ADVERTISEMENT

ದಾಂಡೇಲಿ: ದಸರಾ ಸಂಭ್ರಮಕ್ಕೆ ದಾಂಡಿಯಾ ಬೆರಗು

ದಾಂಡೇಲಿಯ ವಿವಿಧೆಡೆ ನವರಾತ್ರಿ ಸಡಗರವನ್ನು ಹೆಚ್ಚಿಸಿದ ನೃತ್ಯ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2022, 15:58 IST
Last Updated 29 ಸೆಪ್ಟೆಂಬರ್ 2022, 15:58 IST
ದಾಂಡೇಲಿಯಲ್ಲಿ ಮೊದಲ ಬಾರಿಗೆ ದುರ್ಗಾದೇವಿ ಪ್ರತಿಮೆ ಪ್ರತಿಷ್ಠಾಪನೆ ಮಾಡಿರುವುದು
ದಾಂಡೇಲಿಯಲ್ಲಿ ಮೊದಲ ಬಾರಿಗೆ ದುರ್ಗಾದೇವಿ ಪ್ರತಿಮೆ ಪ್ರತಿಷ್ಠಾಪನೆ ಮಾಡಿರುವುದು   

ದಾಂಡೇಲಿ: ಎರಡು ವರ್ಷಗಳಿಂದ ವೈಭವ ಕಳೆದುಕೊಂಡಿದ್ದ ದಸರಾ ಹಬ್ಬವು, ನಗರದಲ್ಲಿ ಈ ಬಾರಿ ಮತ್ತದೇ ವೈಭವದೊಂದಿಗೆ ಮರಳಿದೆ. ಸಾಂಪ್ರದಾಯಿಕ ದಾಂಡಿಯಾ ನೃತ್ಯವು ನವರಾತ್ರಿಯ ಹಬ್ಬದ ಸಡಗರವನ್ನು ಹೆಚ್ಚಿಸಿದೆ.

ಡಿ.ಎಫ್.ಎ ಕಾರ್ಖಾನೆ ಮತ್ತು ಕಾಗದ ಕಾರ್ಖಾನೆಯು ಆರಂಭವಾದ ನಂತರ ಉತ್ತರ ಭಾರತದಿಂದ ವಲಸೆ ಬಂದ ಮಾರ್ವಾಡಿ ಸಮುದಾಯದವರು, ದಾಂಡೇಲಿಗೆ ‘ದಾಂಡಿಯಾ’ ನೃತ್ಯವನ್ನು ಪರಿಚಯಿಸಿದರು.

ದುಷ್ಟಶಕ್ತಿಯ ವಿರುದ್ಧ ದುರ್ಗಾದೇವಿಯ ವಿಜಯವನ್ನು ಸಂಭ್ರಮಿಸುವ, ದುರ್ಗಾದೇವಿ ಮತ್ತು ಮಹಿಷಾಸುರನ ನಡುವೆ ನಡೆಯುವ ಯುದ್ಧದ ದೃಶ್ಯಗಳು ಸುಂದರ ನೃತ್ಯವಾಗಿವೆ. ನೃತ್ಯಕ್ಕೆ ಅಲಂಕೃತ ಕೋಲುಗಳು, ದುರ್ಗೆ ಮತ್ತು ಮಹಿಷಾಸುರನ ಖಡ್ಗವನ್ನು ಪ್ರತಿನಿಧಿಸುತ್ತವೆ. ಅದಕ್ಕಾಗಿಯೇ ಇದನ್ನು ಖಡ್ಗ ನೃತ್ಯ ಎಂದೂ ಕರೆಯುತ್ತಾರೆ.

ADVERTISEMENT

ಹೆಚ್ಚಾಗಿ ಮಹಿಳೆಯರೇ ಭಾಗವಹಿಸುತ್ತಿದ್ದರು, ಇತ್ತೀಚೆಗೆ ಪುರುಷರೂ ನೃತ್ಯಕ್ಕೆ ಹೆಜ್ಜೆ ಹಾಕುತ್ತಾರೆ. ನೂರಾರು ಮಂದಿ ವೃತ್ತಾಕಾರದಲ್ಲಿ ಹೆಜ್ಜೆ ಹಾಕುವುದನ್ನು ನೋಡಲು ಸಾವಿರಾರು ಜನ ಜಮಾಯಿಸುತ್ತಾರೆ.

