ADVERTISEMENT

ಮುಂಡಗೋಡ | ಟಿಬೆಟಿಯನ್‌ ಕ್ಯಾಂಪ್‌ಗೆ ದಲೈಲಾಮಾ: ರೋಮಾಂಚನಗೊಳಿಸಿದ ಶಾಂತಿದೂತನ ಆಗಮನ

ರಸ್ತೆಯ ಇಕ್ಕೆಲಗಳಲ್ಲಿ ನಿಂತು ಸ್ವಾಗತಿಸಿದ ಟಿಬೆಟಿಯನ್ನರು: ಹಬ್ಬದ ವಾತಾವರಣ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 4:59 IST
Last Updated 13 ಡಿಸೆಂಬರ್ 2025, 4:59 IST
ದಲೈಲಾಮಾ ಅವರನ್ನು ಸ್ವಾಗತಿಸಲು ಡ್ರೆಪುಂಗ್‌ ತಾಶಿ ಗೋಮಾಂಗ್‌ ಡಿಬೆಟ್‌ ಹಾಲ್‌ನ ಆವರಣದಲ್ಲಿ ನಿಂತಿದ್ದ ಬಿಕ್ಕುಗಳು
ದಲೈಲಾಮಾ ಅವರನ್ನು ಸ್ವಾಗತಿಸಲು ಡ್ರೆಪುಂಗ್‌ ತಾಶಿ ಗೋಮಾಂಗ್‌ ಡಿಬೆಟ್‌ ಹಾಲ್‌ನ ಆವರಣದಲ್ಲಿ ನಿಂತಿದ್ದ ಬಿಕ್ಕುಗಳು   

ಮುಂಡಗೋಡ: ಟಿಬೆಟಿಯನ್ ಧಾರ್ಮಿಕ ನಾಯಕ 14ನೇ ದಲೈಲಾಮಾ ಶುಕ್ರವಾರ ತಾಲ್ಲೂಕಿನ ಟಿಬೆಟಿಯನ್‌ ಕ್ಯಾಂಪ್‌ಗೆ 45 ದಿನಗಳ ಪ್ರವಾಸಕ್ಕಾಗಿ ಆಗಮಿಸಿದರು. ಅವರನ್ನು ಸ್ವಾಗತಿಸಲು ಇಡೀ ನಿರಾಶ್ರಿತರ ನೆಲೆಯ ಜನರೇ ದಾರಿಯುದ್ದಕ್ಕೂ ಬಂದು ನಿಂತಿದ್ದರು.

ನೆಲೆ ಕಳೆದುಕೊಂಡವರ ಸ್ಫೂರ್ತಿದಾಯಕ, ಮಾರ್ಗದರ್ಶಕ ಹಾಗೂ ಧಾರ್ಮಿಕ ನಾಯಕನಾಗಿರುವ ದಲೈಲಾಮಾ ಅವರನ್ನು ಕಣ್ತುಂಬಿಕೊಳ್ಳಲು, ಟಿಬೆಟಿನ್‌ರು ಬೆಳಿಗ್ಗೆಯಿಂದಲೇ ತಂಡೋಪತಂಡವಾಗಿ ನಿಂತಿರುವ ದೃಶ್ಯ ಕಂಡುಬಂತು. ಕ್ಯಾಂಪ್‌ನಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ನಡೆದಾಡಲು ಆಗದವರು ಗಾಲಿಕುರ್ಚಿಯಲ್ಲಿ, ಇನ್ನೂ ಕೆಲವರು ಊರುಗೋಲಿನ ಸಹಾಯದಿಂದ ಬಂದು ಗಂಟೆಗಟ್ಟಲೇ ಕಾಯುತ್ತ ಕುಳಿತಿದ್ದರು. ಮಕ್ಕಳಿಂದ ಹಿಡಿದು ವೃದ್ಧರವರೆಗೂ ರಸ್ತೆ ಇಕ್ಕೆಲಗಳಲ್ಲಿ ನಿಂತಿದ್ದರು.

ಕೈಯಲ್ಲಿ ಧೂಪ, ಬಣ್ಣ ಬಣ್ಣದ ಹೂಗುಚ್ಛ, ಬಿಳಿ ರುಮಾಲುಗಳೊಂದಿಗೆ ಸಾಂಪ್ರದಾಯಿಕ ವೇಷಭೂಷಣ ತೊಟ್ಟು, ಶಾಂತಿದೂತನ ಸ್ವಾಗತಕ್ಕಾಗಿ, ಧರ್ಮಗುರುವಿನ ದರ್ಶನಕ್ಕಾಗಿ ಅವರೆಲ್ಲರೂ ಬಿಸಿಲು ಲೆಕ್ಕಿಸದೇ ನಿಂತಿದ್ದರು.

