
ಕಾರವಾರ: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿಸಿ ಲಾಭ ಗಳಿಸಿಕೊಡುವುದಾಗಿ ನಂಬಿಸಿ ಅಪರಿಚಿತ ವ್ಯಕ್ತಿಗಳು ಶಿರಸಿಯ ವ್ಯಕ್ತಿಯೊಬ್ಬರಿಗೆ ₹2.29 ಕೋಟಿ ವಂಚಿಸಿದ್ದರು. ಬ್ಯಾಂಕ್ ಉದ್ಯೋಗದಿಂದ ಸಮಾಧಾನಕರ ಸಂಬಳ ಪಡೆಯುತ್ತಿದ್ದ ಕಾರವಾರದ ಪಾದ್ರಿಬಾಗದ ಯುವಕನೊಬ್ಬ, ಮನೆಯಲ್ಲೇ ಕುಳಿತು ಹಣ ಗಳಿಸುವ ಜಾಹೀರಾತನ್ನು ನಂಬಿ ₹30 ಲಕ್ಷ ಕಳೆದುಕೊಂಡಿದ್ದರು...
ಲಾಭದ ಆಸೆ, ಹಣ ಗಳಿಕೆಯ ಆತುರದಿಂದ ಈ ವ್ಯಕ್ತಿಗಳ ಮಾಡಿದ ತಪ್ಪು ‘ಕ್ಲಿಕ್’ ಅವರ ಬ್ಯಾಂಕ್ ಖಾತೆಯಲ್ಲಿದ್ದ ಉಳಿತಾಯದ ಹಣವನ್ನು ಕ್ಷಣಾರ್ಧದಲ್ಲಿ ಕರಗುವಂತೆ ಮಾಡಿತು. ಹೀಗೆ ವಂಚನೆಗೆ ಒಳಗಾದವರು ಅವಿದ್ಯಾವಂತರೇನಲ್ಲ. ಸ್ನಾತಕೋತ್ತರ ಪದವಿ ಪಡೆದು ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದವರು.
ಸೈಬರ್ ಅಪರಾಧ ತಡೆಗೆ ಒಂದೆಡೆ ಪೊಲೀಸರು ಜಾಗೃತಿ ಮೂಡಿಸುವುದು ಹೆಚ್ಚುತ್ತಿದ್ದರೂ, ವಂಚನೆಗೆ ಒಳಗಾಗುತ್ತಿರುವವರ ಸಂಖ್ಯೆಯೂ ಏರಿಕೆಯಾಗುತ್ತಿರುವುದು ಕಳವಳ ಸೃಷ್ಟಿಸಿದೆ. ವಂಚಕರ ಮೋಸದ ಬಲೆಗೆ ಬೀಳುತ್ತಿರುವವರಲ್ಲಿ ನಿವೃತ್ತ ಅಧಿಕಾರಿಗಳು, ಶಿಕ್ಷಕರು, ಬ್ಯಾಂಕ್ ನೌಕರರು, ಉದ್ಯಮಿಗಳು ಸೇರಿದಂತೆ ಓದು ಬರಹ ಬಲ್ಲವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಶಿರಸಿಯ ಮಾರಿಕಾಂಬಾ ಜಾತ್ರೆ ಆರಂಭದ ಹೊತ್ತಿನಲ್ಲೇ ನಕಲಿ ವೆಬ್‌ಸೈಟ್ ತೆರೆದಿದ್ದ ವಂಚಕರು, ದೇವಿಯ ಉಡಿ ಸೇವೆ ಹೆಸರಲ್ಲಿ ಹಣ ಸಂಗ್ರಹಿಸಲು ಯತ್ನಿಸಿದ್ದರು. ಇದನ್ನು ಗಮನಿಸಿದ್ದ ಪೊಲೀಸರು ನಕಲಿ ವೆಬ್‌ಸೈಟ್ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ತನ್ನ ಮನೆಗೆ ಚಿಮಣಿ ಅಳವಡಿಸಲು ಗೂಗಲ್ ಹುಡುಕಾಟದಲ್ಲಿ ಸಿಕ್ಕ ಸಂಖ್ಯೆಗೆ ಸಂಪರ್ಕಿಸಿ ಕೈಗಾದ ಅಣು ವಿದ್ಯುತ್ ನಿಗಮದ ನಿವೃತ್ತ ನೌಕರರೊಬ್ಬರು ₹10.95 ಲಕ್ಷ ಕಳೆದುಕೊಂಡಿದ್ದರು. ಕೈಗಾ ಟೌನ್‌ಶಿಪ್ ನಿವಾಸಿ ಬಸನಗೌಡ ನಾಗನೂರಿ ಇಂತಹ ವಂಚನೆಗೆ ಒಳಗಾಗಿದ್ದರು. ಖಾಸಗಿ ಕಂಪನಿಯೊಂದರ ಕಸ್ಟಮರ್ ಕೇರ್ ಎಂದು ನಂಬಿ ಗೂಗಲ್‌ನಲ್ಲಿ ಸಿಕ್ಕ ಸಂಖ್ಯೆಗೆ ಕರೆ ಮಾಡಿದ್ದ ಅವರು ವಂಚಕರು ಬೀಸಿದ ಬಲೆಗೆ ಸಿಲುಕಿದ್ದರು.
