
ಕಾರವಾರ: ಚುಮುಚುಮು ಚಳಿ, ಚಿಮುಕುತ್ತಿದ್ದ ಮಂಜಿನಿಂದ ಸಣ್ಣಗೆ ನಡುಗುತ್ತಿದ್ದ ಸಹಸ್ರಾರು ಪ್ರೇಕ್ಷಕರು ಒಮ್ಮೆಲೇ ಚಳಿ ಮರೆತು ಕರತಾಡನ ಮಾಡಲಾರಂಭಿಸಿದರು. ಮಯೂರ ವರ್ಮ ವೇದಿಕೆಯಲ್ಲಿ ‘ಗಣನಾಯಕಾಯ ಗಣದೈವತಾಯ..’ ಗೀತೆ ಮೊಳಗುತ್ತಿದ್ದಂತೆ ಪ್ರೇಕ್ಷಕರ ಉದ್ಘೋಷ ಮುಗಿಲು ಮುಟ್ಟಿತ್ತು.
ಕರಾವಳಿ ಉತ್ಸವ ಸಪ್ತಾಹದ ಮೊದಲ ದಿನ ಸಂಗೀತ ಕಾರ್ಯಕ್ರಮ ನೀಡಿದ ಬಾಲಿವುಡ್ ಗಾಯಕ ಶಂಕರ ಮಹಾದೇವನ್ ಎರಡು ತಾಸು ಸಂಗೀತ ಸುಧೆ ಹರಿಸಿದರು. ಸುಮಧುರ ಕಂಠಕ್ಕೆ ಮನಸೋತ ಜನರು ಚಳಿ ಮರೆತು ಕಾರ್ಯಕ್ರಮ ಮುಗಿಯುವವರೆಗೂ ಕುಳಿತರು.
ಗಣೇಶನ ಸ್ತುತಿಯೊಂದಿಗೆ ಕಾರ್ಯಕ್ರಮ ಆರಂಭಿಸಿದ ಬಳಿಕ ಶಿವನ ಆರಾಧಿಸುವ ಗೀತೆ ಹಾಡಿದ ಶಂಕರ ಬಳಿಕ ಒಂದೊಂದಾಗಿ ಕನ್ನಡ, ಹಿಂದಿ ಚಲನಚಿತ್ರಗೀತೆಗಳನ್ನು ಹಾಡುತ್ತ ಜನರನ್ನು ರಂಜಿಸಿದರು. ಅವರೊಂದಿಗೆ ತಂಡದ ಸಹಗಾಯಕರೂ ಜತೆಯಾದರು.
‘ಹಮ್ಮಾ ಹಮ್ಮಾ..’, ‘ಲಂಡನ್ ಟುಮಕದಾ...’, ‘ಮನ ಮಸ್ತ್ ಮಗನ್..’, ‘ಸುನೊ ಗೌರ್ ಸೆ ದುನಿಯಾ ವಾಲೊ ಹಮ್ ಹೆ ಹಿಂದೂಸ್ತಾನಿ...’ ಸೇರಿದಂತೆ 20ಕ್ಕೂ ಹಾಡುಗಳು ಜನರಿಗೆ ಭರಪೂರ ರಂಜನೆ ನೀಡಿದವು. ಕಾರ್ಯಕ್ರಮ ಮುಗಿಯುತ್ತಿದ್ದಂತೆ ಶಂಕರ ಮಹಾದೇವನ್ ಅವರಿಗೆ ಭಾರಿ ಗಾತ್ರದ ಹೂವಿನ ಮಾಲೆ ಹಾಕಿ ಸಂಭ್ರಮಿಸಲಾಯಿತು.
