ADVERTISEMENT

ಮಳೆ ‘ಮಾಪನ’ ಮಾಡದ ಯಂತ್ರ: ಬೆಳೆ ವಿಮೆ ಯೋಜನೆ ಕೈಗೆತ್ತಿಕೊಳ್ಳಲು ಕಂಪನಿ ಹಿಂದೇಟು

ರಾಜೇಂದ್ರ ಹೆಗಡೆ
Published 6 ಜುಲೈ 2025, 4:11 IST
Last Updated 6 ಜುಲೈ 2025, 4:11 IST
ಶಿರಸಿಯ ಜಾನ್ಮನೆ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಮಳೆ ಮಾಪನ ಕೇಂದ್ರ 
ಶಿರಸಿಯ ಜಾನ್ಮನೆ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಮಳೆ ಮಾಪನ ಕೇಂದ್ರ    

ಶಿರಸಿ: ಉತ್ತರ ಕನ್ನಡ ಜಿಲ್ಲೆಯ 81 ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸ್ಥಾಪಿಸಿರುವ ಮಳೆ ಮಾಪನ ಕೇಂದ್ರಗಳು ಹಾಳಾಗಿರುವ ಕಾರಣ ಮುಂದಿಟ್ಟಿರುವ ವಿಮಾ ಕಂಪನಿಯು ಪ್ರಸಕ್ತ ಸಾಲಿನ ಹವಾಮಾನಾಧಾರಿತ ಬೆಳೆ ವಿಮೆ ಯೋಜನೆ ಕೈಗೆತ್ತಿಕೊಳ್ಳಲು ಹಿಂದೇಟು ಹಾಕುತ್ತಿದೆ. ಕಾರಣ ಸರ್ಕಾರದಿಂದ ಈವರೆಗೂ ಅಧಿಸೂಚನೆ ಪ್ರಕಟವಾಗಿಲ್ಲ. 

2023–24ನೇ ಸಾಲಿನಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ 41,694 ರೈತರು ವಿಮಾ ಕಂತು ತುಂಬಿದ್ದರು. ಇದರಲ್ಲಿ ಅಡಿಕೆ, ಕಾಳುಮೆಣಸು, ಮಾವು ಹಾಗೂ ಶುಂಠಿ ಬೆಳೆಯ 18,896 ಹೆಕ್ಟೇರ್ ಪ್ರದೇಶ ಸೇರಿದೆ. ಪ್ರತಿ ವರ್ಷ ಹೆಕ್ಟೇರ್ ಅಡಿಕೆಗೆ ₹6,400, ಕಾಳುಮೆಣಸಿಗೆ ₹2,350, ಮಾವು ಹಾಗೂ ಶುಂಠಿಗೆ ತಲಾ ₹7,000 ವಿಮಾ ಪ್ರೀಮಿಯಂ ಪಾವತಿಸಿದ್ದರು. ಆದರೆ ಮಳೆ ಮಾಪನ ಕೇಂದ್ರಗಳಿಂದ ಸರಿಯಾದ ಮಾಹಿತಿ ಬಂದಿಲ್ಲ ಎಂಬ ಕಾರಣ ನೀಡಿ ನಿಗದಿತ ಸಮಯ ಪೂರ್ಣಗೊಂಡರೂ ವಿಮಾ ಪರಿಹಾರ ರೈತರ ಖಾತೆ ಜಮಾ ಆಗಿರಲಿಲ್ಲ.

ಹೋರಾಟ, ಪ್ರತಿಭಟನೆ ಕೂಡ ನಡೆಸಿದ್ದ ರೈತರಿಗೆ ಕೇಂದ್ರ ಸರ್ಕಾರ ಆಸರೆಯಾಗಿ ನಿಂತ ಪರಿಣಾಮ 2025ರ ಏಪ್ರಿಲ್ ತಿಂಗಳಲ್ಲಿ ಷರತ್ತಿನನ್ವಯ ₹50 ಕೋಟಿಗೂ ಹೆಚ್ಚಿನ ಪರಿಹಾರ ಮೊತ್ತ ಬಿಡುಗಡೆ ಮಾಡಿತ್ತು. ಪ್ರಸ್ತುತ ಅದೇ ಮಳೆ ಮಾಪನ ಕೇಂದ್ರಗಳ ದುಸ್ಥಿತಿಯನ್ನು ಮುಂದಿಟ್ಟಿರುವ ವಿಮಾ ಕಂಪನಿಯು ಘಟಕಗಳ ದುರಸ್ತಿ ಆಗುವವರೆಗೂ ಯೋಜನೆಯಿಂದ ದೂರ ಉಳಿಯಲು ತೀರ್ಮಾನಿಸಿದೆ.

