ADVERTISEMENT

ದಾಂಡೇಲಿ: ಪದೇಪದೆ ಮೊಸಳೆ ಹಾವಳಿ: ಕಾಳಿ ನದಿ ತಟದ ನಿವಾಸಿಗಳಿಗೆ ನಿಲ್ಲದ ಆತಂಕ

ನಗರಸಭೆಯ ವ್ಯಾಪ್ತಿಯಲ್ಲಿ ಕಾಳಿ ನದಿ ತಟದ ನಿವಾಸಿಗಳಿಗೆ ನಿಲ್ಲದ ಆತಂಕ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2022, 14:45 IST
Last Updated 15 ಮಾರ್ಚ್ 2022, 14:45 IST
ದಾಂಡೇಲಿಯ ವಿನಾಯಕ ನಗರದ ಕಾಳಿ ನದಿ ತಟದಲ್ಲಿ ಅರಣ್ಯ ಇಲಾಖೆ ಹಾಗೂ ನಗರಾಡಳಿತದಿಂದ ತಾತ್ಕಾಲಿಕ ತಂತಿ ಬೇಲಿ ನಿರ್ಮಾಣ ಮಾಡಲಾಗಿದ್ದು, ಮೊಸಳೆಗಳು ಇರುವ ಬಗ್ಗೆ ಎಚ್ಚರಿಕೆಯ ಫಲಕ ಅಳವಡಿಸಲಾಗಿದೆ
ದಾಂಡೇಲಿಯ ವಿನಾಯಕ ನಗರದ ಕಾಳಿ ನದಿ ತಟದಲ್ಲಿ ಅರಣ್ಯ ಇಲಾಖೆ ಹಾಗೂ ನಗರಾಡಳಿತದಿಂದ ತಾತ್ಕಾಲಿಕ ತಂತಿ ಬೇಲಿ ನಿರ್ಮಾಣ ಮಾಡಲಾಗಿದ್ದು, ಮೊಸಳೆಗಳು ಇರುವ ಬಗ್ಗೆ ಎಚ್ಚರಿಕೆಯ ಫಲಕ ಅಳವಡಿಸಲಾಗಿದೆ   

ದಾಂಡೇಲಿ: ಕಾಳಿ ನದಿ ಹರಿಯುವ ವಾರ್ಡ್‌ಗಳ ಸುತ್ತ ಈಗ ಮೊಸಳೆಗಳು ದಾಳಿ ಮಾಡುವ, ಬೀದಿಗಳಲ್ಲಿ ಸಂಚರಿಸುವ ಪ್ರಕರಣಗಳು ಹೆಚ್ಚಿವೆ. ನದಿ ತಟಕ್ಕೆ ಹೊಂದಿಕೊಂಡಿರುವ ಪಟೇಲ್ ನಗರ, ವಿನಾಯಕ ನಗರ, ಹಾಲಮಡ್ಡಿ, ಈಶ್ವರ ದೇವಾಲಯ ಸಮೀಪ ಮೊಸಳೆಗಳು ಜನ ವಸತಿ ಪ್ರದೇಶದಲ್ಲಿ ಆಗಾಗ ಕಾಣಿಸಿಕೊಂಡು ಆತಂಕ ಉಂಟು ಮಾಡುತ್ತಿವೆ. ಕೋಗಿಲಬನ ಗ್ರಾಮದಲ್ಲೂ ಕಂಡುಬರುತ್ತಿವೆ.

ಮೂರು ತಿಂಗಳ ಅವಧಿಯಲ್ಲಿ ವಿನಾಯಕ ನಗರದಲ್ಲಿ ಬಾಲಕನ ಮೇಲೆ ದಾಳಿ, ಪಟೇಲ್ ನಗರದ ಯುವಕನ ಮೇಲೆ ದಾಳಿ ಮಾಡಿ ಎಳೆದುಕೊಂಡು ಹೋಗಿದ್ದು, ಕೋಗಿಲಬನ ಗ್ರಾಮ ಹಾಗೂ ಬಸ್ ಡಿಪೊ ಹತ್ತಿರ ವಸತಿ ಪ್ರದೇಶಗಳಲ್ಲಿ ಸಂಚರಿಸಿದ ಉದಾಹರಣೆಗಳಿವೆ. ನಗರಸಭೆಯ ವಾರ್ಡ್‌ಗಳಲ್ಲಿ ಜನ ಮೊಸಳೆಗಳ ಹಾವಳಿ ನಿಯಂತ್ರಿಸುವಂತೆ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದಾರೆ.

‘ಮೊಸಳೆಗಳ ಕಾಟ ಹೆಚ್ಚಾಗಿರುವ ಕಾರಣ ನದಿಗೆ ಇಳಿಯುವ ಮುಂಚೆ ಹೆಚ್ಚು ಎಚ್ಚರದಿಂದ ಇರಬೇಕು. ನದಿಯಲ್ಲಿ ಮೀನು, ಮಾಂಸ ಇತರ ಆಹಾರ ಪದಾರ್ಥಗಳ ತ್ಯಾಜ್ಯವನ್ನು ಹಾಕಬಾರದು’ ಎಂದು ಉಪ ವಲಯ ಅರಣ್ಯಾಧಿಕಾರಿ ಸಲೀಂ ಎಚ್ ರೋಣದ ಹೇಳುತ್ತಾರೆ.