ADVERTISEMENT

ಬೆಂಗಳೂರು, ಧರ್ಮಶಾಲಾದಿಂದ ಆಗಮಿಸಿದ್ದ ಟಿಬೆಟಿಯನ್‌ ಕಚೇರಿಯ ಪ್ರತಿನಿಧಿಗಳು, ಆಯಕಟ್ಟಿನ ಜಾಗದಲ್ಲಿ ನಿಂತು, ಸ್ಥಳೀಯ ಟಿಬೆಟಿಯನ್‌ರಿಗೆ ಸಲಹೆ, ಸೂಚನೆ ನೀಡುತ್ತಿದ್ದರು. ನಿಗದಿತ ಗೆರೆ ದಾಟಿ ಯಾರೂ ಮುಂದೆ ಬರದಂತೆ, ಟಿಬೆಟನ್‌ ಮುಖಂಡರು, ಸ್ವಯಂ ಸೇವಕರು ಆಗಾಗ ಹೇಳುತ್ತ, ಗೊಂದಲಕ್ಕೆ ಅವಕಾಶ ನೀಡದಂತೆ ಕಾರ್ಯನಿರ್ವಹಿಸುತ್ತಿದ್ದರು. ಟಿಬೆಟಿಯನ್‌ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳು, ಟಿಬೆಟಿಯನ್‌ ಮಹಿಳಾ ಅಸೋಸಿಯೇಷನ್‌ ಪ್ರತಿನಿಧಿಗಳು, ಡೊಗುಲಿಂಗ್‌ ಸೆಟ್ಲಮೆಂಟ್‌ ಕಚೇರಿಯ ಪ್ರತಿನಿಧಿಗಳು, ಬೌದ್ಧ ಮಂದಿರಗಳ ಮುಖಂಡರು ನಿಗದಿತ ಸ್ಥಳಗಳಲ್ಲಿ ನಿಂತುಕೊಂಡು, ದಲೈಲಾಮಾ ಅವರನ್ನು ಸ್ವಾಗತಿಸಿದರು.

ಆರು ವರ್ಷಗಳ ನಂತರ ಆಗಮಿಸಿದ ದಲೈಲಾಮಾ ಅವರನ್ನು ಕಂಡು ಬಿಕ್ಕುಗಳು ಭಾವುಕರಾದರು. ಹಿರಿಯ ಬಿಕ್ಕುಗಳು ದಲೈಲಾಮಾ ಅವರನ್ನು ಕೈ ಹಿಡಿದು ಬೌದ್ಧ ಮಂದಿರದ ಪೀಠದತ್ತ ಕರೆದುಕೊಂಡು ಹೋದರು. ವಿಶಾಲವಾದ ಬೌದ್ಧ ಮಂದಿರದ ಒಳಗೆ ಧಾರ್ಮಿಕ ನಾಯಕನನ್ನು ಬಿಕ್ಕುಗಳು ಧನ್ಯತಾಭಾವದಿಂದ ಕಣ್ತುಂಬಿಕೊಂಡರು. ಕೆಲ ಹೊತ್ತು ಸಾಂಪ್ರದಾಯಿಕ ಪೂಜೆ, ಪ್ರಾರ್ಥನೆ ನಡೆಯಿತು. ನಂತರ, ದಲೈಲಾಮಾ ನೆರೆದ ಬಿಕ್ಕುಗಳತ್ತ ಕೈಬೀಸಿದರು.

‘ದಲೈಲಾಮಾ ಅವರು ತಾಲ್ಲೂಕಿನ ಟಿಬೆಟಿಯನ್‌ ಕ್ಯಾಂಪ್‌ಗೆ ಆಗಮಿಸಿರುವುದರಿಂದ ಖುಷಿಯಾಗಿದೆ. ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳು ಇಲ್ಲ. ಆದರೆ, ಕೆಲವೊಂದು ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ದಲೈಲಾಮಾ ಅವರ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತೇವೆ’ ಎಂದು ಬೌದ್ಧ ಮುಖಂಡ ಜಂಪಾ ಲೋಬ್ಸಂಗ್‌ ಹೇಳಿದರು.