ಉತ್ಸವದ ಎರಡನೇ ದಿನವಾದ ಮಂಗಳವಾರ ಇಲ್ಲಿನ ಪ್ರಜಾಸೌಧದಲ್ಲಿ ಪ್ರವಾಸೋದ್ಯಮ ಇಲಾಖೆಯು ಆಯೋಜಿಸಿದ್ದ ಜಿಲ್ಲೆಯ ಪ್ರವಾಸಿ ತಾಣಗಳ ಛಾಯಾಚಿತ್ರ ಪ್ರದರ್ಶನ ಕಣ್ತುಂಬಿಕೊಳ್ಳಲು ಜನರ ಕೊರತೆ ಇತ್ತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾ ಪಂಚಾಯಿತಿ ಸಿಇಒ ಡಾ.ದಿಲೀಷ್ ಶಶಿ ಹಾಗೂ ಇತರ ಕೆಲ ಅಧಿಕಾರಿಗಳು ಮಾತ್ರವೇ ಛಾಯಾಚಿತ್ರಗಳನ್ನು ವೀಕ್ಷಿಸಿದರು. ‘ಉತ್ತರ ಕನ್ನಡ ಜಿಲ್ಲೆಯ ಕಲೆ ಸಂಸ್ಕೃತಿ ಪರಂಪರೆಯನ್ನು ಯುವ ಪೀಳಿಗೆಗೆ ಪರಿಚಯಿಸಬೇಕು. ಇದೇ ಉದ್ದೇಶದಿಂದ ಛಾಯಾಚಿತ್ರ ಹಾಗೂ ರೀಲ್ಸ್ ಪ್ರದರ್ಶನ ಮತ್ತು ಸ್ಪರ್ಧೆ ಆಯೋಜಿಸಲಾಗಿದೆ’ ಎಂದು ಡಾ.ದಿಲೀಷ್ ಶಶಿ ಹೇಳಿದರು. ಛಾಯಾಚಿತ್ರ ಮತ್ತು ರೀಲ್ಸ್ ವೀಕ್ಷಣೆಗೆ ಬುಧವಾರವೂ ಅವಕಾಶ ಕಲ್ಪಿಸಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕಿ ಮಂಗಳಗೌರಿ ಭಟ್ ತಿಳಿಸಿದರು.
* ರಂಗೋಲಿ ಸ್ಪರ್ಧೆ ಸಮಯ: ಬೆಳಿಗ್ಗೆ 10 ಸ್ಥಳ: ಪ್ರಜಾಸೌಧ ಆವರಣ * ಅಡುಗೆ ಸ್ಪರ್ಧೆ ಸಮಯ: ಬೆಳಿಗ್ಗೆ 10 ಸ್ಥಳ: ಮಾಲಾದೇವಿ ಮೈದಾನ * ಎ2 ಮ್ಯೂಸಿಕ್ ಸ್ಟಾರ್ ತಂಡದಿಂದ ಸಂಗೀತ ಕಾರ್ಯಕ್ರಮ ನಾಟ್ಯರಂಭ ನೃತ್ಯ ಸಂಸ್ಥೆಯ ಅಭಿಷೇಕ್ ನೇತ್ರೇಕರ ಅವರಿಂದ ನೃತ್ಯ ಕುಮಾರ ಮಹಾತ್ಮ ಜೈನ್ ಅವರಿಂದ ಪೌರಾಣಿಕ ಕತೆ ಚಿದಂಬರ ರಾಮಪ್ಪ ನಾಯ್ಕ ಅವರಿಂದ ಯಕ್ಷಗಾನ ಪ್ರದರ್ಶನ ಭಾವೈಕ್ಯತೆ ಡೊಳ್ಳಿನ ಪದ ತಂಡದ ಇಮಾಮಸಾಬ್ ವಲ್ಲಪ್ಪನವರ ಅವರಿಂದ ಡೊಳ್ಳಿನ ಪದ ಕಲ್ಪನಾ ರಶ್ಮಿ ಕಲಾಲೋಕ ತಂಡದಿಂದ ನೃತಯ ಸಮಯ: ಸಂಜೆ 5.30ರಿಂದ ಸ್ಥಳ: ಮಯೂರ ವರ್ಮ ವೇದಿಕೆ * ಬಾಲಿವುಡ್ ಗಾಯಕ ಸೋನು ನಿಗಮ್ ಅವರಿಂದ ಸಂಗೀತ ಕಾರ್ಯಕ್ರಮ ಸಮಯ: ರಾತ್ರಿ 10 ಸ್ಥಳ: ಮಯೂರ ವರ್ಮ ವೇದಿಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.