‘ಇದೇ ಮೊದಲ ಬಾರಿಗೆ ನಗರಸಭೆಯ ಹಳೇ ಕಚೇರಿಯ ಆವರಣದಲ್ಲಿ ಸಾರ್ವಜನಿಕ ದುರ್ಗಾ ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಗಿದೆ. ಒಂಬತ್ತು ದಿನ ಉಪವಾಸ, ವ್ರತ ಆಚರಣೆ ಮಾಡುತ್ತಾರೆ. ಸಂಜೆ ವೇಳೆಗೆ ಎಲ್ಲರೂ ಜೊತೆ ಸೇರಿಕೊಂಡು ದಾಂಡಿಯಾಕ್ಕೆ ಹೆಜ್ಜೆ ಹಾಕಿ ದೈವೀಕತೆಯನ್ನು ಸಂಭ್ರಮಿಸುತ್ತಾರೆ’ ಎನ್ನುತ್ತಾರೆ ದುರ್ಗಾ ಉತ್ಸವ ಸಮಿತಿ ಅಧ್ಯಕ್ಷ ಟಿ.ಎಸ್.ಬಾಲಮಣಿ.

‘ದಸರಾ ಹಬ್ಬದ ಆಚರಣೆಯು ನಮ್ಮ ಸಂಸ್ಕೃತಿ, ಸಂಪ್ರದಾಯವನ್ನು ಮುಂದಿನ ಪೀಳಿಗೆಗೆ ಸಾಗಿಸುವುದು, ನಮ್ಮ ಮೂಲ ನೆಲೆಯನ್ನು ಹಾಗೂ ಹಿರಿಯರ ಮಾರ್ಗವನ್ನು ನೆನಪಿಸುತ್ತದೆ’ ಎನ್ನುತ್ತಾರೆ ರಜಪೂತ ಸಮುದಾಯದವರೂ ಆಗಿರುವ ನಗರಸಭೆ ಸದಸ್ಯ ಮೋಹನ ಹಲವಾಯಿ.

ಎರಡು ವರ್ಷಗಳಿಂದ ಕೋವಿಡ್ ಕಾರಣದಿಂದ ನಗರದಲ್ಲಿ ದಾಂಡಿಯಾ ಆಯೋಜನೆಗೆ ತಾಲ್ಲೂಕು ಆಡಳಿತವು ಅವಕಾಶ ನೀಡಿರಲಿಲ್ಲ. ಈ ಬಾರಿ ನಗರದಲ್ಲಿ 25 ‘ದಾಂಡಿಯಾ’ ಸಮಿತಿಗಳು ಹಾಗೂ ಗ್ರಾಮೀಣ ಭಾಗದಲ್ಲಿ ಮೂರು ಸಮಿತಿಗಳು ಆಯೋಜಿಸಿವೆ.

‘ಹಳೆಯ ನಗರಸಭೆ ಆವರಣ, ಸುಭಾಷ ನಗರ, ಅಂಬೇವಾಡಿ, ವಿನಾಯಕ ನಗರ, ಅಲೈಡ್ ಏರಿಯಾ, ಬಂಗೂರನಗರದಲ್ಲಿ ದಾಂಡಿಯಾ ನೃತ್ಯಕ್ಕೆ ಅನುಮತಿ ನೀಡಲಾಗಿದೆ. ಸರ್ಕಾರದ ನಿಯಮ ಪಾಲನೆಯೊಂದಿಗೆ ಹಬ್ಬ ಆಚರಿಸಲು ಸಮಿತಿಗಳಿಗೆ ತಿಳಿಸಲಾಗಿದೆ’ ಎಂದು ನಗರ ಠಾಣೆಯ ಪಿ.ಎಸ್.ಐ ಕಿರಣ ಪಾಟೀಲ ಹೇಳಿದರು.

ರಾಮಲೀಲಾ, ಸಿಡಿಮದ್ದು ಪ್ರದರ್ಶನ:‘ಅನಿವಾರ್ಯ ಕಾರಣದಿಂದ ಸ್ಥಗಿತಗೊಂಡ ಸಿಡಿಮದ್ದು ಪ್ರದರ್ಶನವನ್ನು ಈ ವರ್ಷ ಮತ್ತೆ ಪ್ರಾರಂಭಿಸಲಾಗುವುದು. ರಾಮ ಲೀಲಾ ಉತ್ಸವವನ್ನು ವಿಜೃಂಭಣೆಯಿಂದ ರಾವಣ, ವಿಭೂಷಣ ಪ್ರತಿಕೃತಿಗಳನ್ನು ದಹಿಸುವ ಮೂಲಕ ಆಚರಿಸಲು ನಿರ್ಧರಿಸಲಾಗಿದೆ’ ಎಂದು ವೆಸ್ಟ್ ಕೋಸ್ಟ್ ಪೇಪರ್ ಮಿಲ್ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ ತಿವಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.