ADVERTISEMENT

‘ಕೆಲವು ವರ್ಷಗಳಿಂದ ಮೊಸಳೆಗಳ ಹಾವಳಿಯು ಹೆಚ್ಚುತ್ತಿದ್ದು, ನದಿಯ ತೀರದ ಜನರಿಗೆ ನಿತ್ಯ ಕೆಲಸ ಕಾರ್ಯಗಳಿಗೆ ತೊಂದರೆಯಾಗುತ್ತಿದೆ. ಯಾವ ಕ್ಷಣದಲ್ಲಾದರೂ ಮೊಸಳೆಗಳು ಗ್ರಾಮದ ರಸ್ತೆಯ ಮೇಲೆ, ಬೀದಿ ಗಟಾರಗಳಲ್ಲಿ ಕಾಣಿಸಿಕೊಳ್ಳುತ್ತವೆ. ಇದರಿಂದಾಗಿ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಜನರು ರಸ್ತೆಯಲ್ಲಿ ಓಡಾಡುವುದು ಕಷ್ಟವಾಗಿದೆ’ ಎನ್ನುತ್ತಾರೆ ಕೋಗಿಲಬನ ಗ್ರಾಮದ ನಿವಾಸಿ ಜನ್ನತ್ಬಿ ಕೌಸರ್.

‘ನದಿ ತೀರದ ಮನೆಗಳಲ್ಲಿ ಹೆಣ್ಣು ಮಕ್ಕಳಿಗೆ ದಿನನಿತ್ಯದ ಮನೆ ಕೆಲಸಗಳನ್ನು ಮಾಡಲು ಭಯವೆನಿಸುವ ವಾತಾವರಣ ನಿರ್ಮಾಣವಾಗಿದೆ. ಮೊಸಳೆ ಹಾವಳಿಯಿಂದ ಜನರಿಗೆ ಸೂಕ್ತ ರಕ್ಷಣೆ ಒದಗಿಸಬೇಕು. ನದಿ ನೀರಿನ ಬಳಕೆಗೆ ಬೇರೆ ವ್ಯವಸ್ಥೆ ಮಾಡಬೇಕು’ ಎನ್ನುತ್ತಾರೆ ವಿನಾಯಕ ನಗರದ ನಿವಾಸಿ ಉಮಾ ಎಚ್.ಆರ್.

ಮೊಸಳೆ ದಾಳಿಯಿಂದ ರಕ್ಷಣೆ ಪಡೆಯಲು ಹಾಗೂ ಶಾಶ್ವತ ಪರಿಹಾರ ಕಂಡುಕೊಳ್ಳಲು ನಗರಸಭೆ ಮುಂದಾಗಿದೆ. ಮೊಸಳೆಗಳ ಸಂಖ್ಯೆ, ಸಂತತಿ ಬೆಳವಣಿಗೆ, ನಡವಳಿಕೆ, ಜೀವನ ಕ್ರಮಗಳ ಅಧ್ಯಯನ, ಸ್ಥಳೀಯರಿಗೆ ತರಬೇತಿ, ತಿಳಿವಳಿಕೆ ನೀಡುವ ಕೆಲಸವನ್ನು ನಗರಾಡಳಿತ ಹಾಗೂ ಅರಣ್ಯ ಇಲಾಖೆಗೆ ತಿಳಿಸಲಾಗಿದೆ. ನದಿ ಪಾತ್ರದಲ್ಲಿ ಆರು ಕಿಲೋಮೀಟರ್ ತಡೆಗೋಡೆ ನಿರ್ಮಾಣಕ್ಕೆ ಯೋಜನೆ ಸಿದ್ಧವಿದೆ. ಈಗ ತುರ್ತಾಗಿ 1.6 ಕಿಲೋಮೀಟರ್ ತಂತಿ ಬೇಲಿ ನಿರ್ಮಾಣ ಮಾಡಲಾಗುವುದು. ಜನರು ನದಿಯನ್ನು ಅತಿಯಾಗಿ ಬಳಸುವ ಪ್ರದೇಶದಲ್ಲಿ ನೀರಿನ ಬಳಕೆಗೆ ಬೇರೆ ವ್ಯವಸ್ಥೆ ಮಾಡಲಾಗುವುದು’ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.

‘ಎಚ್ಚರಿಕೆ ನೀಡಲಾಗಿದೆ’

‘ನಗರಾಡಳಿತವು ಎರಡು ಮೊಸಳೆ ದಾಳಿ ಪ್ರಕರಣಗಳ ನಂತರ ಅರಣ್ಯ ಇಲಾಖೆ ಸಹಯೋಗದಲ್ಲಿ ನದಿ ತಟದಲ್ಲಿ ಎಚ್ಚರಿಕೆಯ ಫಲಕಗಳನ್ನು ಅಳವಡಿಸಿದೆ. ಜನರಿಗೆ ಮೊಸಳೆಯ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಪ್ರಚಾರ ಮಾಡಲಾಗಿದೆ’ ಎನ್ನುತ್ತಾರೆ ವಿನಾಯಕ ನಗರ ನಿವಾಸಿಯೂ ಆಗಿರುವ ನಗರಸಭೆ ಅಧ್ಯಕ್ಷೆ ಸರಸ್ವತಿ ರಜಪೂತ.

ಅಧಿಕಾರಿಗಳ, ಜನಪ್ರತಿನಿಧಿಗಳ ಎಲ್ಲ ಆಶ್ವಾಸನೆಗಳು ಆದಷ್ಟು ಬೇಗ ಜಾರಿಗೆ ಬರಬೇಕು, ಮೊಸಳೆಗಳ ಹಾವಳಿ ನಿಲ್ಲಬೇಕು ಎಂಬ ನಿರೀಕ್ಷೆಯಲ್ಲಿ ಬಡಾವಣೆಯ ಜನರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.