ADVERTISEMENT

ದಾಂಡೇಲಿ | ಹಾರ್ನ್‍ಬಿಲ್ ಹಬ್ಬ ಜ.16, 17ಕ್ಕೆ: ಎಸಿಎಫ್ ಸಂತೋಷ ಚೌಹಾಣ್ ಮಾಹಿತಿ

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 8:15 IST
Last Updated 4 ಜನವರಿ 2026, 8:15 IST
ದಾಂಡೇಲಿಯ ಹಾರ್ನ್ ಬಿಲ್ ಸಭಾಂಗಣದಲ್ಲಿ ಹಾರ್ನ್ ಬಿಲ್ ಹಬ್ಬದ ಪೂರ್ವಭಾವಿ ಸಭೆ ಶನಿವಾರ ನಡೆಯಿತು
ದಾಂಡೇಲಿಯ ಹಾರ್ನ್ ಬಿಲ್ ಸಭಾಂಗಣದಲ್ಲಿ ಹಾರ್ನ್ ಬಿಲ್ ಹಬ್ಬದ ಪೂರ್ವಭಾವಿ ಸಭೆ ಶನಿವಾರ ನಡೆಯಿತು   

ದಾಂಡೇಲಿ: ನಗರದ ಹಾರ್ನ್‍ಬಿಲ್ ಭವನದಲ್ಲಿ ಜ.16 ಮತ್ತು 17 ರಂದು ಹಾರ್ನ್‍ಬಿಲ್ ಹಬ್ಬ ನಡೆಯಲಿದ್ದು ದೇಶ ಹಾಗೂ ರಾಜ್ಯದ ಪಕ್ಷಿ ಪ್ರಿಯರು ಈ ಹಬ್ಬದಲ್ಲಿ ಭಾಗವಹಿಸಲಿದ್ದಾರೆ ಎಂದು ದಾಂಡೇಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಚೌಹಾಣ್ ತಿಳಿದರು.

ನಗರದ ಹಾರ್ನ್‍ಬಿಲ್ ಸಭಾಂಗಣದಲ್ಲಿ ಶನಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ಎರಡು ದಿನಗಳ ಕಾಲ ನಡೆಯುವ ಈ ಹಬ್ಬವನ್ನು 16ರ ಬೆಳಿಗ್ಗೆ 8 ಗಂಟೆಗೆ ನಗರಸಭೆ ಆವರಣದಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳೊಂದಿಗೆ ಡಮಾಮಿ ನೃತ್ಯ, ಡೊಳ್ಳು ಕುಣಿತ, ಕಂಸಾಳೆ ಹಾಗೂ ವಿವಿಧ ಕಲಾ ತಂಡಗಳು ಹಾರ್ನ್ ಬಿಲ್ ಜಾಗೃತಿ ಜಾಥಾ ಮೆರವಣಿಗೆ ನಡೆಯಲಿದೆ’ ಎಂದರು.

‘ಹಾರ್ನ್‍ಬಿಲ್ ಭವನದಲ್ಲಿ ಕಾರ್ಯಕ್ರಮ ಉದ್ಘಾಟನೆ ನಡೆಯಲಿದೆ. ಅನಂತರ ಅದೇ ವೇದಿಕೆಯಲ್ಲಿ ಹಾರ್ನ್‍ಬಿಲ್ ಜೀವನ ಕ್ರಮ ಹಾಗೂ ಸಂತತಿ ರಕ್ಷಣೆ ಕುರಿತಂತೆ 5 ವಿಭಾಗದಲ್ಲಿ ತಾಂತ್ರಿಕ ಗೋಷ್ಠಿಗಳು ನಡೆಯಲಿವೆ‌. ಶಾಲಾ ಮಕ್ಕಳಿಗೆ ಹಾರ್ನ್‍ಬಿಲ್ ಪಕ್ಷಿ ಜಾಗೃತಿಗಾಗಿ ಚಿತ್ರಕಲಾ, ನಿಬಂಧ, ರಸ ಪ್ರಶ್ನೆ, ಕ್ಲೇ ಮಾಡೆಲ್ ಸ್ಪರ್ಧೆ ಹಮ್ಮಿಕೊಳ್ಳಲಾಗುತ್ತಿದೆ. ಸಂಜೆ ಪಕ್ಷಿ ತಜ್ಞರೊಂದಿಗೆ ಪಕ್ಷಿ ವೀಕ್ಷಣೆ ಹಾಗೂ ಕ್ಷೇತ್ರ ಕಾರ್ಯ ಚಟುವಟಿಕೆಗಳು ಹಾಗೂ ಸಫಾರಿ ನಡೆಯಲಿದೆ. ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದರು.