ಇನ್‌ಸ್ಟಾಗ್ರಾಮ್‍ನಲ್ಲಿ ಬಂದ ಜಾಹೀರಾತು ನಂಬಿ ಹಣ ಹೂಡಿಕೆ ಮಾಡಿದ್ದ ಕಾರವಾರದ ಯುವಕ ನಂದನಗದ್ದಾದ ಜೈನಾಬ್ ಮುಲ್ಲಾ ₹12.43 ಲಕ್ಷ ಕಳೆದುಕೊಂಡಿದ್ದರು. ರುಕ್ಸಾನಾ ಖಾನ್ ಹೆಸರಿನ ಖಾತೆಯೊಂದರಲ್ಲಿ ಆನ್‌ಲೈನ್ ಮೂಲಕ ಬಿಡುವಿನ ವೇಳೆಯಲ್ಲಿ ಕೆಲಸ ಮಾಡಿ ಹಣ ಗಳಿಸುವ ಜಾಹೀರಾತು ಗಮನಿಸಿ, ಜಾಹೀರಾತಿನಲ್ಲಿದ್ದ ಲಿಂಕ್ ಮೂಲಕ ವೆಬ್‌ಸೈಟ್‌ವೊಂದರ ಮೂಲಕ ಹಣ ಹೂಡಿಕೆ ಮಾಡಿ ಲಾಭ ಗಳಿಸುವ ಆಮಿಷ ತೋರಿಸಲಾಯಿತು. ಹಂತ ಹಂತವಾಗಿ ಹಣ ಹೂಡಿಕೆ ಮಾಡಿಸಿಕೊಂಡು, ಹಣ ಲಪಟಾಯಿಸಿದರು ಎಂದು ಅವರು ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
‘ಮನೆಯಲ್ಲೇ ಕುಳಿತು ಹಣ ಸಂಪಾದಿಸಿ’ ಎಂಬ ಸಾಮಾಜಿಕ ಜಾಲತಾಣದಲ್ಲಿ ಬಂದ ಜಾಹಿರಾತು ನಂಬಿ ಯಲ್ಲಾಪುರ ಪಟ್ಟಣದ ಕೆ.ಆರ್.ಸುಹಾಸ್ ಎಂಬ ಯುವಕ ₹29.13 ಲಕ್ಷ ಕಳೆದುಕೊಂಡಿದ್ದರು. ಸಾಮಾಜಿಕ ಜಾಲತಾಣವೊಂದರಲ್ಲಿ ಮನೆಯಿಂದಲೇ ಹಣ ಸಂಪಾದಿಸುವ ಉದ್ಯೋಗವಿದೆ ಎಂಬುದನ್ನು ನಂಬಿ ಕೆಲಸ ಆರಂಭಿಸಿದ್ದರು. ವಿವಿಧ ಕಂಪನಿಗಳ ಉತ್ಪನ್ನಗಳಿಗೆ ರಿವ್ಯೂ ನೀಡುವ ಕೆಲಸ ಮಾಡಿದ್ದ ಅವರಿಗೆ ಆರಂಭದಲ್ಲಿ ಅಲ್ಪ ಮೊತ್ತದ ಹಣವನ್ನು ವಂಚಕರು ಪಾವತಿಸಿದ್ದರು. ಹೆಚ್ಚಿನ ಹಣ ಹೂಡಿಕೆ ಮಾಡಿದರೆ ಅಧಿಕ ಲಾಭ ಗಳಿಸುವ ಆಮಿಷ ಒಡ್ಡಿದ್ದರು. ಇದನ್ನು ನಂಬಿ ದೊಡ್ಡ ಮೊತ್ತ ಹೂಡಿಕೆ ಮಾಡಿದ್ದು ಸುಹಾಸ್ ದೊಡ್ಡ ಮೊತ್ತದ ಹಣ ಕಳೆದುಕೊಳ್ಳುವಂತಾಯಿತು.
