
ಮುಂಡಗೋಡ: ಟಿಬೆಟಿಯನ್ ಧಾರ್ಮಿಕ ನಾಯಕ ದಲೈಲಾಮಾ ಅವರ ಜೀವನವೇ ಒಂದು ಸಂದೇಶವಾಗಿದ್ದು, ಯುವಸಮೂಹಕ್ಕೆ ಅವರ ಸಂದೇಶಗಳು ನಿಜಕ್ಕೂ ಪ್ರೇರಣೆ ಆಗುತ್ತವೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ ಹೇಳಿದರು.
ತಾಲ್ಲೂಕಿನ ಟಿಬೆಟಿಯನ್ ಕ್ಯಾಂಪ್ ನಂ.6ರ ಡ್ರೆಪುಂಗ್ ಲೋಸಲಿಂಗ್ ಬೌದ್ಧ ಮಂದಿರದಲ್ಲಿ ದಲೈಲಾಮಾ ಅವರನ್ನು ಸೋಮವಾರ ಭೇಟಿಯಾಗಿ, ಅವರ ಆಶೀರ್ವಾದ ಪಡೆದ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.
90ನೇ ವಯಸ್ಸಿನಲ್ಲಿಯೂ ಪ್ರತಿದಿನ ನೂರಾರು ಜನರಿಗೆ ಆಶೀರ್ವಚನ ನೀಡುವುದು, ಮಾತನಾಡಿಸುವುದು, ನಗುಮೊಗದಿಂದಲೇ ಎಲ್ಲರಿಗೂ ಒಳಿತನ್ನು ಬಯಸುವ ದಲೈಲಾಮಾ ಅವರ ಆರೋಗ್ಯದ ಬಗ್ಗೆ ನಿಜಕ್ಕೂ ಹೆಮ್ಮೆ ಆಗುತ್ತದೆ. ಭವಿಷ್ಯದ ಪೀಳಿಗೆಯು ದಲೈಲಾಮಾ ಅವರ ಜೀವನವನ್ನು ಓದುವಂತಾಗಬೇಕು. ವಿಶ್ವಶಾಂತಿಗಾಗಿ ನಿರಂತರವಾಗಿ ಕೆಲಸ ಮಾಡುತ್ತಿರುವ ದಲೈಲಾಮಾ ಅವರು ವಿಶ್ವದಾದ್ಯಂತ ಅನುಯಾಯಿಗಳನ್ನು ಹೊಂದಿರುವಂತ ಮಹಾನ್ ವ್ಯಕ್ತಿಯಾಗಿದ್ದಾರೆ ಎಂದರು.
ವಿಶ್ವಶಾಂತಿಗಾಗಿ ಜ.25ರಂದು ಪಟ್ಟಣದಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಅದರಲ್ಲಿ ಪಾಲ್ಗೊಳ್ಳಲು ದಲೈಲಾಮಾ ಅವರಿಗೆ ಆಹ್ವಾನ ನೀಡಿದೆ. ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ವಿಶ್ವಾಸವಿದೆ. ಈ ಹಿಂದೆ ಬೆಂಗಳೂರಿನಲ್ಲಿ ದಲೈಲಾಮಾ ಅವರನ್ನು ಭೇಟಿಯಾಗಿದ್ದೆ. ಆದರೆ, ಈ ಸಲದ ಭೇಟಿ ಹೆಚ್ಚು ಸಂತಸವನ್ನುಂಟು ಮಾಡಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.