ADVERTISEMENT

‘17 ರಂದು ತಾಂತ್ರಿಕ ವಿಭಾಗದ ಎರಡು ಗೋಷ್ಠಿಗಳು ಹಾಗೂ ಹಾರ್ನ್‍ಬಿಲ್ ವಿಶೇಷ ಚರ್ಚಾ ಕಾರ್ಯಕ್ರಮ ಹಾಗೂ ಸಮಾರೋಪ ನಡೆಯಲಿದೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪರಿಣತರು ಹಾರ್ನಬಿಲ್ ಕುರಿತು ಏರ್ಪಡಿಸಲಾಗುವ ವಿಚಾರ ಸಂಕೀರಣದಲ್ಲಿ ಭಾಗವಹಿಸಿ ವಿಚಾರ ಮಂಡಿಸಿ, ಪಕ್ಷಿ ಸಂರಕ್ಷಣೆ ಹಾಗೂ ಸಂತತಿ ಬೆಳವಣಿಗೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಿದ್ದಾರೆ’ ಎಂದರು.

ಮೋಹನ್ ಹಲವಾಯಿ, ಕೀರ್ತಿ ಗಾಂವಕರ, ರಾಜೇಶ ತಿವಾರಿ, ಪ್ರವಾಸೋದ್ಯಮ ಮಿಲಿಂದ್ ಕೋಡ್ಕಣಿ, ಅನಿಲ್ ದಂಡಗಲ್ ನರಸಿಂಹ ಜಾಮಖಂಡಿ, ರಾಹುಲ್ ಬಾಬಾಜಿ ಅಭಿಪ್ರಾಯಗಳನ್ನು ಹಂಚಿಕೊಂಡರು.

ದಾಂಡೇಲಿ ತಹಶೀಲ್ದಾರ್ ಶೈಲೇಶ್ ಪರಮಾನಂದ, ಜೊಯಿಡಾ ತಹಶೀಲ್ದಾರ್ ಮಂಜುನಾಥ ಮುನ್ನವಳ್ಳಿ, ಟಿಂಬರ್ ಡಿಪೋ ಎಸಿಎಫ್ ಸಂತೋಷ್ ಹುಬ್ಬಳ್ಳಿ, ಆರ್‌ಎಫ್‌ಒ ನದಾಫ್ ಪ್ರವೀಣ ಚಲವಾದಿ ಪಾಲ್ಗೊಂಡಿದ್ದರು.

ಹಾರ್ನ್‍ಬಿಲ್ ಉತ್ಸವಕ್ಕೆ ಹೊರಜಿಲ್ಲೆ ಹೊರರಾಜ್ಯಗಳಿಂದಲೂ ಪಕ್ಷಿತಜ್ಞರು ಬರಲಿದ್ದಾರೆ. ಉತ್ಸವ ಯಶಸ್ಸಿಗೆ ಸ್ಥಳೀಯರ ಸಹಕಾರವೂ ಅಗತ್ಯ
ಸಂತೋಷ ಚೌಹಾಣ್ ದಾಂಡೇಲಿ ಎಸಿಎಫ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.