‘ಸೈಬರ್ ವಂಚನೆಗೆ ವಂಚಕರು ಹಲವು ದಾರಿ ಕಂಡುಕೊಳ್ಳುತ್ತಿದ್ದಾರೆ. ಉದ್ಯೋಗದ ಭರವಸೆ, ಮದುವೆಗೆ ವಧು–ವರರನ್ನು ಹೊಂದಿಸಿಕೊಡುವ ನೆಪದಲ್ಲಿ ಹಣ ವಂಚಿಸುತ್ತಿದ್ದಾರೆ. ಷೇರು ಮಾರುಕಟ್ಟೆ ವ್ಯವಹಾರ ಈಚೆಗೆ ಹೆಚ್ಚಿದ್ದು, ಅದು ಕೂಡ ವಂಚಕರಿಗೆ ಬಂಡವಾಳ ಎನಿಸಿದೆ. ಅಲ್ಲದೆ, ಗೂಗಲ್‌ನಲ್ಲಿ ಖ್ಯಾತ ಕಂಪನಿಗಳ ಕಸ್ಟಮರ್ ಕೇರ್‌ಗೆ ತಮ್ಮ ಸಂಪರ್ಕ ಸಂಖ್ಯೆ ಜೋಡಿಸಿಕೊಂಡು ವಂಚನೆ ನಡೆಸುವ ಕೃತ್ಯಗಳು ಹೆಚ್ಚುತ್ತಿವೆ’ ಎನ್ನುತ್ತಾರೆ ಸಿಇಎನ್ ವಿಭಾಗದ ಪೊಲೀಸ್ ಅಧಿಕಾರಿಗಳು.
‘ಅಪರಾಧಿಗಳ ಪತ್ತೆಯೂ ಕಷ್ಟ’
‘ಸೈಬರ್ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳ ಪತ್ತೆ ಸುಲಭ ಇಲ್ಲ. ಹೊನ್ನಾವರದ ಉದ್ಯಮಿಯೊಬ್ಬರಿಗೆ ವಂಚನೆ ಎಸಗಿದ ಬಿಹಾರ ಮೂಲಕ ಷಾ ಆಲಂ ಎಂಬುವನನ್ನು ಬಂಧಿಸಿದಾಗ ಆತ ವಿದೇಶದಲ್ಲಿ ಚೀನಾದ ಅಪರಾಧಿಗಳ ಗುಲಾಮನಾಗಿ ಅಪರಾಧ ಕೃತ್ಯ ನಡೆಸಿದ್ದು ಬೆಳಕಿಗೆ ಬಂದಿತ್ತು’ ಎನ್ನುತ್ತಾರೆ ಸಿಇಎನ್ ಪೊಲೀಸ್ ವಿಭಾಗದ ಹಿರಿಯ ಅಧಿಕಾರಿಯೊಬ್ಬರು.
‘ಆರೋಪಿಯು ಸೈಬರ್ ಅಪರಾಧ ಕೃತ್ಯಕ್ಕಾಗಿ ಬಿಹಾರದಿಂದ ಕಳೆದ ಏ.29ರಂದು ಕಾಂಬೋಡಿಯಾ ದೇಶಕ್ಕೆ ತೆರಳಿದ್ದ. ಅಲ್ಲಿ ಚೀನಾ ದೇಶದ ಕೆಲವರೊಂದಿಗೆ ಸೇರಿಕೊಂಡು ಸೈಬರ್ ವಂಚನೆಯ ಕೃತ್ಯ ಆರಂಭಿಸಿದ್ದ. ತನಿಖೆ ವೇಳೆ ಈತನ ಬಳಿ ಕಾಂಬೋಡಿಯಾ ದೇಶದ ಪಾಸ್‌ಪೋರ್ಟ್ ಅಲ್ಲಿನ ಬ್ಯಾಂಕ್‍ಗಳಲ್ಲಿ ಖಾತೆ ಹೊಂದಿರುವ ದಾಖಲೆಗಳು ಸಿಕ್ಕಿದ್ದವು’ ಎಂದರು.
