವಿರಕ್ಕೇರಿತು. ಇದೇ ಪ್ರಮಾಣದ ಅಂತರವನ್ನು ಅವರು ಕೊನೆಯವರೆಗೂ ಕಾಯ್ದುಕೊಳ್ಳಲು ಯಶಸ್ವಿಯಾದರು. ಅಂತಿಮವಾಗಿ 4,79,649 ಮತಗಳ ಬೃಹತ್ ಮುನ್ನಡೆ ಪಡೆದು ಆರನೇ ಬಾರಿ ಸಂಸದರಾಗಿ ಆಯ್ಕೆಯಾದರು.

ಒಂದೆರಡು ಕೊರತೆಗಳು:ಮತ ಎಣಿಕೆ ಕೇಂದ್ರದಲ್ಲಿ ಚುನಾವಣಾ ಕರ್ತವ್ಯದ ಸಿಬ್ಬಂದಿ, ಪೊಲೀಸರು ಮತ್ತು ಮಾಧ್ಯಮದವರು ಸುಮಾರು 1,500 ಜನರಿದ್ದರು. ಈ ವಿಚಾರ ಮೊದಲೇ ತಿಳಿದಿದ್ದರೂ ಕೇಂದ್ರದಲ್ಲಿ ಸೂಕ್ತ ಶೌಚಾಲಯದವ್ಯವಸ್ಥೆ ಕಲ್ಪಿಸಿರಲಿಲ್ಲ. ಅಲ್ಲದೇ ಊಟ, ತಿಂಡಿ ಮಾಡಿದ ಬಳಿಕ ಕೈತೊಳೆಯಲು ನೀರಿನ ಕೊರತೆಯಾಗಿ ಕುಡಿಯುವ ನೀರನ್ನೇ ಬಳಸಬೇಕಾದ ಅನಿವಾರ್ಯತೆ ಉಂಟಾಯಿತು.ಈ ಬಗ್ಗೆ ಹಲವರು ಅಸಮಾಧಾನ ವ್ಯಕ್ತಪಡಿಸಿದರು.

ತಾಂತ್ರಿಕ ದೋಷ: ಹಳಿಯಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಳನ್ನು ಎಣಿಕೆ ಮಾಡುತ್ತಿದ್ದಾಗ ಮತಗಟ್ಟೆ ಸಂಖ್ಯೆ 170ರ ವಿದ್ಯುನ್ಮಾನ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತು. ಅದರ ಎಲ್‌ಇಡಿ ಪರದೆ ಬೆಳಗಲಿಲ್ಲ.ಹಾಗಾಗಿ ವಿವಿಪ್ಯಾಟ್‌ನ ಚೀಟಿಗಳನ್ನುಲೆಕ್ಕ ಹಾಕಲು ನಿರ್ಧರಿಸಲಾಯಿತು. ಅಲ್ಲದೇ ಈ ಬಗ್ಗೆ ಚುನಾವಣಾ ಆಯೋಗಕ್ಕೆ ವರದಿ ನೀಡುವುದಾಗಿಯೂ ಚುನಾವಣಾ ವಿಭಾಗದ ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.