ಶಿರಸಿ: ‘ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಕರಣವನ್ನು ಪರಿಷತ್ತಿನ ನೀತಿ ನಿರೂಪಣಾ ಸಮಿತಿಗೆ ನೀಡಲಾಗಿದೆ. ವಿಡಿಯೊ ಸೇರಿ ಇತರ ದಾಖಲೆ ಪರಿಶೀಲಿಸಿ ಸಮಿತಿಯು ವರದಿ ನೀಡಿದ ಬಳಿಕ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
‘ಪರಿಷತ್ ಉಪಸಭಾಪತಿಯವರು ಅಧ್ಯಕ್ಷರಾಗಿರುವ ಸದನದ ನೀತಿ ನಿರೂಪಣಾ ಸಮಿತಿಗೆ ಪ್ರಕರಣ ವಹಿಸಲಾಗಿದೆ. ಅದರಲ್ಲಿ ಸಿ.ಟಿ.ರವಿ ಕೂಡ ಸದಸ್ಯರಾಗಿದ್ದರು. ಅವರನ್ನು ಈಗ ಹೊರಗೆ ಇಡಲಾಗಿದೆ. ಸಮಿತಿಯವರು ಸದನದ ಆಡಿಯೊ, ವಿಡಿಯೊ ಪರಿಶೀಲಿಸುವರು. ಮಾಧ್ಯಮದವರೂ ವಿಡಿಯೊ ನೀಡಿದ್ದಾರೆ. ಅದನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿದೆ’ ಎಂದು ಅವರು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.
‘ನ್ಯಾಯಾಧೀಶರ ಸ್ಥಾನಕ್ಕೆ ಸಮ ಇರುವ ಸಭಾಪತಿಗಳು ಪಕ್ಷಪಾತ ಮಾಡಬಾರದು. ಸಿ.ಟಿ.ರವಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಪ್ರಕರಣದಲ್ಲಿ ನಾನು ತೆಗೆದುಕೊಂಡ ನಿರ್ಧಾರಕ್ಕೆ ಬಿಹಾರದ ವಿಧಾನಸಭೆಯಲ್ಲಿ ಶ್ಲಾಘನೆ ವ್ಯಕ್ತವಾಗಿದೆ. ನಿರ್ಧಾರವು ನೂರಕ್ಕೆ ನೂರರಷ್ಟು ಸರಿಯಿದೆ. ಯಾರೇ ಈ ನಿರ್ಧಾರ ತಪ್ಪು ಎಂದರೂ, ಅದು ಅವರ ಅಭಿಪ್ರಾಯ’ ಎಂದರು.
‘ಸಭಾಪತಿ ಎನ್ನುವುದು ಕಾಯಂ ಕುರ್ಚಿಯಲ್ಲ. ಸರ್ಕಾರಗಳು ಬದಲಾದಾಗ ಸಭಾಪತಿಗಳನ್ನು ಇಳಿಸುವುದು ಕೆಟ್ಟ ಸಂಪ್ರದಾಯ. ಅದು ನಮ್ಮ ರಾಜ್ಯದಲ್ಲಿ ರೂಢಿಯಲ್ಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.