‘ಸೈಬರ್ ಪ್ರಕರಣಗಳಲ್ಲಿ ನಷ್ಟವಾದ ಹಣ ಮರಳಿ ಪಡೆಯುವುದು ಸವಾಲಿನ ಕೆಲಸ. ವಂಚಕರು ದೂರದ ರಾಜ್ಯಗಳಲ್ಲಿ ಅಥವಾ ವಿದೇಶಗಳಲ್ಲಿ ಕುಳಿತು ಅಪರಾಧ ಎಸಗುತ್ತಾರೆ. ತಾಂತ್ರಿಕ ನೈಪುಣ್ಯತೆಯಿಂದ ಬ್ಯಾಂಕ್ ಖಾತೆಯ ಹಣ ಲಪಟಾಯಿಸುತ್ತಾರೆ. ಆ ಹಣವನ್ನು ಜಾರ್ಖಂಡ್ ಬಿಹಾರ ಛತ್ತೀಸಗಡ ಭಾಗದ ಕುಗ್ರಾಮಗಳ ಜನರ ಹೆಸರಿನಲ್ಲಿ ತೆರೆದ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡು ಬಳಿಕ ತಾವು ಪಡೆಯುತ್ತಾರೆ. ಇಂತಹ ಹತ್ತಾರು ಘಟನೆಗಳು ತನಿಖೆ ವೇಳೆ ಹೊರಬಿದ್ದಿವೆ’ ಎಂದು ವಿವರಿಸಿದರು.
‘ಮುನ್ನೆಚ್ಚರಿಕೆಯೇ ಮದ್ದು’
‘ಸೈಬರ್ ಅಪರಾಧ ಪ್ರಕರಣಗಳಿಗೆ ಬಲಿಯಾಗದಂತೆ ಎಚ್ಚರಿಕೆ ವಹಿಸುವುದೇ ಹೆಚ್ಚು ಅನುಕೂಲ. ಅಪರಿಚಿತರ ಕರೆಗಳಿಗೆ ಹೆಚ್ಚು ಸ್ಪಂದಿಸಬಾರದು. ನಕಲಿ ಲಿಂಕ್‌ಗಳನ್ನು ಓಪನ್ ಮಾಡಬಾರದು. ಸಾಮಾಜಿಕ ಮಾಧ್ಯಮಗಳಲ್ಲಿ ವೈಯಕ್ತಿಕ ವಿವರ ಚಿತ್ರಗಳನ್ನು ಪೋಸ್ಟ್ ಮಾಡಬಾರದು. ಮೊಬೈಲ್ ಎಟಿಎಂ ಕಾರ್ಡ್ ಸಾಮಾಜಿಕ ಜಾಲತಾಣಗಳ ಖಾತೆಗಳ ಪಾಸ್‌ವರ್ಡ್‌ಗಳನ್ನು ಆಗಾಗ ಬದಲಿಸುತ್ತಿರಬೇಕು. ಅವುಗಳು ಬೇರೆಯವರಿಗೆ ಸುಲಭವಾಗಿ ತಿಳಿಯುವಂತೆ ಇರಬಾರದು’ ಎನ್ನುತ್ತಾರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್.
‘ಸೈಬರ್ ಅಪರಾಧದ ಬಗ್ಗೆ ಜಿಲ್ಲೆಯಾದ್ಯಂತ ಪರಿಣಾಮಕಾರಿ ಜಾಗೃತಿ ಮೂಡಿಸುತ್ತಿದ್ದೇವೆ. ಈ ಅಪರಾಧಕ್ಕೆ ತುತ್ತಾಗವ ಯುವ ಜನರನ್ನು ಗುರಿಯಾಗಿಸಿಕೊಂಡು ತಿಳಿವಳಿಕೆ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಶಾಲೆ ಕಾಲೇಜುಗಳಲ್ಲಿ ನಿರಂತರವಾಗಿ ಅರಿವು ಮೂಡಿಸುವ ಕೆಲಸ ನಡೆಸಿದ್ದೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.