ADVERTISEMENT

‘ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (ಕೆಎಸ್ಎಂಡಿಎಂಸಿ) ಅಧೀನದಲ್ಲಿರುವ ಮಳೆ ಮಾಪನ ಘಟಕಗಳ ದುರಸ್ತಿಗೆ ಸಾಕಷ್ಟು ಒತ್ತಾಯ ಕೇಳಿ ಬಂದಿತ್ತು. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಭೀಮಣ್ಣ ನಾಯ್ಕ, ಶಿವರಾಮ ಹೆಬ್ಬಾರ ಆದಿಯಾಗಿ ರೈತ ಮುಖಂಡರು ಕೂಡ ಸರ್ಕಾರವನ್ನು ಆಗ್ರಹಿಸಿದ್ದರು. ಆದರೆ ಈವರೆಗೆ ಮಳೆ ಮಾಪನ ಕೇಂದ್ರಗಳ ದುರಸ್ತಿ ಗುತ್ತಿಗೆ ಪಡೆದ ಕಂಪನಿಯವರು ದುರಸ್ತಿ ಕಾರ್ಯ ಮಾತ್ರ ಮಾಡಿಲ್ಲ.

‘ಈ ನಡುವೆ ಪ್ರಸಕ್ತ ವರ್ಷ ಕೆಎಸ್ಎಂಡಿಎಂಸಿಯು ವಿಮಾ ಕಂಪನಿಗೆ ಮಳೆ ಮಾಪನ ಘಟಕಗಳ ಪಟ್ಟಿ ನೀಡಿ, ದುರಸ್ತಿಯಾಗದ ಕಡೆ ಪಕ್ಕದ ಪಂಚಾಯಿತಿ ವ್ಯಾಪ್ತಿಯ ಘಟಕಗಳನ್ನು ಪರಿಗಣಿಸುವಂತೆ ಕೋರಿದೆ. ಆದರೆ ಇದಕ್ಕೆ ವಿಮಾ ಕಂಪನಿ ಒಪ್ಪಿಗೆ ಸೂಚಿಸದ ಕಾರಣ ಪ್ರಸಕ್ತ ಸಾಲಿನ ಹವಾಮಾನಾಧಾರಿತ ಬೆಳೆ ವಿಮೆ ಯೋಜನೆ ಅಧಿಸೂಚನೆ ಹೊರಬಿದ್ದಿಲ್ಲ’ ಎಂಬುದು ತೋಟಗಾರಿಕಾ ಇಲಾಖೆ ಅಧಿಕಾರಿಯೊಬ್ಬರ ಮಾಹಿತಿಯಾಗಿದೆ.  

