ADVERTISEMENT

ಮೊಸಳೆ ದಾಳಿ: ಕಾಳಿ ನದಿಯಲ್ಲಿ ಬಾಲಕನ ಶವ ಪತ್ತೆ

ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2021, 16:24 IST
Last Updated 26 ಅಕ್ಟೋಬರ್ 2021, 16:24 IST
ದಾಂಡೇಲಿಯಲ್ಲಿ ಮೊಸಳೆ ದಾಳಿಯಿಂದ ಮೃತ ಬಾಲಕನ ದೇಹ ಶೋಧಕಾರ್ಯದಲ್ಲಿ ಭಾಗವಹಿಸಿದ ರ‍್ಯಾಫ್ಟಿಂಗ್ ತಂಡ.
ದಾಂಡೇಲಿಯಲ್ಲಿ ಮೊಸಳೆ ದಾಳಿಯಿಂದ ಮೃತ ಬಾಲಕನ ದೇಹ ಶೋಧಕಾರ್ಯದಲ್ಲಿ ಭಾಗವಹಿಸಿದ ರ‍್ಯಾಫ್ಟಿಂಗ್ ತಂಡ.   

ದಾಂಡೇಲಿ: ಭಾನುವಾರ ಕಾಳಿ ನದಿಯಲ್ಲಿ ಮೊಸಳೆ ದಾಳಿಗೆ ತುತ್ತಾಗಿದ್ದ ಬಾಲಕ ಮೊಹೀನ್ ಮೊಹಮ್ಮದ್ ಗುಲ್ಬರ್ಗ (15) ಶವ ಮಂಗಳವಾರ ಬೆಳಿಗ್ಗೆ ಪತ್ತೆಯಾಗಿದೆ.

ಮೊಸಳೆ ದಾಳಿ ನಡೆದ ಅಣತಿ ದೂರದಲ್ಲಿರುವ ವೆಸ್ಟ್ ಕೋಸ್ಟ್ ಪೇಪರ್ ಮಿಲ್‌ನ ಪಂಪ್ ಹೌಸ್ ಹತ್ತಿರ ಮಂಗಳವಾರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ತಂಡಕ್ಕೆ ಬಾಲಕನ ಶವ ಸಿಕ್ಕಿದೆ. ಬಾಲಕನ ಎಡಗೈ, ಒಂದು ಕಿವಿ, ಕಣ್ಣು ಸೇರಿದಂತೆ ದೇಹದ ಕೆಲವು ಭಾಗಗಳನ್ನು ಮೊಸಳೆ ಕಚ್ಚಿ ತಿಂದಿದ್ದು, ಮರಣೋತ್ತರ ಪರೀಕ್ಷೆಗೆ ದಾಂಡೇಲಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು.

ಮಗನಿಗಾಗಿ ಕಾಯುತ್ತಿದ್ದ ಬಾಲಕನ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಮಾಜಿ ಶಾಸಕ ಸುನೀಲ ಹೆಗಡೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ADVERTISEMENT

ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಕಾಳಿ ನದಿಯ ಮೊಸಳೆ ಪಾರ್ಕ್ ಹತ್ತಿರ ಈ ಪ್ರದೇಶ ಇರುವುದರಿಂದ ಈಶ್ವರ ದೇವಸ್ಥಾನದಿಂದ ದಾಂಡೇಲಪ್ಪ ದೇವಸ್ಥಾನದವರೆಗೆ ಬ್ಯಾರಿಕೇಡ್ ನಿರ್ಮಿಸಬೇಕು. ಮೃತ ಬಾಲಕನ ಕುಟುಂಬಕ್ಕೆ ₹5 ಲಕ್ಷ ಪರಿಹಾರ ನೀಡಬೇಕು. ಬಿ.ಜೆ.ಪಿ.ಯಿಂದ ₹ 5,000 ಪರಿಹಾರ ನೀಡಲಾಗುತ್ತದೆ’ ಎಂದರು.

ತಹಶೀಲ್ದಾರ್‌ ಶೈಲೇಶ ಪರಮಾನಂದ, ಡಿ.ವೈ.ಎಸ್‌.ಪಿ ಕೆ.ಎಲ್.ಗಣೇಶ, ಗ್ರಾಮೀಣ ಠಾಣೆಯ ಐ.ಆರ್.ಗಡ್ಡೇಕರ, ನಗರ ಪೊಲೀಸ್ ಠಾಣೆಯ ಪಿ.ಎಸ್.ಐ ಯಲ್ಲಪ್ಪ.ಎಸ್., ನಗರಸಭೆ ಅಧ್ಯಕ್ಷೆ ಸರಸ್ವತಿ ರಜಪೂತ, ಉಪಾಧ್ಯಕ್ಷ ಸಂಜಯ ನಂದ್ಯಾಳಕರ, ನಗರಸಭೆ ಸದಸ್ಯೆ ಪ್ರೀತಿ ನಾಯರ್ ಇದ್ದರು.

ಶೋಧ ಕಾರ್ಯಾಚರಣೆಗೆ 10 ಬೋಟ್‌ಗಳು ಸೇರಿದಂತೆ 11 ತೆಪ್ಪಗಳನ್ನು ಬಳಸಲಾಗಿತ್ತು. ಗಣೇಶ ಗುಡಿಯ ಮುಳುಗು ತಜ್ಞರು ಸಹಕಾರ ನೀಡಿದ್ದರು. ರವಿಕುಮಾರ ನಾಯ್ಕ ರಾಫ್ಟಿಂಗ್ ತಂಡದ ನೇತೃತ್ವದಲ್ಲಿ ಫ್ಲೈ ಕ್ಯಾಚರ್, ಜಂಗಲ್ ರೆಸಾರ್ಟ್, ಜಟ್ಟಿ ತಂಡದ ರವಿ ಬಾಂದಕರ್, ಜಿ.ಇ.ಸೋಮಶೇಖರ್, ಕಿರಣ ಖತ್ತಿಬ್, ಸೈಯದ್ ಅಲಿ, ಗಣೇಶ, ರಫೀಕ್, ಲೋಕಸ್ ಮುಂತಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಮೊಸಳೆ ದಾಳಿ ಇದೇ ಮೊದಲಲ್ಲ:ನದಿ ಸುತ್ತಲಿನ ಪ್ರದೇಶಗಳಾದ ಕರಮಪಲ್ಲಿ, ಮೈನಾಳ್, ಈಶ್ವರ ದೇವಸ್ಥಾನ, ಪಂಪ್ ಹೌಸ್ ಸಮೀಪದಲ್ಲಿ ಈ ಹಿಂದೆ ಸಹ ಮೊಸಳೆ ದಾಳಿ ನಡೆದಿವೆ. ಈಗಾಗಲೇ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನಾದರೂ ಮೊಸಳೆ ದಾಳಿಯಿಂದ ನದಿ ತೀರದ ಜನರ ರಕ್ಷಣೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.