ಜಿಲ್ಲಾಡಳಿತದಿಂದ ಸ್ವಾಗತ: ಟಿಬೆಟನ್‌ ಧಾರ್ಮಿಕ ನಾಯಕ ದಲೈಲಾಮಾ ಅವರನ್ನು ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯ ಕೆ. ಸ್ವಾಗತಿಸಿದರು. ಪ್ರತಿ ಬಾರಿ ತಾಲ್ಲೂಕಿಗೆ ದಲೈಲಾಮಾ ಆಗಮಿಸುವಾಗ, ಗಡಿಭಾಗದ ವಡಗಟ್ಟಾ ಚೆಕ್‌ಪೋಸ್ಟ್‌ನಲ್ಲಿ ಜಿಲ್ಲಾಡಳಿತದಿಂದ ಸ್ವಾಗತಿಸಲಾಗುತ್ತಿತ್ತು. ಆದರೆ, ಇದೇ ಮೊದಲ ಸಲ, ಟಿಬೆಟಿಯನ್ ಕ್ಯಾಂಪ್‌ನ ಬೌದ್ಧ ಮಂದಿರದಲ್ಲಿಯೇ ಸ್ವಾಗತಿಸಲಾಯಿತು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ದಿಲಿಶ್‌ ಸಸಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದೀಪನ್‌ ಎಂ.ಎನ್‌., ಶಿರಸಿ ಉಪವಿಭಾಗಾಧಿಕಾರಿ ಕಾವ್ಯಾರಾಣಿ ಕೆ.ವಿ., ತಹಶೀಲ್ದಾರ್‌ ಶಂಕರ ಗೌಡಿ, ತಾಲ್ಲೂಕು ಪಂಚಾಯಿತಿ ಇಒ ಟಿ.ವೈ.ದಾಸನಕೊಪ್ಪ ಇದ್ದರು.

ಕಾರಿನಲ್ಲಿ ಕುಳಿತುಕೊಂಡು ತೆರೆಯದ ಕಿಟಕಿಯಿಂದ ಕೈಮುಗಿದ ದಲೈಲಾಮಾ

ಭಿಗಿ ಭದ್ರತೆಯಲ್ಲಿ ಪ್ರವೇಶ

ಇಲ್ಲಿನ ಕ್ಯಾಂಪ್‌ಗೆ ಆಗಮಿಸಿದ ದಲೈಲಾಮಾ ಅವರನ್ನು ಕಂಡು ನೆರೆದವರು ಕೈಮುಗಿದು ನಮಿಸಿದರು. ಟಿಬೆಟನ್‌ ಕ್ಯಾಂಪ್‌ನ ಒಳಗಡೆ ದಲೈಲಾಮಾ ಕಾರು ಪ್ರವೇಶಿಸುತ್ತಿದ್ದಂತೆ ವೇಗದಲ್ಲಿಯೂ ಕಡಿಮೆಯಾಯಿತು. ಭದ್ರತೆ ದೃಷ್ಟಿಯಿಂದ ದಲೈಲಾಮಾ ಇದ್ದ ಕಾರಿನ ಕಿಟಕಿಯ ಗಾಜನ್ನೂ ತೆರೆದಿರಲಿಲ್ಲ. ತೆರೆಯದ ಕಿಟಕಿಯಿಂದಲೇ ಎರಡೂ ಕೈಗಳಿಂದ ನೆರೆದವರಿಗೆ ಆಶೀರ್ವಾದ ನೀಡುತ್ತ ದಲೈಲಾಮಾ ಮಂದಹಾಸದೊಂದಿಗೆ ಮುಂದೆ ಸಾಗಿದರು. ಕ್ಯಾಂಪ್‌ ನಂ.1ರಿಂದ ಲಾಮಾ ಕ್ಯಾಂಪ್‌ ನಂ.2ರವರೆಗೆ 25ಕ್ಕೂ ಹೆಚ್ಚು ವಾಹನಗಳ ಬೆಂಗಾವಲಿನೊಂದಿಗೆ ಅತ್ಯಂತ ಬಿಗಿ ಭದ್ರತೆಯಲ್ಲಿ ಸಾಗಿದ ದಲೈಲಾಮಾ ಕಾರು ಕ್ಯಾಂಪ್‌ ನಂ.2ರ ಡ್ರೆಪುಂಗ್‌ ತಾಶಿ ಗೋಮಾಂಗ್‌ ಡಿಬೆಟ್‌ ಹಾಲ್‌ ಒಳಗಡೆ ತಲುಪಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.