‘ಯೋಜನೆಯಡಿ ಅಧಿಸೂಚಿಸಲಾದ ಬೆಳೆಗಳಿಗೆ ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪಗಳಾದ ಆಲಿಕಲ್ಲು ಮಳೆ, ಭೂಕುಸಿತ ಮತ್ತು ಬೆಳೆ ಮುಳುಗಡೆ ಸಂದರ್ಭಗಳಲ್ಲಿ ಬೆಳೆ ನಷ್ಟವುಂಟಾದರೆ ವೈಯಕ್ತಿಕವಾಗಿ ನಷ್ಟವನ್ನು ನಿರ್ಧರಿಸಲು ವಿಮೆ ಮಾಡಿಸಿರುವ ರೈತರು ಈ ಬಗ್ಗೆ ಸಂಬಂಧಪಟ್ಟ ವಿಮಾ ಸಂಸ್ಥೆ ಕಚೇರಿಗಳಿಗೆ ವಿಮೆ ಮಾಡಿಸಿದ ಬೆಳೆಯ ವಿವರಗಳನ್ನು ಹಾನಿಯ ವ್ಯಾಪ್ತಿ ಹಾಗೂ ಹಾನಿಗೆ ಕಾರಣಗಳನ್ನು 72 ಗಂಟೆಗಳೊಳಗಾಗಿ ತಿಳಿಸಬೇಕು. ಆದರೆ ಆ ಸಂದರ್ಭದಲ್ಲಿ ಅಲ್ಲಿನ ಮಳೆ ಪ್ರಮಾಣ ಅಳೆಯಲು ಮಳೆ ಮಾಪನ ಕೇಂದ್ರಗಳು ಸರಿಯಾಗಿಲ್ಲ. ಜಿಲ್ಲೆಯ 81 ಕೇಂದ್ರಗಳು ಮಾಹಿತಿ ರವಾನಿಸುತ್ತಿಲ್ಲದ ಕಾರಣ ಸಮಸ್ಯೆ ಆಗಿದೆ’ ಎನ್ನುತ್ತಾರೆ ಅವರು. 

2025–26ನೇ ಸಾಲಿನ ಹವಾಮಾನಾಧಾರಿತ ಬೆಳೆ ವಿಮೆ ಯೋಜನೆ ಅನುಷ್ಠಾನದ ಬಗ್ಗೆ ಸರ್ಕಾರದಿಂದ ಅಧಿಸೂಚನೆ ಬಂದಿಲ್ಲ. ಶೀಘ್ರದಲ್ಲೇ ಅಧಿಸೂಚನೆ ಪ್ರಕಟವಾಗುವ ವಿಶ್ವಾಸವಿದೆ
ಬಿ.ಪಿ.ಸತೀಶ ತೋಟಗಾರಿಕಾ ಇಲಾಖೆ ಡಿಡಿ
ಮಳೆ, ಕೊಳೆ ಆರಂಭ:ಆತಂಕ
ಜಿಲ್ಲೆಯಾದ್ಯಂತ ಮೇ ತಿಂಗಳ ಆರಂಭದಿಂದಲೂ ಭಾರಿ ಮಳೆಯಾಗುತ್ತಿದೆ. ಮಳೆ ಹಾಗೂ ತೇವಾಂಶದ ಕಾರಣ ಅಡಿಕೆ ಫಸಲಿಗೆ ಅಲ್ಲಲ್ಲಿ ಕೊಳೆರೋಗ ಕಾಣಿಸಿಕೊಳ್ಳುತ್ತಿದೆ. ರೈತರಿಗೆ ಬೆಳೆ ವಿಮೆಯ ಸೌಲಭ್ಯ ಸಿಗಬೇಕೆಂದರೆ ವೈಜ್ಞಾನಿಕವಾಗಿ ಮಳೆ ಮಾಪನ ಪ್ರತಿದಿನ ಆಗಬೇಕಾಗಿರುತ್ತದೆ. ಒಂದೊಮ್ಮೆ ಸಮಯಕ್ಕೆ ಸರಿಯಾಗಿ ಜೂನ್-ಜುಲೈ ತಿಂಗಳಿನಲ್ಲಿ ವಿಮಾ ಕಂಪನಿಗಳಿಗೆ ಮಾಹಿತಿ ಸಿಗದಿದ್ದರೆ ರೈತರಿಗೆ ನಷ್ಟವಾಗುತ್ತದೆ. ಈಗಾಗಲೇ ಜುಲೈ  ತಿಂಗಳು ಆರಂಭವಾಗಿದ್ದು ವಿಪರೀತ ಮಳೆಯಾಗುತ್ತಿದೆ. ಜಿಲ್ಲೆಯಲ್ಲಿ ಈವರೆಗೆ ಸುರಿದಿರುವ ಮಳೆಯ ಮಾಹಿತಿಯು ರೈತರಿಗೆ ಸಮರ್ಪಕವಾಗಿ ತಿಳಿಯದೇ ಆತಂಕಕ್ಕೊಳಗಾಗಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.